ಹುಳಿಯಾರು : ಪಟ್ಟಣ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿಯ ಆಚರಣೆ ಗರಿಗೆದರಿದ್ದು , ಬಗೆಬಗೆಯ ಅಡುಗೆಯ ಜೊತೆಗೆ ಎಳ್ಳು-ಸಕ್ಕರೆಅಚ್ಚು, ಎಳ್ಳು-ಬೆಲ್ಲದ ಕಂಪು ಹರಡಿದ್ದು ಕಂಡುಬಂತು.
ಹಬ್ಬದ ಅಂಗವಾಗಿ ಕೆಲವರು ಮನೆಯಲ್ಲೇ ದೇವರಿಗೆ ಪೂಜೆ ಸಲ್ಲಿಸಿ, ಎಳ್ಳುಬೆಲ್ಲವನ್ನು ನೈವೇದ್ಯ ಮಾಡಿದರೆ, ಮತ್ತೆ ಕೆಲವರು ದೇವಸ್ಥಾನಗಳಿಗೆ ತೆರಳಿ ಎಳ್ಳುಬೆಲ್ಲವನ್ನು ಹಂಚಿ ಪೂಜೆ ಸಲ್ಲಿಸಿದರು.
ಹಬ್ಬದ ಅಂಗವಾಗಿ ಪಟ್ಟಣದ ಮಲ್ಲೇಶ್ವರ ಸ್ವಾಮಿ ದೇವಾಲಯ,ಆಂಜನೇಯಸ್ವಾಮಿ ದೇವಾಲಯ, ಗ್ರಾಮದೇವತೆ ಹುಳಿಯಾರಮ್ಮ,ದುರ್ಗಮ್ಮ ,ಕೆಂಚಮ್ಮನ ದೇವಾಲಯ ಹಾಗೂ ಬನಶಂಕರಿ ಸನ್ನಿಧಿಗೆ ಹೆಚ್ಚು ಸಂಖ್ಯೆಯಲ್ಲಿ ಜನರು ಆಗಮಿಸಿ ಪೂಜೆ ಮಾಡಿಸುತ್ತಿದ್ದು ಕಂಡುಬಂತು.ದುರ್ಗಾಪರಮೇಶ್ವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹಬ್ಬದ ಅಂಗವಾಗಿ ವಿಶೇಷ ಪೂಜೆ ನಡೆಯಿತು.
![]() |
ಹುಳಿಯಾರಿನಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಎಳ್ಳುಬೀರಲು ರೆಡಿಯಾಗಿರುವ ಹೆಣ್ಣುಮಕ್ಕಳು. |
ಸಂಕ್ರಾಂತಿ ಹಬ್ಬದಲ್ಲಿ ಎಳ್ಳು-ಸಕ್ಕರೆಅಚ್ಚು,ಕಬ್ಬು ಹಂಚುವ ವಾಡಿಕೆಯಿದ್ದು ಹೆಣ್ಣುಮಕ್ಕಳು ಬಗೆಬಗೆಯ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಎಳ್ಳು-ಬೆಲ್ಲ, ಕಬ್ಬನ್ನು ಅಕ್ಕಪಕ್ಕದ ಮನೆಯವರಿಗೆ, ಸ್ನೇಹಿತರಿಗೆ ಹಂಚುವ ಮೂಲಕ ಹಬ್ಬದ ಶುಭಾಷಯ ತಿಳಿಸುತ್ತಿದ್ದು ಸಾಮಾನ್ಯವಾಗಿತ್ತು.
ಎಪಿಎಂಸಿಯಲ್ಲೂ ಧರಣಿಯಲ್ಲಿ ತೊಡಗಿರುವ ರೈತರು ಕೂಡ ಇಂದು ಸಂಕ್ರಾಂತಿ ಆಚರಿಸಿ ಹುರುಳಿತೊಕ್ಕು ,ಪೊಂಗಲ್ ಅಡುಗೆ ಮಾಡಿ ಸೇವಿಸಿದರು.
ಬಣವೆಗೆ ಮುಳ್ಳು: ರೈತರ ಸುಗ್ಗಿಕಾಲದ ಆಚರಣೆ ವಿಶಿಷ್ಟವಾಗಿದ್ದು ಸಂಕ್ರಾಂತಿಯ ಮರುದಿನದಿಂದ ಕಣಗೆಲಸ ಮಾಡುವುದು ಹಿಂದಿನಿಂದ ಆಚರಣೆಯಲ್ಲಿದೆ. ಹಬ್ಬದ ಮುನ್ನಾ ದಿನ ರೈತರು ಕಣದ ಬದಿಯಲ್ಲಿನ ಹುಲ್ಲಿನ ಬಣವೆಗಳಿಗೆ ಎರದೆಮುಳ್ಳುಹಾಕಿಬಂದು ಹಬ್ಬದ ದಿನ ಪೂಜೆ ಸಲ್ಲಿಸಿಸುತ್ತಾರೆ. ಸಂಕ್ರಾಂತಿಯ ನಂತರ ಸೂರ್ಯ ತನ್ನ ಚಲನೆಯ ದಿಕ್ಕನ್ನು ಬದಲಾಯಿಸುವುದರಿಂದ ಬಿಸಿಲು ಹೆಚ್ಚಾಗಲಿದ್ದು, ಹಬ್ಬದ ನಂತರ ಕಣಗೆಲಸ ಮಾಡಲು ಸೂಕ್ತ ಸಮಯ ಎಂಬುದು ಈ ಆಚರಣೆ ಹಿಂದಿನ ನಂಬಿಕೆಯಾಗಿದೆ.
ನಾಗಪ್ಪನ ಪೂಜೆ : ಗ್ರಾಮೀಣ ಭಾಗದಲ್ಲಿ ಇದೇ ದಿನ ನಾಗರು ಆಚರಿಸುವ ಸಂಪ್ರದಾಯವಿದ್ದು, ಕಿಚುಡಿ ನಾಗರು, ಚಿಗಣಿ ತಮಟದ ನಾಗರು,ಮುದ್ದೆ ನಾಗರು ಆಚರಣೆಯಲ್ಲಿದೆ. ಹೋಬಳಿಯ ಲಿಂಗಪ್ಪನಪಾಳ್ಯ,ಕೋಡಿಪಾಳ್ಯ,ಕೆಂಕೆರೆ ಸುತ್ತಮುತ್ತಲಲ್ಲಿ ಸಂಕ್ರಾತಿ ಹಬ್ಬದ ದಿನ ಕೂಳೆ ನಾಗರು ಆಚರಣೆ ನಡೆದುಕೊಂಡು ಬಂದಿದ್ದು ಮನೆಮಂದಿಯಲ್ಲಾ ಒಟ್ಟಾಗಿ ಸೇರಿ ನಾಗರಕಲ್ಲಿಗೆ ಹಾಲನ್ನೆರೆಯುವ ಮೂಲಕ ಹಬ್ಬದ ಆಚರಣೆ ಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ