ಪ್ರಧಾನಿಗಳು ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕಿತ್ತು
---------------------------
ಹುಳಿಯಾರು:ದೆಹಲಿಗೆ ಹೋದಾಗ ಪ್ರಧಾನಿಗಳೊಂದಿಗೆ ಕೊಬ್ಬರಿ ಸಮಸ್ಯೆ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಈ ಬಗ್ಗೆ ಚಕಾರವೆತ್ತಿಲ್ಲ.ಇದರಿಂದಾಗಿ ಮುಖ್ಯಮಂತ್ರಿಗಳು ಕೊಬ್ಬರಿ ಬೆಳೆಗಾರರ ಪರವಾಗಿ ನೀಡಿದ್ದ ಭರವಸೆಯ ಮಾತುಗಳು ಹುಸಿಯಾಗಿದೆ ಎಂದು ತಮ್ಮಡಿಹಳ್ಳಿ ಮಲ್ಲಿಕಾರ್ಜುನಯ್ಯ ಬೇಸರಿಸಿದರು.
ಹುಳಿಯಾರಿನ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಮಾತನಾಡಿದ ಅವರು ಕೊಬ್ಬರಿ ಹೋರಾಟದ ಧರಣಿ ಇಂದಿಗೆ ೫೩ ನೇ ದಿನ ತಲುಪಿದ್ದು ಇಷ್ಟು ದಿನವಾದರೂ ಸಹ ಸರ್ಕಾರಗಳು ಸಮಸ್ಯೆ ಇತ್ಯರ್ಥಕ್ಕೆ ದೃಢನಿರ್ಧಾರ ತೆಗೆದುಕೊಳ್ಳದೆ ರೈತರ ಸಮಸ್ಯೆಯನ್ನು ಲಘವಾಗಿ ಪರಿಗಣಿಸಿದೆ ಎಂದು ದೂರಿದರು.
ರಾಜ್ಯಸರ್ಕಾರ ಕೊಬ್ಬರಿ ಬೆಳೆಗಾರರ ಸಮಸ್ಯೆಯನ್ನು ಪ್ರಧಾನಿಗಳ ಗಮನಕ್ಕೆ ತರುವುದಲ್ಲದೆ ಇದಕ್ಕಾಗಿ ದೇವೇಗೌಡರೊಂದಿಗೆ ತೆರಳಲಿರುವ ನಿಯೋಗದಲ್ಲಿ ಪಾಲ್ಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು.ಡಿ೩೧ರಂದು ಪ್ರಧಾನಿಗಳನ್ನು ಭೇಟಿಯಾದ ಮುಖ್ಯಮಂತ್ರಿಗಳು ರಾಜ್ಯದ ಕಲ್ಪತರು ನಾಡಿನ ರೈತರ ಸಮಸ್ಯೆ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತಾರೆಂದು ನಾವುಗಳು ಎಣಿಸಿದ್ದರೆ ಮುಖ್ಯಮಂತ್ರಿಗಳು ಈ ಬಗ್ಗೆ ಚಕಾರವೆತ್ತದೆ ಕೇವಲ ಬರ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿ ಹಿಂದುರುಗಿದ್ದಾರೆ.ಹೀಗಾದರೆ ರೈತರ ಸಮಸ್ಯೆ ಬಗೆಹರಿಸುವರ್ಯಾರು ಎಂದು ಪ್ರಶ್ನಿಸಿದರು.
ಪ್ರಧಾನಿಗಳು ನೋಟು ನಿಷೇಧದ ನಂತರ ಜ.೧ ರ ತಮ್ಮ ಭಾಷಣದಲ್ಲಿ ದೇಶದ ಬೆನ್ನೆಲುಬಾದ ರೈತರ ಪರವಾದ ಯೋಜನೆಗಳನ್ನು ಪ್ರಕಟಿಸಬಹುದೆಂದು,ರೈತರ ಸಾಲ ಮನ್ನಾ ಮಾಡಬಹುದೆಂದು ನಿರೀಕ್ಷಿಸಿದ್ದೆವು.ಆದರೆ ಪ್ರಧಾನಿಗಳು ಕೇವಲ ಸಾಲದ ಅವಧಿಯನ್ನು ಬಡ್ಡಿರಹಿತವಾಗಿ ೬೦ ದಿನಗಳಿಗೆ ವಿಸ್ತರಿಸಿದ್ದು ಇದರಿಂದ ರೈತರಿಗ್ಯಾವ ಪ್ರಯೋಜನವಿಲ್ಲವಾಗಿದೆ ಎಂದರು.
ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ಬರಗಾಲದ ಬಾಧೆಯಿದ್ದು ೬೫೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಮಾಹಿತಿಯನ್ನು ಪ್ರಧಾನಿಗಳಿಗೆ ತಿಳಿಸಲು ರಾಜ್ಯದ ೨೮ ಸಂಸದರೂ ವಿಫಲರಾಗಿದ್ದಾರೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಕೆಂಕೆರೆ ಸತೀಶ್,ಅರಳಿಕೆರೆ ಕಲ್ಲೇಶ್, ಲಕ್ಷ್ಮಿಪುರದ ಶಿವಣ್ಣ, ತಮ್ಮಡಿಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಓಂಕಾರ ಮೂರ್ತಿ,ಗಂಗಣ್ಣ, ಗಿರೀಶ್,ಸೀಗೇಬಾಗಿ ಲೋಕೇಶ್, ಬಸವನಗುಡಿ ನಾಗರಾಜು ಮೊದಲಾದವರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ