ಬೆಳಗುಲಿಯಲ್ಲಿ ಕೈತೋಟಗಳ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮ
ಹುಳಿಯಾರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಕೇಂದ್ರ ಸಭೆಯು ಬೆಳಗುಲಿ ಗ್ರಾಮದ ದುರ್ಗಮ್ಮ ದೇವಾಲಯದ ಆವರಣದಲ್ಲಿ ನಡೆಯಿತು.
ಸಭೆಯಲ್ಲಿ ಕೃಷಿ ಅಧಿಕಾರಿ ಪ್ರಕಾಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನುಷ್ಯನ ಆಯುಷ್ಯ ಕ್ಷೀಣಿಸುತ್ತಿರುವುದಕ್ಕೆ ಪ್ರಮುಖ ಕಾರಣ ರಾಸಾಯನಿಕಯುಕ್ತ ಸೊಪ್ಪು, ತರಕಾರಿ, ಹಣ್ಣು, ನೀರು ಹಾಗೂ ಗಾಳಿಯೇ ಕಾರಣವಾಗಿದೆ ಎಂದು ಹೇಳಿದರು. ಕೈತೋಟಗಳನ್ನು ನಿರ್ಮಿಸಿ, ರಾಸಾಯನಿಕ ಮುಕ್ತ ತರಕಾರಿಗಳನ್ನು ಬೆಳೆದು ತಿಂದಾಗ ಮಾತ್ರ ಆರೋಗ್ಯ ಹಾಗೂ ರೋಗಮುಕ್ತ ಜೀವನ ಸಾಧ್ಯವೆಂದು ಅವರು ಸಲಹೆ ನೀಡಿದರು.
ಆರ್ಥಿಕ ಸಾಕ್ಷರತಾ ಸಲಹೆಗಾರ ಆರ್. ಎಂ. ಕುಮಾರಸ್ವಾಮಿ ಮಾತನಾಡಿ, ಕೇವಲ 20 ರೂ. ವಾರ್ಷಿಕ ಕಂತು ಪಾವತಿಸಿ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗೆ ನೋಂದಾಯಿಸಿಕೊಂಡಲ್ಲಿ ಹಾವು ಕಚ್ಚಿ, ನೀರಿಗೆ ಬಿದ್ದು, ಸಿಡಿಲು ಬಡಿದು, ಕರೆಂಟ್ ಶಾಕ್ ಅಥವಾ ಇತರ ಆಕಸ್ಮಿಕಗಳಿಂದ ಮರಣ ಸಂಭವಿಸಿದ ಸಂದರ್ಭಗಳಲ್ಲಿ 2 ಲಕ್ಷ ರೂ.ಗಳ ವಿಮಾ ಮೊತ್ತ ಲಭಿಸುವುದಾಗಿ ಮಾಹಿತಿ ನೀಡಿದರು.
ಕೇಂದ್ರ ಸಭೆಗೆ ಬೆಳಗುಲಿ, ಯರೆಕಟ್ಟೆ, ರಂಗಾಪುರ, ಪಾಪನಕೋಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ