ಸಮಸ್ಯೆಗಳ ಸರಮಾಲೆ ಹೊದ್ದಿರುವ ಕಛೇರಿ :ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು 30ದಿನಗಳ ಗಡುವು
ಹುಳಿಯಾರು: ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸದಸ್ಯರಿಂದ "ಲಂಚ ಮುಕ್ತ ಚಿಕ್ಕನಾಯಕನಹಳ್ಳಿ" ಅಭಿಯಾನದ ಮುಂದುವರೆದ ಭಾಗವಾಗಿ ಲಂಚಮುಕ್ತ ಕಂದಿಕೆರೆ ಪಂಚಾಯ್ತಿ ಅಭಿಯಾನವನ್ನು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಂದೀಕೆರೆ ಹೋಬಳಿ ಗ್ರಾಮಪಂಚಾಯ್ತಿಯ ಮುಂದೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸದಸ್ಯರುಗಳು. |
ಹತ್ತು ಗಂಟೆ ಸುಮಾರಿಗೆ ವೇದಿಕೆಯ ಸದಸ್ಯರುಗಳು ಹಾಗೂ ಸಾರ್ವಜನಿಕರೊಂದಿಗೆ ಅಭಿಯಾನ ಆರಂಭಿಸಿ ಕಂದಿಕೆರೆಯ ವಿವಿಧ ಸರ್ಕಾರಿ ಕಛೇರಿಗಳಿಗೆ ಭೇಟಿ ನೀಡಿ ಅಲ್ಲಿನ ನ್ಯೂನತೆಗಳನ್ನು ಪಟ್ಟಿಮಾಡಲಾಯಿತು.
ಸಾರ್ವಜನಿಕರ ದೂರನ್ನಾಧರಿಸಿ ಮೊದಲಿಗೆ ಅಲ್ಲಿನ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಗ್ರಾಮ ಪಂಚಾಯತ್ ಯೋಜನೆಗಳ ಅನುಷ್ಟಾನ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಮತ್ತು ಗ್ರಾಮ ಸಭೆಗಳ ಬಗ್ಗೆ ವಿವರಣೆ ಪಡೆಯಲಾಯಿತು.ದಾಖಲೆಗಳ ಪರಿಶೀಲನೆ ಮಾಡಲಾಗಿ ನಮ್ಮ ಗ್ರಾಮ,ನಮ್ಮ ಯೋಜನೆಯ ಜಾರಿ ಮಾಡಿಲ್ಲದಿರುವುದು,ಪಂಚಾಯ್ತಿ ಸದಸ್ಯರ ಆಸ್ತಿ ವಿವರ ಲಭ್ಯವಿಲ್ಲದಿರುವುದು,ಪಂಚಾಯ್ತಿಯಲ್ಲಿ ದೊರೆಯಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಫಲಕ ಪ್ರದರ್ಶಿಸದಿರುವುದು,ದೂರುಪೆಟ್ಟಿಗೆ ಇಲ್ಲದಿರುವುದು,ಸಕಾಲ ಅನುಷ್ಟಾನ ,ಮಾಹಿತಿ ಹಕ್ಕು ಅನುಷ್ಟಾನದಲ್ಲಿ ಹಿನ್ನಡೆ ಹೀಗೆ ಅನೇಕ ಕೊರತೆಗಳನ್ನು ಪಟ್ಟಿ ಮಾಡಲಾಯಿತು.
ನೀರಿನ ಟ್ಯಾಂಕ್ ಗಳನ್ನು ಸ್ಪಚ್ಛಗೊಳಿಸಿ ವರ್ಷಗಳೇ ಕಳೆದಿದೆ ,ಮನೆಗಳ ಗ್ರಾಂಟ್ ರೆಕಾರ್ಡ ಮಾಡಿಸಲು ಬಿಲ್ ಕಲೆಕ್ಟರ್ 2ಸಾವಿರ ಲಂಚ ಪಡೆಯುತ್ತಿದ್ದಾನೆ ಎಂದು ಸಾರ್ವಜನಿಕರು ದೂರಿದ ಮೇರೆಗೆ ವಿಚಾರಣೆ ನಡೆಸಿ,ಇಲ್ಲಿ ಕಂಡುಬಂದ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಪಿಡಿಓಗೆ 30ದಿನಗಳ ಗಡುವು ನೀಡಲಾಯಿತು.
ನಂತರ ನಾಡ ಕಛೇರಿಗೆ ತೆರಳಿ ಅಲ್ಲಿನ ವ್ಯವಸ್ಥೆಯನ್ನು ಪರಿವೀಕ್ಷಣೆ ಮಾಡಲಾಯಿತು. ಕಛೇರಿಯಲ್ಲಿ ಸೇವೆಗಳ ಮಾಹಿತಿಯನ್ನು ವಿವರವಾಗಿ ಪ್ರಕಟಿಸಿರುವುದರ ಜೊತೆಗೆ ಸಕಾಲ ಯೋಜನೆಯಡಿ ಅರ್ಜಿಗಳ ವಿಲೇವಾರಿ ,ಮಾಹಿತಿ ಹಕ್ಕಿಗೆ ಚ್ಯುತಿ ಬರದಂತೆ ಪಾಲಿಸುತ್ತಿರುವುದು ಗಮನ ಸೆಳೆಯಿತು.ಇಲ್ಲಿನ ಉಪತಹಸೀಲ್ದಾರ್ ಸುಮತಿ ಅವರ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದ ಸಾರ್ವಜನಿಕರು ವಿಧವಾವೇತನ ,ವೃದ್ಧಾಪ್ಯವೇತನ ಪಿಂಚಣಿಯಂತಹ ಯೋಜನೆಗಳಿಗೆ ಅರ್ಜಿ ಸಲ್ಲಿಸಿದರೆ ಖುದ್ದು ಮನೆ ಬಾಗಿಲಿಗೇ ಹೋಗಿ ಕಾನೂನಿನ ಇತಿ ಮಿತಿಯಲ್ಲಿ ತುರ್ತಾಗಿ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿದ್ದು ಮದ್ಯವರ್ತಿಗಳಿಂದ ಈ ಕಛೇರಿ ಮುಕ್ತವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ರೈತಸಂಪರ್ಕ ಕೇಂದ್ರಕ್ಕೆ ತೆರಳಿ ಪರಿಶೀಲಿಸಲಾಯಿತು. ರೈತರ ಸಂಪರ್ಕವೇ ಇಲ್ಲದೇ ರೀತಿಯಿರುವ ಈ ಇಲಾಖೆಯಲ್ಲಿ ಎಲ್ಲಾ ನೀತಿ ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡುಬಂದ ಹಿನ್ನಲೆಯಲ್ಲಿ ತಾಲ್ಲೂಕ್ ಅಧಿಕಾರಿಗಳಿಗೆ ದೂರು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ "ಲಂಚಮುಕ್ತ ಕರ್ನಾಟಕ ನಿರ್ಮಾಣವೇದಿಕೆ"ಯ ರಾಜ್ಯಕಾರ್ಯದರ್ಶಿ ವೆಂಕಟೇಶ್ ಪ್ರಸಾದ್, ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನಯ್ಯ ಭಟ್ಟರಹಳ್ಳಿ, ತಾಲ್ಲೋಕು ಕಾರ್ಯದರ್ಶಿ ರಾಮನಹಳ್ಳಿ ಕುಮಾರಯ್ಯ,ಹುಳಿಯಾರು ಹೋಬಳಿ ಸಂಚಾಲಕ ಸಜ್ಜಾದ್ ,ಜನಸಂಗ್ರಾಮ ಪರಿಷತ್ ರಾಜ್ಯ ಉಪಾದ್ಯಕ್ಷ ಯತಿರಾಜು,ರೈತಸಂಘದ ನಾಗರಾಜು , ಸುರೇಶ್ ಸೇರಿದಂತೆ ಮೇಲನಹಳ್ಳಿ,ಕಂದಿಕೆರೆ, ರಾಮಪ್ಪನಹಟ್ಟಿ, ತಿಮ್ಮನಹಳ್ಳಿ,ರಾಮನಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ