ವಿಷಯಕ್ಕೆ ಹೋಗಿ

ಮಾನವೀಯತೆಯ ಮರೆತ ಆಡಳಿತ: ಹುಳಿಯಾರಿನಲ್ಲಿ 16 ದಿನಗಳಿಂದ ಧರಣಿ, ಮೂಲಸೌಕರ್ಯಕ್ಕೂ ನಿರಾಕರಣೆ - ಜಿಲ್ಲಾಡಳಿತದ ಮೌನವೇಕೆ?


ಮಾನವೀಯತೆಯ ಮರೆತ ಆಡಳಿತ: ಹುಳಿಯಾರಿನಲ್ಲಿ 16 ದಿನಗಳಿಂದ ಧರಣಿ, ಮೂಲಸೌಕರ್ಯಕ್ಕೂ ನಿರಾಕರಣೆ - ಜಿಲ್ಲಾಡಳಿತದ ಮೌನವೇಕೆ?

---------

ವರದಿ : ನರೇಂದ್ರಬಾಬು-ಹುಳಿಯಾರು -9448760070

ದಿನಾಂಕ: 25-10-2025

--------


ಹುಳಿಯಾರು: 
ಕಳೆದ 16 ದಿನಗಳಿಂದ ಹುಳಿಯಾರು ಪಟ್ಟಣ ಪಂಚಾಯಿತಿ  ಮುಂದೆ ತಮ್ಮ ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ನಡೆಸುತ್ತಿರುವ ರೈತ ಸಂಘದವರ ಮೇಲೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತೋರುತ್ತಿರುವ ಅಮಾನವೀಯ ಮತ್ತು ಉದಾಸೀನದ ಧೋರಣೆಯು ತೀವ್ರ ಖಂಡನೆಗೆ ಒಳಗಾಗಿದೆ. ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸುತ್ತಿರುವ ಪ್ರತಿಭಟನಾ ನಿರತರಿಗೆ ಕನಿಷ್ಠ ಮಾನವೀಯ ಸೌಲಭ್ಯಗಳಾದ ನೀರು, ಬೆಳಕು ಮತ್ತು ಮಳೆಯಿಂದ ರಕ್ಷಣೆಗಾಗಿ ತಾತ್ಕಾಲಿಕ ಸ್ಥಳಾವಕಾಶವನ್ನೂ ಒದಗಿಸದಿರುವುದು ಸ್ಥಳೀಯ ಆಡಳಿತದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಬೇಡಿಕೆಗಳು ನ್ಯಾಯಸಮ್ಮತ; ನಿರ್ಲಕ್ಷ್ಯ ಅಕ್ಷಮ್ಯ:

ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಮುಖವಾದ ಬೇಡಿಕೆಗಳಿಗಾಗಿ ಈ ಪ್ರತಿಭಟನೆ ನಡೆಯುತ್ತಿದೆ.

ಸಂತೆ ಸ್ಥಳಾಂತರ: ಇಕ್ಕಟ್ಟಾದ ಸ್ಥಳದಲ್ಲಿ ನಡೆಯುತ್ತಿದ್ದ ಸಂತೆಯನ್ನು ವಿಶಾಲವಾದ ಎಪಿಎಂಸಿ ಜಾಗಕ್ಕೆ ಸ್ಥಳಾಂತರಿಸಿ, ರೈತ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವುದು.

 ತ್ಯಾಜ್ಯ ಘಟಕ ಸ್ಥಾಪನೆ: ಹುಳಿಯಾರಿನಲ್ಲಿ ಶೇಖರವಾಗುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಗ್ರಹ.

ಕಳೆದ 16 ದಿನಗಳಿಂದ ಪ್ರತಿಭಟನಾಕಾರರು ಮಳೆ, ಚಳಿಗಾಳಿ, ಹಗಲು -ರಾತ್ರಿ ಎನ್ನದೆ ಪಟ್ಟಣ ಪಂಚಾಯಿತಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರಾತ್ರಿಯ ಕತ್ತಲಲ್ಲಿಯೇ ಅಡುಗೆ ಮಾಡುತ್ತಿದ್ದಾರೆ, ಮಲಗುತ್ತಿದ್ದಾರೆ.

*ಕನಿಷ್ಠ ಸೌಲಭ್ಯಕ್ಕೂ ನಿರಾಕರಣೆ:*

ಅತ್ಯಂತ ಗಂಭೀರ ವಿಷಯವೆಂದರೆ, ಧರಣಿ ನಿರತರು ಮಳೆಯಿಂದ ರಕ್ಷಣೆ ಪಡೆಯಲು ತಮ್ಮ ತರಕಾರಿ ಮತ್ತು ಅಡುಗೆ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಸ್ವಲ್ಪ ಜಾಗ ಕೊಡಿ ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯನ್ನು ಕೋರಿದ್ದಾರೆ. ಆದರೆ, ಅವರು ನಾನಾ ಕಾರಣಗಳನ್ನು ನೀಡಿ ಸ್ಥಳಾವಕಾಶ ನೀಡಲು ನಿರಾಕರಿಸಿದ್ದಾರೆ. ತಹಸಿಲ್ದಾರ್, ಸ್ಥಳೀಯ ಶಾಸಕರು ಮತ್ತು ಪುರಸಭೆಯ ಯೋಜನಾಧಿಕಾರಿಗಳ ಬಳಿಯೂ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

 *ನೀರಿನ ಸೌಕರ್ಯ ಇಲ್ಲ: ಪಂಚಾಯಿತಿಯಿಂದ ಕನಿಷ್ಠ ಕುಡಿಯುವ ನೀರಿನ ಸೌಕರ್ಯವನ್ನೂ ಒದಗಿಸಿಲ್ಲ.

*ರಾತ್ರಿ ಬೆಳಕಿನ ವ್ಯವಸ್ಥೆಯೂ ಇಲ್ಲ: ಒಂದೆಡೆ ಕತ್ತಲಿನಲ್ಲಿ, ಮಳೆಯಲ್ಲಿ ನೆನೆದ ಸೌದೆಯಲ್ಲಿ ಅಡುಗೆ ಮಾಡುವ ಪರಿಸ್ಥಿತಿ ಬಂದಿದೆ. ರಾತ್ರಿಯ ಕತ್ತಲಲ್ಲಿಯೇ ಅಡುಗೆ ಮಾಡುವ ದೃಶ್ಯ ಇಲ್ಲಿ ತಿರುಗಾಡುತ್ತಿರುವ ಎಲ್ಲರಿಗೂ ಕಂಡು ಬರುತ್ತಿದ್ದು ,ಇದು ಕನಿಷ್ಠ ಬೆಳಕಿನ ವ್ಯವಸ್ಥೆಯನ್ನೂ ಒದಗಿಸದಿರುವ ಅಧಿಕಾರಿಗಳ ನಿರ್ಲಕ್ಷತೆಯನ್ನು ಎದ್ದು ತೋರಿಸುತ್ತಿದೆ.

*ಅಧಿಕಾರಿಗಳ ಬೇಜವಾಬ್ದಾರಿ*: ಅಧಿಕಾರಿಗಳು 'ಈ ಪ್ರತಿಭಟನೆ ನಮಗೂ ಸಂಬಂಧವಿಲ್ಲ' ಎನ್ನುವಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಪ್ಲಾಸ್ಟಿಕ್ ಗುಡಾರ, ಗೂಡಂಗಡಿಯ ಮೊರೆ:

ಅಧಿಕಾರಿಗಳ ನಿರ್ಲಕ್ಷತೆಗೆ ಬೇಸತ್ತ ಪ್ರತಿಭಟನಾಕಾರರು ಇದೀಗ ತಾವೇ ಮಳೆಯಲ್ಲಿ ನೆನೆಯದಂತೆ ಪ್ಲಾಸ್ಟಿಕ್‌ನ ಗುಡಾರ ನಿರ್ಮಿಸಿಕೊಂಡಿದ್ದಾರೆ. ದಿನಸಿ ಮತ್ತಿತರೆ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಗೂಡಂಗಡಿಯನ್ನೇ ತಂದು ಪಂಚಾಯಿತಿ ಮುಂದೆ ಇಟ್ಟಿದ್ದಾರೆ. 

ಜಿಲ್ಲಾಡಳಿತದ ಜವಾಬ್ದಾರಿ ಏನು?

ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆ ಸಂವಿಧಾನಬದ್ಧ ಹಕ್ಕು. ಇಂತಹ ಸಂದರ್ಭದಲ್ಲಿ ಪ್ರತಿಭಟನಾ ನಿರತರಿಗೆ ಮಾನವೀಯತೆಯ ದೃಷ್ಟಿಯಿಂದ ಕನಿಷ್ಠ ಮೂಲಭೂತ ಸೌಲಭ್ಯಗಳಾದ ನೀರು, ತಾತ್ಕಾಲಿಕ ಆಶ್ರಯ/ಸ್ಥಳಾವಕಾಶ, ಬೆಳಕುಒದಗಿಸುವುದು ಸ್ಥಳೀಯ ಆಡಳಿತದ ನೈತಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಯಾಗಿದೆ. ಕತ್ತಲಲ್ಲಿ, ಮಳೆಯಲ್ಲಿ ಮಲಗುತ್ತಿರುವ ರೈತರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡದೆ ನಿರ್ಲಕ್ಷಿಸುವುದರಿಂದ ಏನಾದರೂ ಅನಾಹುತವಾದರೆ ಯಾರು ಹೊಣೆ? ಜಿಲ್ಲಾಡಳಿತಕ್ಕೂ ಇದಕ್ಕೂ ಜವಾಬ್ದಾರಿ ಇಲ್ಲವೇ?

*ಉಪವಾಸ ಸತ್ಯಾಗ್ರಹದ ಎಚ್ಚರಿಕೆ*:

ಅಧಿಕಾರಿಗಳ ಸಬೂಬಿನ ಮಾತುಗಳಿಂದ ಮತ್ತು ನಿರ್ಲಕ್ಷ್ಯದಿಂದ ಬೇಸತ್ತಿರುವ ಪ್ರತಿಭಟನಾಕಾರರು ಇದೀಗ ಅಂತಿಮ ನಿರ್ಧಾರಕ್ಕೆ ಬಂದಿದ್ದು, ಒಂದು ವಾರದ ಗಡುವು ನೀಡಿದ್ದಾರೆ. ಈ ಅವಧಿಯಲ್ಲಿ ಬೇಡಿಕೆಗಳು ಈಡೇರದಿದ್ದಲ್ಲಿ, ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳೇ ಗಮನಿಸಿ, ಇತ್ತೀಚೆಗೆ ದಿನವಿಡೀ ಮಳೆ ಬೀಳುತ್ತಿದ್ದು, ಮಾನವೀಯತೆಯ ನೆಲೆಯಲ್ಲಿ ತಕ್ಷಣ ಮಧ್ಯಪ್ರವೇಶಿಸಿ:

ಜಿಲ್ಲಾ ಆಡಳಿತವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಿ, ಪ್ರತಿಭಟನಾ ನಿರತರಿಗೆ ತಕ್ಷಣವೇ ಕುಡಿಯುವ ನೀರು, ರಾತ್ರಿ ಬೆಳಕು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಸೂಕ್ತ ಸ್ಥಳಾವಕಾಶವನ್ನು ಕಲ್ಪಿಸಿಕೊಡಬೇಕು. ಬೇಡಿಕೆಗಳ ಈಡೇರಿಕೆಯ ಕುರಿತು ತಕ್ಷಣ ಅಧಿಕಾರಿಗಳೊಂದಿಗೆ ಸಭೆ ನಡೆಸಿ, 16 ದಿನಗಳ ಹೋರಾಟಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. 

ಪ್ರತಿಭಟನಾಕಾರರ ಹಕ್ಕು ಮತ್ತು ಮಾನವೀಯತೆಯನ್ನು ಎತ್ತಿಹಿಡಿಯುವ ತುರ್ತು ಜವಾಬ್ದಾರಿ ಜಿಲ್ಲಾಧಿಕಾರಿಗಳ ಮೇಲಿದೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...