ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಮೇ.13 ರ ಸೋಮವಾರ ಮಧ್ಯಾಹ್ನ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ನೂರಾರು ಭಕ್ತರ ಹರ್ಷೋದ್ಗಾರದ ಜೊತೆ ವೈಭಯುತವಾಗಿ ಜರುಗಿತು.
ಜಾತ್ರೆಯ ಅಂಗವಾಗಿ ಮೇ.11ರ ಶನಿವಾರ ಬೆಳಿಗ್ಗೆ ಸ್ವಾಮಿಯವರ ಧ್ವಜಾರೋಹಣ ನಡೆದಿದ್ದು,ಇದೇ ದಿನ ಸ್ವಾಮಿಯ ಮೂಲಸ್ಥಾನವಾದ ಕೆಂಕೆರೆಯಿಂದ 3 ಕಿ.ಮೀ.ದೂರದ ಪುರದಮಠಕ್ಕೆ ಸ್ವಾಮಿ ಸೇರಿದಂತೆ ಗ್ರಾಮದೇವತೆ ಲೋಕಮಾತೆ ಕಾಳಮ್ಮ ,ದಮ್ಮಡಿಹಟ್ಟಿ ಈರಬೊಮ್ಮಕ್ಕ ದೇವಿಯವರೊಂದಿಗೆ ಕಾಲ್ನಡಿಗೆಯಲ್ಲಿ ಹೋಗಿ, ನಂತರ ಮೇ.12ರ ಭಾನುವಾರ ಬೆಳಗಿನ ಜಾವ ಸ್ವಾಮಿಯ ಗಂಗಾಪ್ರವೇಶ,ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾಕಾರ್ಯಗಳೊಂದಿಗೆ ಪ್ರಸಾದ ವಿನಿಯೋಗ ನಡೆದು,ಅದೇ ದಿನ ಕೆಂಕೆರೆ ಗ್ರಾಮಕ್ಕೆ ಆಗಮಿಸಿದ ಸ್ವಾಮಿಯನ್ನು ನಡೆಮುಡಿಯೊಂದಿಗೆ ದೇವಾಲಯಕ್ಕೆ ಕರೆತರಲಾಗಿತ್ತು.ಇಂದು ಮುಂಜಾನೆ ಮಹದೇವಮ್ಮ , ಚನ್ನಬಸವಯ್ಯ ದಂಪತಿಗಳು ಹಾಗೂ ಈಶ್ವರಪ್ಪ ನವರಿಂದ ರಥಕ್ಕೆ ಪುಣ್ಯಾಹ ಕಾರ್ಯ ನಡೆಸಿ ಕಳಸ ಸ್ಥಾಪಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಸ್ವಾಮಿಯನ್ನು ಬಸವನ ಉತ್ಸವ ಹಾಗೂ ಧ್ವಜದ ಕುಣಿತದೊಂದಿಗೆ ಮೆರವಣಿಗೆಯಲ್ಲಿ ಕರೆತಂದು,ರಂಗುರಂಗಿನ ಬಾವುಟ,ಎಳನೀರ ಗೊಂಚಲು,ಬಾಳೆಗೊನೆ,ಕೊಬ್ಬರಿಹಾರ ಸೇರಿದಂತೆ ವಿವಿಧ ಮಾದರಿಯ ಹೂ,ಹಾರಗಳಿಂದ ಶೃಂಗರಿಸಿದ್ದ ರಥಕ್ಕೆ ಕಾಳಿಕಾಂಬ ದೇವಿಯೊಂದಿಗೆ ಕುಳ್ಳಿರಿಸಲಾಯಿತು, ನೆರೆದಿದ್ದ ಕೂಗುತ್ತಾ ನೂರಾರು ಜನ ಜಯಘೋಷಗಳನ್ನು ಕೂಗುತ್ತಾ ತೆರನ್ನೇಳೆದು ಸಂಭ್ರಮಿಸಿದರೆ, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದವರು ರಥದ ಗಾಲಿಗೆ ಕಾಯಿ ಹೊಡೆದು ಪೂಜೆ ಸಲ್ಲಿಸಿದರು. ಜಾತ್ರೆಗೆ ಆಗಮಿಸಿದ್ದ ಭಕ್ತಾಧಿಗಳಿಗೆ ಪಾನಕ,ಪನಿವಾರ ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ