ಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ದಿನವಾದ ಶನಿವಾರ ಬೆಳಗಿನಿಂದಲೇ ಮನೆಗಳಲ್ಲಿ,ಗುಡಿಗೋಪುರಗಳಲ್ಲಿ ಶ್ರೀರಾಮನಿಗೆ ಮತ್ತು ಆಂಜನೇಯನಿಗೆ ವಿಶೇಷ ಅರ್ಚನೆ, ಪೂಜೆ ಕೈಂಕರ್ಯಗಳು ವಿಜೃಂಭಣೆಯಿಂದ ಜರುಗಿದವು. ಪ್ರತಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಬೇಸಿಗೆಯ ಧಗೆಯನ್ನು ತಣ್ಣಗಾಗಿಸಲು ಪಾನಕ, ಕಡಲೆಕಾಳು ಕೋಸಂಬರಿ, ಮಜ್ಜಿಗೆ ಸಂತರ್ಪಣೆ ನಡಯಿತು. ರಂಗನಾಥ ಸ್ವಾಮಿ ದೇವಾಲಯ,ಗಾಂಧಿಪೇಟೆಯ ಶ್ರೀ ಶನೇಶ್ವರಸ್ವಾಮಿ ಹಾಗೂ ಆಂಜನೇಯ ದೇವಾಲಯದಲ್ಲಿ ಹಾಗೂ ಆಂಜನೇಯಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದ ಗ್ರಾಮದೇವತೆಗಳಾದ ಹುಳಿಯಾರಮ್ಮ,ದುರ್ಗಮ್ಮ ಮತ್ತು ಲಿಂಗಪ್ಪನಪಾಳ್ಯದ ಶ್ರೀರಾಮ ಮೂರ್ತಿಗೆ ಪೂಜೆ ಸಲ್ಲಿಸಿ ಬಂದಿದ್ದ ಭಕ್ತಾಧಿಗಳಿಗೆ ಪಾನಕ ಪನಿವಾರ ವಿತರಿಸಲಾಯಿತು. ಭಕ್ತಾಧಿಗಳು ಬೇಸಿಗೆಯ ಧಗೆಯನ್ನು ಲೆಕ್ಕಿಸದೆ ಆಗಮಿಸಿ ಪೂಜೆ ಜಪಗಳ ಕಾರ್ಯಗಳಲ್ಲಿ ಬಾಗವಹಿಸಿದ್ದರಲ್ಲದೆ, ರಾಮ ಅಷ್ಟೋತ್ತರ,ರಾಮ ರಕ್ಷಾ ಸ್ತೋತ್ರ,ರಾಮ ಅಷ್ಟಕ ,ರಾಮ ಸಹಸ್ರನಾಮ ಜಪಿಸುತ್ತಾ, ರಾಮಕೀರ್ತನೆಯನ್ನು ಪಠಿಸುತ್ತಿದ್ದರು..
ಶ್ರೀಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಜೈ ಮಾರಿತಿ ಯುವಕ ಸಂಘದ ಯುವಕರು ಪೆಂಡಾಲನ್ನು ಹಾಕಿ ಮಜ್ಜಿಗೆ ಕೋಸಂಬರಿಯನ್ನು ವಿತರಿಸಿದರು. ಸಂಘದ ಚನ್ನಬಸವಯ್ಯ,ಆಶೊಕ್ ಬಾಬು,ಹರೀಶ್,ರಾಘು ಸೇರಿದಂತೆ ಇತರರು ಪಾನಕ ವಿತರಿಸಿದರು. ಎಲ್ಲರು ಈ ಸಂಭ್ರಮದಲ್ಲಿ ಭಾಗಿಯಾಗಿರುವುದು ಆಚರಣೆಯ ಕಳೆಯನ್ನು ಮತ್ತಷ್ಟು ಹೆಚ್ಚಿಸಿತು. ರಾಮನವಮಿ ಪ್ರಯುಕ್ತ ವ್ಯಾಪಾರ ಭರದಿಂದ ನಡೆದಿದ್ದು ಹೂವು, ಹಣ್ಣು, ಸೌತೇಕಾಯಿ, ಕರಬೂಜಾ ಹಣ್ಣುಗಳ ಬೆಲೆ ಗಗನಕ್ಕೇರಿತ್ತು.ಒಟ್ಟಾರೆ ಹಬ್ಬದ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ