---------------
✍️ ವರದಿ : ನರೇಂದ್ರಬಾಬು-ಹುಳಿಯಾರು-9448760070
ಹುಳಿಯಾರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವದ ಅಂಗವಾಗಿ ದೇಶಾದ್ಯಂತ ಆಯೋಜಿಸಲಾಗಿರುವ 'ಶತಾಬ್ಧಿ ಪಥ ಸಂಚಲನ'ವು ಹುಳಿಯಾರಿನಲ್ಲಿ ಭಾನುವಾರ ಯಶಸ್ವಿಯಾಗಿ ನಡೆಯಿತು. ನೂರಾರು ಆರ್‌ಎಸ್‌ಎಸ್ ಸ್ವಯಂಸೇವಕರು ಪೂರ್ಣ ಗಣವೇಶಧಾರಿಯಾಗಿ, ಸಂಪೂರ್ಣ ಶಿಸ್ತಿನಿಂದ ಪಥ ಸಂಚಲನದಲ್ಲಿ ಪಾಲ್ಗೊಂಡು ಗಮನ ಸೆಳೆದರು.ಶ್ರೀ ಪ್ರಸನ್ನ ಗಣಪತಿ ದೇವಾಲಯದ ಆವರಣದಲ್ಲಿ ಸೇರಿದ್ದ ಸ್ವಯಂಸೇವಕರು, ಭಗವಧ್ವಜಕ್ಕೆ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆ ಹೊರಟರು. ತೆರೆದ ವಾಹನದಲ್ಲಿ ಭಾರತಾಂಬೆ, ಆರ್‌ಎಸ್‌ಎಸ್ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಹಾಗೂ ಗುರೂಜಿ ಮಾಧವರಾವ್ ಸದಾಶಿವರಾವ್ ಗೋಲ್ವಾಲ್ಕರ್ ಅವರ ಭಾವಚಿತ್ರಗಳನ್ನು ಇರಿಸಲಾಗಿತ್ತು. ಘೋ಼ಷ್ ಹಿನ್ನೆಲೆಯಲ್ಲಿ ಸಾಗಿದ ಈ ಪಥ ಸಂಚಲನದಲ್ಲಿ ಗಣವೇಶಧಾರಿಗಳು ಶಿಸ್ತಿನಿಂದ ಹೆಜ್ಜೆ ಹಾಕಿದರು.
ಪಥ ಸಂಚಲನ ಸಾಗಿದ ಮಾರ್ಗದುದ್ದಕ್ಕೂ ಸಾರ್ವಜನಿಕರು ಮತ್ತು ಆರ್‌ಎಸ್‌ಎಸ್ ಅಭಿಮಾನಿಗಳು ಪರಮ ಪವಿತ್ರ ಭಗವಾಧ್ವಜಕ್ಕೆ ಹಾಗೂ ಸ್ವಯಂಸೇವಕರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಮರ್ಪಿಸಿದರು.
ಜಿಲ್ಲಾ ಸಂಘಚಾಲಕರಾದ ಶ್ರೀಧರ್, ಜಿಲ್ಲಾ ಸಹಕಾರ್ಯವಾಹ ಭರತ್ ಹುಳಿಯಾರು, ಜಿಲ್ಲಾ ಪ್ರಚಾರಕ್ ಮನಿಷ್ ಆರೂರು ಸೇರಿದಂತೆ ಮತ್ತಿತರ ಪ್ರಮುಖರು ಮೆರವಣಿಗೆಯ ನೇತೃತ್ವ ವಹಿಸಿದ್ದರು. ತಾಲೂಕಿನ ವಿವಿಧಡೆಯಿಂದ ಆರ್‌ಎಸ್‌ಎಸ್ ಪ್ರಮುಖರು ಆಗಮಿಸಿದ್ದರು.
ಪಟ್ಟಣದ ಗಣಪತಿ ದೇವಸ್ಥಾನದಿಂದ ಹೊರಟ ಆಕರ್ಷಕ ಪಥಸಂಚಲನವು ಗಾಂಧಿಪೇಟೆ, ರಾಮ ಗೋಪಾಲ್ ಸರ್ಕಲ್, ಬಿ.ಹೆಚ್. ರಸ್ತೆ, ಕನಕ ವೃತ್ತ, ಬಸ್ ನಿಲ್ದಾಣ, ಹುಳಿಯಾರಮ್ಮ ದೇವಸ್ಥಾನ ರಸ್ತೆ, ಡಾ. ರಾಜಕುಮಾರ್ ರಸ್ತೆ, ದುರ್ಗಮ್ಮನ ಗುಡಿ ಬೀದಿ ಮತ್ತು ಕೆಂಚಮ್ಮನ ದೇವಸ್ಥಾನದ ಬೀದಿಯ ಮೂಲಕ ಸಾಗಿ ಅಂತಿಮವಾಗಿ ಗಣಪತಿ ದೇವಸ್ಥಾನದ ಆವರಣದಲ್ಲಿ ಮುಕ್ತಾಯಗೊಂಡಿತು.
ಆರ್‌ಎಸ್‌ಎಸ್‌ನ ಧ್ಯೇಯ: ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಯವಾಹ ರವೀಂದ್ರ ತಗ್ಗಿಮನೆ ಅವರು, ಹಿಂದೂ ಪರಂಪರೆ ಮತ್ತು ಸನಾತನ ಸಂಸ್ಕೃತಿಯ ರಕ್ಷಣೆ ಹಾಗೂ ಹಿಂದೂ ಸಮಾಜದ ಸಾಂಸ್ಕೃತಿಕ ಪುನರುಜ್ಜೀವನಕ್ಕಾಗಿ ಆರ್‌ಎಸ್‌ಎಸ್ ಶ್ರಮಿಸುತ್ತಿದೆ ಎಂದರು.ಸಂಘವು ಈ ಶತಮಾನೋತ್ಸವ ವರ್ಷದಲ್ಲಿ ಒಟ್ಟು ಆರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಶಾಖೆ ಮತ್ತು ಮಿಲನ್ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲು ಶ್ರಮಿಸಲಾಗುವುದು ಎಂದು ರವೀಂದ್ರ ತಗ್ಗಿಮನೆ ತಿಳಿಸಿದರು.ನವೆಂಬರ್ ತಿಂಗಳಲ್ಲಿ 18 ರಿಂದ 28 ವರ್ಷ ವಯಸ್ಸಿನ ಯುವಕರಿಗಾಗಿ ಒಂದು ದಿನದ ಯುವ ಸಮಾವೇಶವನ್ನು ಆಯೋಜಿಸಲಾಗಿದೆ. ಡಿಸೆಂಬರ್‌ನಲ್ಲಿ ಮನೆ ಮನೆ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.ಸ್ವಾಮಿ ವಿವೇಕಾನಂದರ ಮಾತಿನಂತೆ, ನೂರು ಜನ ವಜ್ರಕಾಯದ ವ್ಯಕ್ತಿಗಳನ್ನು ಕೊಡಿ, ಭಾರತದ ಚಿತ್ರಣವನ್ನೇ ಬದಲಾಯಿಸುತ್ತೇವೆ ಎಂಬ ದೃಷ್ಟಿಯಲ್ಲಿ ಸಂಘವು ಕೆಲಸ ಮಾಡುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ