ಇಲ್ಲಿನ ಗ್ರಾಮದೇವತೆ ದುರ್ಗಾಪರಮೇಶ್ವರಿದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಶನಿವಾರ ಸಿಡಿ ಕಾರ್ಯ ಹಾಗೂ ಓಕಳಿ ಸೇವೆ ಅಪರಿಮಿತ ಜನಸ್ತೋಮದ ಹರ್ಷೋದ್ಗಾರದ ನಡುವೆ ವಿಧಿವತ್ತಾಗಿ ನಡೆಯಿತು.
ಶಕ್ತಿ ದೇವತೆ ದುರ್ಗಮ್ಮ ದೇವಿಯ ಜಾತ್ರೆಯ ಪ್ರಮುಖ ಘಟ್ಟ ಸಿಡಿ ಉತ್ಸವವಾಗಿದ್ದು ಇದು ಹಲವು ವರ್ಷಗಳಿಂದಲ್ಲೂ ಆಚರಿಸಿಕೊಂಡು ಬಂದ ಧಾರ್ಮಿಕ ಸಂಪ್ರದಾಯವಾಗಿದೆ. ಗ್ರಾಮದೇವತೆಗಳಾದ ಹುಳಿಯಾರಿನ ದುರ್ಗಮ್ಮ,ಹುಳಿಯಾರಮ್ಮ ಹಾಗೂ ಕೆಂಚಮ್ಮ, ಗೌಡಗೆರೆಯ ದುರ್ಗಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ, ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿ,ಕೆ.ಸಿ.ಪಾಳ್ಯದ ಅಂತರಘಟ್ಟಮ್ಮ ದೇವಿ, ಹೊಸಹಳ್ಳಿಯ ಅಂತರಘಟ್ಟಮ್ಮ ನವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಕೆಂಪು ಹಾಗೂ ಬಿಳಿ ಬಣ್ಣ ಹಚ್ಚಿದ ಸಿಡಿ ಮರಕ್ಕೆ ಮಾವಿನ ಸೊಪ್ಪು ಕಟ್ಟುವ ಮೂಲಕ ಸಿಂಗರಿಸಲಾಗಿತ್ತು.ಸಿಡಿಮರಕ್ಕೆ ಪೂಜೆ ಸಲ್ಲಿಸಿ, ಬಲಿ ನೀಡುವ ಮೂಲಕ ಉತ್ಸವ ಪ್ರಾರಂಭವಾಗಿ ಸಿಡಿ ಕಂಬದ ತುದಿಯಲ್ಲಿ ಭಕ್ತನೊಬ್ಬ ಕೆಳಮುಖವಾಗಿ ಕಟ್ಟಿ ಮತ್ತೊಂದು ತುದಿಗೆ ದೇವಾಲಯದ ಗೌಡರುಗಳನ್ನು ಕುಳ್ಳಿರಿಸಿ ವಾದ್ಯ ಹಾಗೂ ಎಲ್ಲಾ ದೇವರುಗಳೊಂದಿಗೆ ಸಿಡಿ ಕಂಬವನ್ನು ತಿರುಗಿಸುವ ದೃಶ್ಯ ರೋಮಾಂಚನಕಾರಿಯಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ