ಇಲ್ಲಿನ ಶಂಕರಪುರ ಬಡಾವಣೆಯಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದ ಸುಮಾರು 11 ಗುಡಿಸಲುಗಳು ಸಂಪೂರ್ಣ ಭಸ್ಮವಾಗಿದ್ದು,ಅದರಲ್ಲಿ ವಾಸಿಸುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿ ಬೀದಿಗೆ ಬಿದ್ದಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.
ಬುಧವಾರ ಮಧ್ಯರಾತ್ರಿ ಸರಿಸುಮಾರು 12ರ ಸಮಯದಲ್ಲಿ ಆಕಸ್ಮಿಕವಾಗಿ ಒಂದು ಗುಡಿಸಲಿನಲ್ಲಿ ಹತ್ತಿಕೊಂಡ ಬೆಂಕಿ ಕೆಲವೇ ಸಮಯದಲ್ಲಿ ತನ್ನ ಕೆನ್ನಾಲಿಗೆಯಿಂದ ತನ್ನ ಸುತ್ತಲಿನ 1೦ ಗುಡಿಸಲಿಗೆ ವ್ಯಾಪಿಸಿದ್ದರಿಂದ ಗುಡಿಸಲುಗಳು ಸಂಪೂರ್ಣ ಸುಟ್ಟುಕರಕಲಾಗಿವೆ. ಬೆಂಕಿಗಾಹುತಿಯಾಗಿರುವ ಗುಡಿಸಲುಗಳು ರಾಮಣ್ಣ,ರಂಗಸ್ವಾಮಿ, ದುರ್ಗಜ್ಜಿ,ರಂಗಮ್ಮ,ಶಬ್ಬೀನ,ಭಾಗ್ಯಮ್ಮ, ಸತೀಶ್,ರಂಗಣ್ಣ,ನಾಗಣ್ಣ, ದುರ್ಗಣ್ಣ,ಕೃಷ್ಣಪ್ಪ ಎಂಬುವರು ಎಂದು ತಿಳಿದು ಬಂದಿದ್ದು, ಓಲೆ,ಸೀರೆ,3ಸೈಕಲ್,ಹೊಲಿಗೆ ಯಂತ್ರ ಸೇರಿದಂತೆ ದಿನಸಿ ಪದಾರ್ಥಗಳು,ಮಕ್ಕಳ ಓದಿನ ಪುಸ್ತಕಗಳು,ಬಟ್ಟೆ-ಬರೆ,ಒಂದು ಬೈಕ್,ನಾರಿನ ಹಗ್ಗ ಹಾಗೂ ಸಾಕಿದ್ದ ಕೋಳಿಗಳು ಬೆಂಕಿಯ ಸುಳಿಗೆ ಸಿಕ್ಕಿ ಬೂದಿಯಾಗಿದ್ದು ಸುಮಾರು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.ಅಲ್ಲದೆ ಇದ್ದ ಸೂರನ್ನು ಕಳೆದುಕೊಂಡಿರುವ ಇವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ.ಇವರೀಗ ಇತರರ ಆಸರೆಯನ್ನು ಪಡೆಯುವಂತಾಗಿದೆ.
ಮಧ್ಯರಾತ್ರಿ ಪಕ್ಕದ ಗುಡಿಸಲಿನವರು ಬೆಂಕಿ ಎಂದು ಕೂಗಿದರು.ಆಗ ಎದ್ದು ನೋಡಿದಾಗ ಬೆಂಕಿ ನಮ್ಮ ಗುಡಿಸಲುಗಳ ಸುತ್ತಾ ಆವರಿಸಿತ್ತು,ಗಾಬರಿಯಿಂದ ಹುಟ್ಟ ಬಟ್ಟೆಯಲ್ಲೇ ಮಕ್ಕಳನ್ನು ಕರೆದುಕೊಂಡು ಗುಡಿಸಲಿಂದ ಹೊರ ಬಂದೆವು.ಹೊರಬಂದು ನೋಡುವಷ್ಟರಲ್ಲೇ ಬೆಂಕಿ ಸಂಪೂರ್ಣ ಗುಡಿಸಲುಗಳನ್ನು ಸುತ್ತುವರೆದ್ದಿತ್ತು.ಏನ್ನನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ,ಮಕ್ಕಳ ಓದಿನ ಪುಸ್ತಕ,ಬಟ್ಟೆ,ಆಹಾರ ಪದಾರ್ಥಗಳೇಲ್ಲಾ ಸುಟ್ಟಿದ್ದು,ಬೀದಿಗೆ ಬಿದ್ದಿದೇವೆ ಈಗ ನಮಗ್ಯಾರು ಗತಿ ಎಂದು ಗುಡಿಸಲು ಕಳೆದುಕೊಂಡ ಭಾಗ್ಯಮ್ಮ ಪತ್ರಿಕೆಯವರ ಮುಂದೆ ತಮ್ಮ ಆಳಲನ್ನು ತೋಡಿಕೊಂಡರು,
ದುರ್ಗಜ್ಜಿ ಎಂಬಾಕೆ ತನ್ನ ಸಣ್ಣ ಗುಡಿಸಲಿನಲ್ಲೇ ಚಿಕ್ಕದೊಂದು ಅಂಗಡಿಯನ್ನಿಟ್ಟುಕೊಂಡು ತನ್ನ ದಿನ ನಿತ್ಯದ ಜೀವನ ಸಾಗಿಸುತ್ತಿದ್ದು, ಅಂಗಡಿಯಲ್ಲಿದ್ದ ಎಲ್ಲಾ ಸರಕು ಸರಂಜಾಮುಗಳು ಬೆಂಕಿಗೆ ಬಲಿಯಾಗಿವೆ.
ತಹಶೀಲ್ದಾರ್ ಉಮೇಶ್ಚಂದ್ರ ಘಟನಾ ಸ್ಥಳಕ್ಕೆ ಆಗಮಿಸಿ ತಮ್ಮಿಂದಾಗು ಸಹಾಯವನ್ನು ಮಾಡುವುದಾಗಿ ತಿಳಿಸಿದರು.ತಾ.ಪಂ.ಅಧ್ಯಕ್ಷ ಸೀತಾರಾಂ ಗುಡಿಸಲು ಕಳೆದುಕೊಂಡು ಬೀದಿ ಪಾಲಾದ ನಿರ್ಗತಿಕರ ಕುಟುಂಬಗಳಿಗೆ ತಮ್ಮ ನಿಧಿಯಿಂದ ತಲಾ ಒಂದು ಸಾವಿರ ಪರಿಹಾರ ಹಣ ನೀಡುವುದಾಗಿ ತಿಳಿಸಿದರು. ತಾ.ಪಂ.ಉಪಾಧ್ಯಕ್ಷೆ ಬೀಬೀ ಫಾತೀಮಾ,ಜಿ.ಪಂ.ಸದಸ್ಯೆ ಮಂಜುಳಮ್ಮ,ಗ್ರಾ.ಪಂ.ಉಪಾಧ್ಯಕ್ಷೆ ವೆಂಕಟಮ್ಮ,ಸದಸ್ಯ ರಾಘವೇಂದ್ರ ನಿರ್ಗತಿಕರಿಗೆ ಸಾಂತ್ವಾನ ಹೇಳಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ