ಮೊಲ ಬಿಡುವ ಮೂಲಕ ಸಂಕ್ರಾಂತಿ ಆಚರಣೆ
ಡಿ.ಆರ್.ನರೇಂದ್ರಬಾಬು
---------
ಹುಳಿಯಾರು : ಸುಗ್ಗಿ ಹಬ್ಬವಾದ ಸಂಕ್ರಾತಿಯನ್ನು ರಾಜ್ಯದೆಲ್ಲೆಡೆ ಒಂದೊಂದು ರೀತಿ ತಮ್ಮ ವಾಡಿಕೆಯಂತೆ ಆಚರಿಸಿದರೆ, ಹೋಬಳಿಯ ಸೀಗೆಬಾಗಿ ಗ್ರಾಮದಲ್ಲಿ ಮಾತ್ರ ಮೊಲ ಬಿಡುವ ಮೂಲಕ ಸಂಕ್ರಾತಿ ಹಬ್ಬವನ್ನು ಎರಡು ದಿನಗಳಕಾಲ ವಿಜೃಂಭಣೆಯಿಂದ ನಡೆಸುತ್ತಾರೆ. ಸುಮಾರು ೩೫೦ ಮನೆಗಳಿರುವ ಈ ಗ್ರಾಮದಲ್ಲಿ ಸಂಕ್ರಾಂತಿಯನ್ನು ಗ್ರಾಮಹಬ್ಬದ ರೀತಿ ಗ್ರಾಮಸ್ಥರೆಲ್ಲಾ ಜಾತಿಬೇಧ ಮರೆತು ಆಚರಿಸುತ್ತಾರೆ.
ಸೀಗೆಬಾಗಿಯ ವರದರಾಜ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ನೂರೊಂದೆಡೆ ಸೇವೆ ಸಲ್ಲಿಸಿದ ನೂರಕ್ಕೂ ಅಧಿಕ ಸಂಖ್ಯೆಯ ದಾಸಪ್ಪಗಳು |
ಅಂದು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ವಿಶೇಷ ಅಡುಗೆ ಮಾಡಿಕೊಂಡು ವರದರಾಜಸ್ವಾಮಿ ದೇವಸ್ಥಾನಕ್ಕೆ ಅಡುಗೆಬುತ್ತಿಯನ್ನು ಹೊತ್ತು ತಂದು ಎಲ್ಲರು ಒಟ್ಟಾಗಿ ಹಂಚಿಕೊಂಡು ಊಟ ಮಾಡುವುದು ಇಲ್ಲಿನ ವಾಡಿಕೆ.
ಅದರಂತೆ ಹಬ್ಬದ ದಿನ ಗ್ರಾಮದವರು ತಮ್ಮ ಮನೆಯಲ್ಲಿ ಸಿದ್ದ ಮಾಡಿದ ಎಡೆಯನ್ನು ತಂದು ವರದರಾಜ ಸ್ವಾಮಿಗೆ ಅರ್ಪಿಸುವ ಮೂಲಕ ಎಡೆಗೆಸೇವೆ ಹಾಗೂ ಪೂಜಾ ಕೈಂಕರ್ಯ ನಡೆಸಿದರು.
ಹಬ್ಬದ ಮಾರನೇ ದಿನ ವರದರಾಜ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ನೂರೊಂದೆಡೆ ಸೇವೆ ಸಲ್ಲಿಸುವ ನೂರಕ್ಕೂ ಅಧಿಕ ಸಂಖ್ಯೆಯ ದಾಸಪ್ಪಗಳು ಸಂಪ್ರದಾಯ ಉಡುಗೆ ತೊಟ್ಟು ನಂತರ ಗ್ರಾಮದ ಪ್ರತಿಯೊಂದು ಮನೆಗೆ ಹೋಗಿ ಸಾಂಕೇತಿಕವಾಗಿ ಪಡಿಆಟದ ಮೂಲಕ ಬೇಡುವುದು ಸಂಪ್ರದಾಯವಾಗಿದೆ.
ಮೊಲ ಬಿಡುವುದು : ಮಕರ ಸಂಕ್ರಮಣದ ಹಿಂದಿನ ದಿನ ವಿಷ್ಣುವಿನ ಅಪರಾವತಾರವೆಂದೇ ನಂಬಿರುವ ಮೊಲವನ್ನು ಕಾಡಿಗೆ ತೆರಳಿ ಹಿಡಿದು ತರುವುದು ಹಾಗೂ ಸಂಕ್ರಮಣದ ಮಾರನೆ ದಿನ ಕಾಡಿಗೆ ವಾಪಸ್ಸ್ ಬಿಡುವುದು ಅನುಚಾನವಾಗಿ ಆಚರಣೆಯಲ್ಲಿದೆ. ಮೊಲ ಹಿಡಿಯುವುದನ್ನು ಬೇಟೆ ಉತ್ಸವ ಎಂದು ಕರೆಯಲಾಗುವುದಿದ್ದು, ಧಾರ್ಮಿಕ ವಿಧಿವಿಧಾನಗಳನ್ವಯ ದೇವಾಲಯದ ಪಟೇಲರು,ಗೌಡರು ಹಾಗೂ ಗ್ರಾಮಸ್ಥರು ತೆರಳಿ ಮೊಲ ಹಿಡಿದು ವಾದ್ಯದ ಮೆರವಣಿಗೆ ಮೂಲಕ ದೇವಾಲಯದಲ್ಲಿಗೆ ತರಲಾಗುತ್ತದೆ. ಆ ಮೊಲಕ್ಕೆ ವರದರಾಜ ಸ್ವಾಮಿ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಕಿವಿಗೆ ಮುರು ಚುಚ್ಚಿ ವಾದ್ಯ ಮೇಳದೊಂದಿಗೆ ದೇವರುಗಳ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಮೊಲ ಬಿಡಲಾಗುತ್ತದೆ.ಈ ಮೊಲ ಯಾವ ದಿಕ್ಕಿನ ಕಡೆ ಜಿಗಿದು ಹೋಗುತ್ತದೋ ಆ ದಿಕ್ಕಿನಲ್ಲಿ ಉತ್ತಮ ಮಳೆ,ಬೆಳೆಯಾಗುತ್ತದೆ ಎಂಬ ಪ್ರತೀತಿ ಇದೆ.
ಬಹುದಿನಗಳಿಂದಲೂ ಈ ಮೊಲ ಬಿಡುವುದನ್ನು ವರದರಾಜಸ್ವಾಮಿ, ದುರ್ಗಮ್ಮದೇವಿ ಹಾಗೂ ಮುಳ್ಳಲಗೆ ಬೂತರಾಯಸ್ವಾಮಿಯ ಸಮ್ಮುಖದಲ್ಲಿ ಒಕ್ಕಲಿನವರು ನಡೆಸಿಕೊಂಡು ಬರುತ್ತಿರುವುದಾಗಿ ಅರ್ಚಕ ಸುಗಂಧರಾಜ್ ತಿಳಿಸುತ್ತಾರೆ.
ಜಾನಪದ ಹಿನ್ನಲೆ: ಸಂಕ್ರಾಂತಿಯಂದು ಲಕ್ಷ್ಮಿತವರಿಗೆ ಹೊರಟು ನಿಂತಾಗ ಕೋಪಗೊಂಡ ವಿಷ್ಣುವು ಬೇಟೆ ಆಡುವ ನೆಪದಲ್ಲಿ ಕಾಡಿಗೆ ತೆರಳುತ್ತಾನೆ. ಇದನ್ನು ತಿಳಿದ ಲಕ್ಷ್ಮಿಯು ಗಂಡನನ್ನು ತಡೆಯಲು ಕಾಡಿನಲ್ಲಿ ಮೊಲವನ್ನು ಆತನ ದಾರಿಗೆ ಅಡ್ಡವಾಗಿ ಬರುವಂತೆ ಮಾಡುತ್ತಾಳೆ, ಮೊಲ ಅಡ್ಡ ಬಂದಿದ್ದು ಅಪಶಕುನ ಎಂದು ಭಾವಿಸಿದ ವಿಷ್ಣುವು ವಾಪಸ್ಸ್ ನಾಡಿಗೆ ತೆರಳುತ್ತಾನೆ.ಈ ಹಿನ್ನಲೆಯೂ ಮೊಲ ಬಿಡುವ ಸಂಪ್ರದಾಯಕ್ಕೆ ಕಾರಣವಾಗಿದೆ.
ಹಬ್ಬದ ಮರುದಿನ ಸಂಜೆ ದುರ್ಗಮ್ಮ ದೇವಿಗೆ ಮಡಲಕ್ಕಿ ಹಾಕಿ ಪೂಜೆ ಸಲ್ಲಿಸಿದ ಬಳಿಕ ಸ್ವಾಮಿ ಹಾಗೂ ಅಮ್ಮನವರನ್ನು ಹೊರಡಿಸಿ ಮೊಲ ಬಿಡುವ ಕಾರ್ಯ ನಡೆಯಿತು.
ಭಾನುವಾರದಂದು ನಡೆದ ಉತ್ಸವದಲ್ಲಿ ಸೀಗೆಬಾಗಿಯ ವರದರಾಜಸ್ವಾಮಿ, ದುರ್ಗಾಪರಮೇಶ್ವರಿ, ಗೋಪಾಲಪುರದ ಆಂಜನೇಯಸ್ವಾಮಿ ಮತ್ತು ಕರಿಯಮ್ಮದೇವಿ.ನಿರುವಗಲ್ ಆಂಜನೇಯಸ್ವಾಮಿ ಹಾಗೂ ಲಕ್ಷ್ಮೀಪುರದ ಲಕ್ಷ್ಮಮ್ಮ ದೇವಿ ಪಾಲ್ಗೊಂಡಿದ್ದವು
ಶ್ರೀ ವರದರಾಜ ಟ್ರಸ್ಟ್ ನ ಕನ್ವೀನರ್ ಶಂಕರ್,ಕಾಂತರಾಜು,ಧರ್ಮದರ್ಶಿ ನಟರಾಜು, ವರದಯ್ಯ, ಮಧು,ತಮ್ಮಯ್ಯ,ಕೃಷ್ಣಯ್ಯ ಸೇರಿದಂತೆ ಅಪಾರ ಸಂಖ್ಯೆಯ ಗ್ರಾಮಸ್ಥರು ಪಾಲ್ಗೊಂಡಿದ್ದರು.
----------------------------------------------------
ತುಮಕೂರು ಜಿಲ್ಲೆಯಲ್ಲಿ ಸೀಗೆಬಾಗಿಯ ವರದರಾಜಸ್ವಾಮಿ ವಿಶಿಷ್ಟವಾದುದಾಗಿದ್ದು ಬೇರೆಲ್ಲೂ ಇಂತಹ ಮೂರ್ತಿಯನ್ನು ಕಾಣಲು ಸಾಧ್ಯವಿಲ್ಲ. ಇದರ ಬಗ್ಗೆ ಪುರಾಣಗಳಲ್ಲೂ ಉಲ್ಲೇಖಗಳಿವೆ. ಇಲ್ಲಿನ ವರದರಾಜಸ್ವಾಮಿಯು ಉದ್ಭವ ಮೂರ್ತಿಯಾಗಿದ್ದು ಇದೇ ದೇವಾಲಯದಲ್ಲಿ ಊರಿನಲ್ಲಿದ್ದ ಆಂಜನೇಯಸ್ವಾಮಿಯನ್ನು ಸಹ ಪ್ರತಿಷ್ಠಾಪಿಸಿ ಪೂಜಿಸಲು ಪ್ರಾರಂಭಿಸಿದ್ದರಿಂದ ವರದಾಂಜನೇಯಸ್ವಾಮಿ ಎಂದು ಪ್ರಸಿದ್ದಿಯಾಗಿದೆ.
---------------------------------------------------------
ವಿಷ್ಣುವಿನ ಅಪರಾವತಾರ ಎನ್ನುವ ಮೊಲವನ್ನು ಹಿಡಿದು ತಂದು ಪೂಜೆಸಿದ ಬಳಿಕ ಬಿಡುವುದರಿಂದ ನಾಡು ಗ್ರಾಮ ಸುಭಿಕ್ಷವಾಗಿರುತ್ತದೆ ಹಾಗೂ ಅದು ಯಾವ ದಿಕ್ಕಿನತ್ತ ಓಡಿ ಹೋಗುತ್ತದೆ ಆ ದಿಕ್ಕಿನ ಕಡೆ ಉತ್ತಮ ಮಳೆ,ಬೆಳೆ ಆಗುತ್ತದೆ ಎಂಬ ನಂಬಿಕೆ ಇದೆ: ಶಂಕರ್ ದೇವಸ್ಥಾನದ ಕನ್ವೀನಿಯರ್.
----------------
ವಿಷ್ಣು ದೇವರ ಹೆಸರಿನಲ್ಲಿ ಸಾಂಕೇತಿಕವಾಗಿ ಮೊಲ ಹಿಡಿಯುವುದು ಸಂಪ್ರದಾಯವೇ ಆಗಿ ನಡೆದು ಬರುತ್ತಿದ್ದು, ಇತ್ತೀಚಿನ ದಿನದಲ್ಲಿ ಗುಡ್ಡಬೆಟ್ಟಗಳೆಲ್ಲ ಬಯಲಾಗಿ ಮೊಲ ಸಿಗುವುದೇ ಕಷ್ಟಕರವಾಗಿದೆ. ಅದರೂ ಸಹ ಈ ಸಂಪ್ರದಾಯವನ್ನು ಬಿಡದೆ ಪಾಲಿಸಿಕೊಂಡು ಬರಲಾಗುತ್ತಿದೆ: ಭಕ್ತೇಶ್,ಅರ್ಚಕರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ