ಬರದಲೇಪಾಳ್ಯದ ಆರ್.ಉಮೇಶ್ ಎಂಬುವರ ಮೂರುವರೆ ವರ್ಷದ ಕಿಶೋರ್ ಎಂಬ ಮಗುವಿಗೆ ವಿನಾಕಾರಣ ಕೈಕಾಲುಗಳಲ್ಲಿ ಬಾಸುಂಡೆ ಬರುವಂತೆ ಅಂಗನವಾಡಿ ಶಿಕ್ಷಕಿ ಕೋಲಿನಿಂದ ಹಿಗ್ಗಾಮುಗ್ಗಾ ಹೊಡೆದಿದ್ದು, ಇದನ್ನು ಮನೆಯಲ್ಲಿ ಹೇಳದಂತೆ ಹೆದರಿಸಿದ್ದಾರೆ.ಮನೆಗೆ ಬಂದ ಮಗು ಮಂಕಾಗಿದ್ದನ್ನು ಕಂಡ ತಂದೆ ವಿಚಾರಿಸಿ,ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿಸಿದ್ದಾರೆ.ಅಲ್ಲದೆ ಈ ಬಗ್ಗೆ ಮಾಹಿತಿ ಪಡೆದ ಸಿಡಿಪಿಓ ಅಧಿಕಾರಿ ಮಾರನೆಯ ದಿನವೇ ಸ್ಥಳಕ್ಕೆ ಬಂದಿದ್ದರು ಸಹ ಶಿಕ್ಷಕಿ ಬಗ್ಗೆ ಯಾವುದೆ ಕ್ರಮ ತೆಗೆದುಕೊಂಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಡಿ.ಡಿ.ಪಿ.ಓ ಅಧಿಕಾರಿ ಬಳಿ ಮಗುವನ್ನು ಕರೆದುಕೊಂದು ಹೋಗಿ ವಿಷಯ ತಿಳಿಸಿದಾಗ,ಅವರು ಕಾಲಿನ ಮೇಲೆ ಆಗಿರುವ ಬಾಸುಂಡೆಗಳನ್ನು ನೋಡಿ ಇದಕ್ಕೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು ಸಹ ಎಲ್ಲರೂ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಅಲವತ್ತುಕೊಳ್ಳುತ್ತಿರುವ ಮಗುವಿನ ತಂದೆ ತನ್ನ ಮಗುವಿಗಾದಂತೆ ಬೇರೆ ಯಾವ ಮಕ್ಕಳಿಗೂ ಆಗದಿರುವಂತೆ ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಿದ ಅಂಗನವಾಡಿ ಶಿಕ್ಷಕಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಠಾಣೆಗೆ ದೂರು ದಾಖಲಿಸಿದ್ದಾಗಿ ತಿಳಿಸಿದ್ದು ಪೋಲಿಸರು ಶೀಘ್ರ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಅಂಗನವಾಡಿ ಶಿಕ್ಷಕಿಯೋರ್ವರು ಏನೂ ಅರಿಯದ ಮೂರುವರೆ ವರ್ಷದ ಮುಗ್ಧ ಮಗುವಿಗೆ ಬಾಸುಂಡೆ ಬರುವಂತೆ ಹೊಡೆದಿರುವ ಅಮಾನುಷ ಘಟನೆಯ ದೂರನ್ನು ಇಪ್ಪತ್ತು ದಿನಗಳ ನಂತರ ಹುಳಿಯಾರು ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬರದಲೇಪಾಳ್ಯದ ಅಂಗನವಾಡಿ ಕೇಂದ್ರದಲ್ಲಿ ಮಾರ್ಚ್ 3 ರಂದು ಪ್ರಕರಣ ನಡೆದಿದೆ ಎನ್ನಲಾಗಿದ್ದು ಈ ಬಗ್ಗೆ ಸಿಡಿಪಿಓ ಹಾಗೂ ಡಿ.ಡಿ.ಪಿ.ಓ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಪೋಲಿಸ್ ಅಧೀಕ್ಷಕರ ಬಳಿ ದೂರನ್ನು ಕೊಂಡೊಯ್ದ ಪರಿಣಾಮ ಇದೀಗ ಹುಳಿಯಾರು ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ