ರೈತಸಂಘ ಮತ್ತು ಕನ್ನಡಪರ ಸಂಘಟನೆಗಳ ನೇತೃತ್ವ
ಹುಳಿಯಾರು: ಹೋಬಳಿ ಕೇದ್ರವಾಗಿರುವ ಹುಳಿಯಾರು ಸಧ್ಯ ತಾಲ್ಲೂಕು ಕೇಂದ್ರವನ್ನು ಮೀರಿ ಬೆಳೆದಿದ್ದು ಜನಸಂಖ್ಯಾ ಆಧಾರದ ಮೇಲೆ ಈಗಲಾದರೂ ಹುಳಿಯಾರನ್ನು ತಾಲ್ಲೂಕು ಕೇಂದ್ರವಾಗಿ ಪರಿವರ್ತಿಸುವಂತೆ ಒತ್ತಾಯಿಸಿ ಜಿಲ್ಲಾ ರೈತಸಂಘ (ಹೊಸಹಳ್ಳಿ ಚಂದ್ರಣ್ಣ ಬಣ) ಹಾಗೂ ಕರವೇ, ಜಯಕರ್ನಾಟಕ, ದಲಿತ ಸಂಘ, ಸೃಜನ ಮಹಿಳಾ ಮಂಡಳಿ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಸೋಮವಾರದಂದು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಇಲ್ಲಿನ ಪರಿವೀಕ್ಷಣಾಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಿ.ಹೆಚ್.ರಸ್ತೆ, ಬಸ್ ನಿಲ್ದಾಣ ಮಾರ್ಗವಾಗಿ ಡಾ:ರಾಜ್‌ಕುಮಾರ್ ರಸ್ತೆ, ಪೊಲೀಸ್ ಠಾಣೆ ವೃತ್ತದ ಮೂಲಕ ನಾಡಕಚೇರಿ ತಲುಪಿ ಮನವಿ ಸಲ್ಲಿಸಿ ಸರ್ಕಾರವನ್ನು ಒತ್ತಾಯಿಸಿದರು.
ವಕೀಲ ಬಿ.ಕೆ.ಸದಶಿವು ಮಾತನಾಡಿ ಕೆಲವು ರಾಜಕೀಯ ನಾಯಕರು ತಮ್ಮ ಹಿತಾಸಕ್ತಿಗಾಗಿ ಈ ಹಿಂದೆ ತಾಲ್ಲೂಕು ಕೇಂದ್ರವಾಗಿದ್ದ ಹುಳಿಯಾರನ್ನು ಬದಲಿಸಿ ಚಿಕ್ಕನಾಯಕನಹಳ್ಳಿಯನ್ನು ತಾಲ್ಲೂಕು ಕೇಂದ್ರವಾಗಿ ಮಾರ್ಪಡಿಸಿದ್ದಾರೆ. ಇದರಿಂದ ಹೋಬಳಿಯ ಗಡಿ ಪ್ರದೇಶದಲ್ಲಿ ನೆಲಸಿರುವ ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಸುಮಾರು ೫೦ಕಿಮೀ ದೂರದಲ್ಲಿನ ಚಿಕ್ಕನಾಯಕನಹಳ್ಳಿ ಕೇಂದ್ರಕ್ಕೆ ತೆರಳುವಂತಾಗಿದೆ.ಅಲ್ಲದೆ ತಾಲ್ಲೂಕು ಕೇಂದ್ರಕ್ಕೆ ತೆರಳಲು ಗಡಿಭಾಗದ ಜನರಿಗೆ ಸಮರ್ಪಕವಾದ ಸಾರಿಗೆ ವ್ಯವಸ್ಥೆಯು ಸಹಾ ಇಲ್ಲದೆ ಪರದಾಡುವಂತಾಗಿದೆ ಎಂದರು.
ಇಲ್ಲಿನ ಜನಸಂಖ್ಯೆಯು ಸಹಾ ಸಾಕಷ್ಟು ಹೆಚ್ಚಾಗಿದೆ. ಶೈಕ್ಷಣಿಕವಾಗಿ, ಭೌಗೋಳಿಕವಾಗಿ, ಹುಳಿಯಾರು ತಾಲ್ಲೂಕು ಕೇಂದ್ರವಾಗುವ ಅರ್ಹತೆ ಇದ್ದರೂ ಸಹಾ ಕೆಲವು ರಾಜಕೀಯ ನಾಯಕರು ಇದನ್ನ ತಪ್ಪಿಸಿ ಸಿರಾ ತಾಲ್ಲೂಕಿನ ಕಳ್ಳಂಬೆಳ್ಳವನ್ನು ತಾಲ್ಲೂಕು ಕೇಂದ್ರವಾಗಿ ಮಾಡಲು ಹೊರಟಿದ್ದಾರೆಂದು ಆರೋಪಿಸಿದರು.
ಕರವೇ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ಈ ಹೋಬಳಿ ಕೇಂದ್ರವು ಈಗಾಗಲೆ ತಾಲ್ಲೂಕು ಮಟ್ಟಕ್ಕಿಂತ ದೊಡ್ಡದಾಗಿ ಬೆಳೆದು ನಿಂತಿದೆ. ಜಿಲ್ಲಾ ಉಸ್ತುವರಿ ಸಚಿವ ಟಿ.ಬಿ.ಜಯಚಂದ್ರರವರ ರಾಜಕೀಯ ಜೀವನದ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಈ ಭಾಗದ ಜನರನ್ನು ನೆನಪಿಸಿಕೊಂಡು ಹುಳಿಯಾರನ್ನು ತಾಲ್ಲೂಕು ಕೇಂದ್ರವನ್ನಾಗಿಸಲು ಸಹಕರಿಸಲಿ ಎಂದು ಒತ್ತಾಯಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಮಾತನಾಡಿ ಈ ಹೋಬಳಿ ಕೇಂದ್ರವನ್ನು ತಾಲ್ಲೂಕಾಗಿ ಮುಂದಿನ ಬಜೇಟ್‌ನಲ್ಲಿ ಸರಕಾರ ಘೋಷಿಸುವಂತೆ ಒತ್ತಾಯಿಸಿದರು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಈ ಬಗ್ಗೆ ಉಪತಹಸೀಲ್ದಾರ್ ಸತ್ಯನಾರಾಯಣ್‌ಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ತಾಪಂ ಸದಸ್ಯ ಹೆಚ್.ಎನ್.ಕುಮಾರ್, ಗ್ರಾಪಂ ಸದಸ್ಯ ಸೈಯದ್ ಜಬೀಉಲ್ಲಾ, ನಿವೃತ್ತ ಶಿಕ್ಷಕ ರಾಮಯ್ಯ, ಸೋಮಜ್ಜನಪಾಳ್ಯದ ಬೀರಪ್ಪ, ಕರವೇ ಲಕ್ಮೀ ಕಾಂತ್, ಪ್ರಕಾಶ್, ಕುಮಾರ್, ಸಂತೋಷ್, ಸೃಜನವೇದಿಕೆಯ ಜಯಲಕ್ಷ್ಮಮ್ಮ, ಪಂಕಜಮ್ಮ, ಗ್ರಾಪಂ ಮಾಜಿ ಉಪಾಧ್ಯಕ್ಷೆ ವೆಂಕಟಮ್ಮ, ಜಯಕರ್ನಾಟಕ ಸಂಘದ ಮೋಹನ್‌ಕುಮಾರ್ ರೈ, ಚಂದ್ರು, ಯತೀಶ್, ಮಾಧುರಾವ್, ಟಿಪ್ಪು ಸುಲ್ತಾನ್ ಸಂಘದ ಅಪ್ಸರ್,ತಾಲ್ಲೂಕ್ ಅಲೆಮಾರಿ ಬುಡಕಟ್ಟು ಸಂಘದ ಅಧ್ಯಕ್ಷ ರಾಜಪ್ಪ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ