------------------
ಹುಳಿಯಾರಿನಲ್ಲಿ ಶಿಸ್ತಿನಿಂದ ಜರುಗಿದ ಆರ್‌ಎಸ್‌ಎಸ್ ವಿಜಯದಶಮಿ
-------------------
✍️ ನರೇಂದ್ರಬಾಬು-ಹುಳಿಯಾರು-9448760070
ಹುಳಿಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ ಶತಮಾನೋತ್ಸವದ ಸಂಭ್ರಮದೊಂದಿಗೆ ವಿಜಯದಶಮಿ ಉತ್ಸವವನ್ನು ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ದೇವಾಲಯದ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಿತು. ಈ ಸಂದರ್ಭದಲ್ಲಿ ದಕ್ಷಿಣ ಪ್ರಾಂತ ಬಾಲಗೋಕುಲ ಸಂಯೋಜಕರಾದ ಉಮೇಶ್ ಅವರು ಭೌದ್ಧಿಕ್ ನೀಡುತ್ತಾ, ಸಂಘದ ನೂರು ವರ್ಷದ ಪಯಣ ದೇಶದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಚಿತ್ರಣವನ್ನೇ ಬದಲಾಯಿಸುವಂತಾಗಿದೆ. ವ್ಯಕ್ತಿ ನಿರ್ಮಾಣವೇ ಸಂಘದ ಮೂಲ ಗುರಿ ಎಂದು ಸ್ಪಷ್ಟಪಡಿಸಿದರು.ಸಂಘಟನೆಯ ಅಗತ್ಯತೆ ಮತ್ತು ಇತಿಹಾಸ : ಉಮೇಶ್ ಅವರು ಮಾತನಾಡುತ್ತಾ, “ಡಾ. ಕೇಶವ ಬಲಿರಾಂ ಹೆಡಗೇವಾರ್ ಅವರು 1925ರ ವಿಜಯದಶಮಿಯ ದಿನ ಆರ್‌ಎಸ್‌ಎಸ್ ಸ್ಥಾಪಿಸಿದರು. ಹಿಂದೂ ಸಮಾಜವನ್ನು ಬಲಿಷ್ಠವಾಗಿಸಿ, ಸಂಘಟನೆಯ ಶಕ್ತಿಯಿಂದ ಸಮಾಜರಕ್ಷಣೆಯ ಕಾರ್ಯ ಮುಂದುವರಿಸುವುದು ಅವರ ಉದ್ದೇಶವಾಗಿತ್ತು. ರಾಮಕೃಷ್ಣ ಪರಮಹಂಸ, ದಯಾನಂದ ಸರಸ್ವತಿ, ಬಸವಣ್ಣ, ಶಂಕರಾಚಾರ್ಯ, ಮಧ್ವಾಚಾರ್ಯ ಮುಂತಾದ ಮಹಾಪುರುಷರು ಧರ್ಮವನ್ನು ಉಳಿಸಲು ಮಾಡಿದ ಕಾರ್ಯಗಳಿಗೆ ಸಂಘಟನೆಯ ರೂಪ ನೀಡಿದವರು ಹೆಡಗೇವಾರ್‌ಜಿ” ಎಂದರು.
ಸ್ವಾತಂತ್ರ್ಯ ಹೋರಾಟದಿಂದ ತುರ್ತು ಪರಿಸ್ಥಿತಿವರೆಗೆ : ಸಂಘದ ಸ್ವಯಂಸೇವಕರು ದೇಶಕ್ಕಾಗಿ ಅನೇಕ ಬಲಿದಾನಗಳನ್ನು ನೀಡಿದ್ದಾರೆ ಎಂಬುದನ್ನು ಅವರು ಸ್ಮರಿಸಿದರು. ಸ್ವಾತಂತ್ರ್ಯ ಹೋರಾಟ, ಭಾರತ-ಪಾಕಿಸ್ತಾನ ವಿಭಜನೆಯ ದುರಂತ, ತುರ್ತು ಪರಿಸ್ಥಿತಿ—ಈ ಎಲ್ಲ ಸಂದರ್ಭಗಳಲ್ಲಿ ಸಾವಿರಾರು ಸ್ವಯಂಸೇವಕರು ಪ್ರಾಣತ್ಯಾಗ ಮಾಡಿದರು. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯವು ಅವರ ತ್ಯಾಗದ ಫಲ ಎಂದು ಅವರು ಒತ್ತಿ ಹೇಳಿದರು.
ಶಾಖೆಗಳ ಮಹತ್ವ : ಆರ್‌ಎಸ್‌ಎಸ್ ಶಾಖೆ ಎಂದರೆ ಕೇವಲ ವ್ಯಾಯಾಮ ಅಥವಾ ಆಟಗಳ ಕೇಂದ್ರವಲ್ಲ. ಶ್ಲೋಕ, ದೇಶಭಕ್ತಿ ಗೀತೆಗಳು, ಮಹಾಪುರುಷರ ಕಥೆಗಳ ಮೂಲಕ ವ್ಯಕ್ತಿ ನಿರ್ಮಾಣ ಮಾಡುವ ಸ್ಥಳ ಅದು. ಈ ವ್ಯಕ್ತಿ ನಿರ್ಮಾಣವೇ ಇಂದು ದೇಶಕ್ಕೆ ಒಬ್ಬ ಉತ್ತಮ ಪ್ರಧಾನಿ, ಅನೇಕ ಮುಖ್ಯಮಂತ್ರಿಗಳನ್ನು ನೀಡಲು ಕಾರಣವಾಗಿದೆ ಎಂದು ಉಮೇಶ್ ತಿಳಿಸಿದರು.
ದೇಶ-ವಿದೇಶಕ್ಕೆ ಕಾರ್ಯವಿಸ್ತರಣೆ : ಸಂಘವು ಭಾರತದಲ್ಲಷ್ಟೇ ಅಲ್ಲ, 40-50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹಿಂದೂ ಸ್ವಯಂಸೇವಕ ಸಂಘದ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾ ಭಾರತಿಯ ಮೂಲಕ 30,000ಕ್ಕೂ ಹೆಚ್ಚು ಶಾಲೆಗಳನ್ನು ಸಂಘ ನಡೆಸುತ್ತಿದ್ದು, ಒಂದು ಕೋಟಿಗಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಗಳಲ್ಲಿ ಜ್ಞಾನ ಜೊತೆಗೆ ಶೀಲ ಮತ್ತು ದೇಶಭಕ್ತಿಗೆ ಆದ್ಯತೆ ನೀಡಲಾಗುತ್ತದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಹ ಯುವಕರಲ್ಲಿ ಸಂಘಟನಾ ಶಕ್ತಿ ಮತ್ತು ದೇಶಪ್ರೇಮ ಬೆಳೆಸುತ್ತಿದೆ ಎಂದರು.ನಿಸ್ವಾರ್ಥ ಪ್ರಚಾರಕರ ಸೇವೆ : ಸಂಘದ ಶಕ್ತಿ ಅದರ ನಿಸ್ವಾರ್ಥ ಪ್ರಚಾರಕರಲ್ಲಿ ಇದೆ. ಸುಮಾರು 5,000 ಮಂದಿ ಪ್ರಚಾರಕರು ತಮ್ಮ ಜೀವನವನ್ನೇ ಸಂಘಕ್ಕಾಗಿ ಅರ್ಪಿಸಿದ್ದಾರೆ. ಮದುವೆಯಾಗದೆ, ಕುಟುಂಬ-ಆರ್ಥಿಕ ಭಾವನೆಗಳನ್ನು ಬದಿಗಿಟ್ಟು, ಯಾವ ಸಂಬಳವಿಲ್ಲದೆ ಸಂಘ ಕಳುಹಿಸಿದ ಎಲ್ಲೆಡೆ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ತ್ಯಾಗಿಗಳಿಂದ ಸಂಘ ಬಲಿಷ್ಠವಾಗಿದೆ ಎಂದು ಉಮೇಶ್ ಹೇಳಿದರು.
ವನವಾಸಿ ಕಲ್ಯಾಣ ಮತ್ತು ರಾಷ್ಟ್ರೀಯ ಪರಿವರ್ತನೆ :ಸಂಘವು ವನವಾಸಿ ಕಲ್ಯಾಣ ಕಾರ್ಯಗಳಿಂದ ಗಿರಿಜನ ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ತಂದಿದೆ. ಇದರ ಉದಾಹರಣೆಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೀವನವನ್ನು ಉಲ್ಲೇಖಿಸಿದರು. ಅವರು ಬುಡಕಟ್ಟು ಪ್ರದೇಶದಿಂದ ರಾಷ್ಟ್ರಪತಿ ಸ್ಥಾನಕ್ಕೆ ಏರಲು ಕಾರಣವಾದದ್ದು ಸಂಘಟನಾ ಸಂಸ್ಕಾರವೇ ಎಂದರು.
ಸ್ವದೇಶಿ ಚಿಂತನೆ ಮತ್ತು ಸಂಸ್ಕೃತಿಯ ಅರಿವು :ಶತಮಾನೋತ್ಸವದ ಸಂಧರ್ಭದಲ್ಲಿ ಸಂಘವು “ಪಂಚ ಪರಿವರ್ತನೆ” ಎಂಬ ಹೊಸ ಸಂಕಲ್ಪವನ್ನು ಘೋಷಿಸಿದೆ. ಇದರ ಪ್ರಮುಖ ಅಂಶವೆಂದರೆ ಸ್ವದೇಶಿ ಚಿಂತನೆ. “ಸ್ವದೇಶಿ ಎಂದರೆ ಕೇವಲ ಸ್ಥಳೀಯ ವಸ್ತು ಬಳಕೆ ಮಾತ್ರವಲ್ಲ, ಜೀವನ ಶೈಲಿಯಲ್ಲಿಯೂ ಆ ಪರಿವರ್ತನೆ ತರಬೇಕು. ಉಡುಗೆ, ಆಹಾರ, ಭಾಷೆ ಎಲ್ಲದರಲ್ಲೂ ನಮ್ಮ ಸ್ವಭಾವ ಪ್ರತಿಬಿಂಬಿಸಬೇಕು. ಮಕ್ಕಳಿಗೆ ಇಂಗ್ಲಿಷ್ ಕಲಿಸುವುದರಲ್ಲಿ ತಪ್ಪಿಲ್ಲ, ಆದರೆ ಮಾತೃಭಾಷೆಯ ಗೌರವ ಮರೆಯಬಾರದು ಎಂದು ಅವರು ಹೇಳಿದರು.
ಇತಿಹಾಸದ ಅರಿವು : 1975ರ ತುರ್ತು ಪರಿಸ್ಥಿತಿಯಲ್ಲಿ ಸಾವಿರಾರು ಸ್ವಯಂಸೇವಕರು ನೀಡಿದ ಬಲಿದಾನವನ್ನು ಇಂದಿನ ಪೀಳಿಗೆ ಮರೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಇತಿಹಾಸವನ್ನು ನೆನಪಿಸುವುದು, ಯುವ ಪೀಳಿಗೆಯಲ್ಲಿ ದೇಶಪ್ರೇಮವನ್ನು ಬೆಳೆಸುವುದು ನಮ್ಮ ಹೊಣೆಗಾರಿಕೆ ಎಂದು ಉಮೇಶ್ ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಚಾರಿಟಬಲ್ ಟ್ರಸ್ಟ್ (ರಿ) ಅಧ್ಯಕ್ಷರಾದ ಡಿ.ಎಸ್.ಮೋಹನ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಾಕಷ್ಟು ಸಂಖ್ಯೆಯ ಸ್ವಯಂಸೇವಕರು ಗಣವೇಷದಲ್ಲಿ ಶಿಸ್ತಿನಿಂದ ಭಾಗವಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ