ಹುಳಿಯಾರು:ಪಟ್ಟಣದ ಅನಂತಶಯನ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನು ಅಪಾರ ಭಕ್ತ ಸಮೂಹದೊಂದಿಗೆ ವೈಕುಂಠನಾರಾಯಣನ ನಾಮಸ್ಮರಣೆ ಮಾಡುತ್ತಾ ಸಂಭ್ರಮದಿಂದ ಆಚರಿಸಲಾಯಿತು.
ಹುಳಿಯಾರಿನ ಅನಂತಶಯನ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಲಕ್ಷ್ಮೀನಾರಾಯಣ ಹೋಮ ನೆರವೇರಿಸಲಾಯಿತು. |
ಶ್ರೀಲಕ್ಷ್ಮಿರಂಗನಾಥಸ್ವಾಮಿ ದೇವಾಲಯದಲ್ಲಿ ೩ ನೇ ವರ್ಷದ ಆಚರಣೆ ಅಂಗವಾಗಿ ದೇವಾಲಯವನ್ನು ಝಗಮಗಿಸುವ ವಿದ್ಯುತ್ ದೀಪಾಲಂಕಾರ,ತಳಿರು ತೋರಣಗಳಿಂದ,ಸಪ್ತದ್ವಾರಗಳನ್ನು ನಿರ್ಮಿಸುವ ಮೂಲಕ ಭೂವೈಕುಂಠವೇನೋ ಎಂಬುವ ರೀತಿ ಅಲಂಕರಿಸಲಾಗಿತ್ತು. ಗ್ರಾಮದೇವತೆಗಳಾದ ಹುಳಿಯಾರಮ್ಮ ,ದುರ್ಗಮ್ಮ ಹಾಗೂ ಕೆಂಚಮ್ಮನವರ ಸಮ್ಮುಖದಲ್ಲಿ ಸ್ವಾಮಿಗೆ ಪಂಚಾಮೃತಾಭಿಷೇಕ, ಪೂಜೆ,ಮಂಗಳಾರತಿ ,ನೈವೇದ್ಯ ಕಾರ್ಯ ನೆರವೇರಿಸಲಾಯಿತು.ನಂತರ ರಾಮಚಂದ್ರಭಟ್ಟರ ನೇತೃತ್ವದಲ್ಲಿ ಲಕ್ಷ್ಮೀನಾರಾಯಣ ಹೋಮ ನೆರವೇರಿಸಲಾಯಿತು.ಸಂಜೆ ಸಪ್ತ ದ್ವಾರ ದರ್ಶನದ ಮೂಲಕ ಸ್ವಾಮಿಯ ವೈಕುಂಠ ದರ್ಶನವನ್ನು ಮಾಡಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಸರತಿಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು.ವೈಕುಂಠ ಏಕಾದಶಿ ಸಮಿತಿಯಿಂದ ಲಾಡು ಹಾಗು ಗೊಜ್ಜವಲಕ್ಕಿ ಪ್ರಸಾದ ವಿತರಿಸಲಾಯಿತು.
ಸಮಿತಿಯ ಧನುಷ್ ರಂಗನಾಥ್,ವಿಶ್ವನಾಥ್,ಬಡ್ಡಿಪುಟ್ಟರಾಜು,ಶೇಷಾದ್ರಿ,ಚಿಕ್ಕಣ್ಣ,ಟಿ.ಆರ್.ರಂಗನಾಥ ಶೆಟ್ರು,ರಮೇಶಣ್ಣ ಮತ್ತಿತರರು ಪಾಲ್ಗೊಂಡಿದ್ದರು.
ಪೇಟೆ ಬೀದಿಯಲ್ಲಿರುವ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಕೋದಂಡರಾಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತಲ್ಲದೆ ಶ್ರೀ ಸ್ವಾಮಿಯವರ ಸನ್ನಿದಿಯಲ್ಲಿ ಅನಂತಶಯನ ರಂಗನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಎಂ.ಎಸ್.ಆರ್. ನಟರಾಜ್ ಅವರ ಸೇವಾರ್ಥದಲ್ಲಿ ಪ್ರಕಾರೋತ್ಸವ, ಅಷ್ಟಾವದಾನ ಸೇವೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮುಂತಾದ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎನ್ನುವ ಪ್ರತೀತಿ ಇರುವ ಹಿನ್ನೆಲೆಯಲ್ಲಿ ವೈಕುಂಠ ದ್ವಾರದ ಮೂಲಕ ಪ್ರವೇಶ ಮಾಡಿ ಶ್ರೀ ಸ್ವಾಮಿಯವರ ದರ್ಶನ ಪಡೆದರೆ ಪುಣ್ಯ ಲಭಿಸುವುದು ಎನ್ನುವ ನಂಬಿಕೆ ಇರುವ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವಾಲಯಕ್ಕೆ ತೆರಳಿ ದರ್ಶನ ಪಡೆದು ಪುನೀತರಾದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ