ಹುಳಿಯಾರು ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ 43 ನೇ ವರ್ಷದ ರಥೋತ್ಸವವು ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ವಿವಿಧ ಗ್ರಾಮದೇವತೆಗಳ ಸಮ್ಮುಖದಲ್ಲಿ ವೇದ ಮಂತ್ರ ಘೋಷಗಳ ನಾದದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಶುಕ್ರವಾರದಂದು ಯಶಸ್ವಿಯಾಗಿ ಜರುಗಿತು.
ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಕಳಸ ಪ್ರತಿಷ್ಠಾಪನೆ ಸೇರಿದಂತೆ ಇನ್ನಿತರ ಧಾರ್ಮಿಕ ವಿಧಿವಿಧಾನಗಳು ಹಾಗೂ ಪೂಜಾಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿತು. ಮಂಗಳವಾಧ್ಯ ದೊಂದಿಗೆ ಶ್ರೀ ದುರ್ಗಾಪರಮೇಶ್ವರಿ ದೇವಿಯು ಮೂಲ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಗ್ರಾಮದೇವತೆಗಳಾದ ಹುಳಿಯಾರಿನ ಹುಳಿಯಾರಮ್ಮ ಹಾಗೂ ಕೆಂಚಮ್ಮ, ಗೌಡಗೆರೆಯ ದುರ್ಗಮ್ಮ,ತಿರುಮಲಾಪುರದ ಕೊಲ್ಲಾಪುರದಮ್ಮ,ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿ, ಕೆ.ಸಿ.ಪಾಳ್ಯದ ಅಂತರಘಟ್ಟಮ್ಮ ದೇವಿ, ಹೊಸಹಳ್ಳಿಯ ಅಂತರಘಟ್ಟಮ್ಮ ನವರ ಭೇಟಿ ಮಾಡಿ ,ದೇವಾಲಯವನ್ನು ಪ್ರದಕ್ಷಣೆ ಮಾಡಿಸಿ, ಭಕ್ತಾಧಿಗಳ ಉದ್ಘೋಷದೊಂದಿಗೆ ಸರ್ವಾಲಂಕೃತಗೊಂಡ ರಥಕ್ಕೆ ದುರ್ಗಾಪರಮೇಶ್ವರಿ ಅಮ್ಮನವರನ್ನು ಏರಿಸಲಾಯಿತು.ಮದ್ಯಾಹ್ನ 2 ಗಂಟೆಗೆ ರಥಕ್ಕೆ ಕಾಯಿ ಒಡೆಯುವ ಮೂಲಕ ಹಾಗೂ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿಲಾಯಿತು.
ರಥೋತ್ಸವಕ್ಕೂ ಮುನ್ನ ಸೋಮನನ್ನು ಸಿಂಗರಿಕೊಂಡು ಸಕಲ ವಾದ್ಯಗಳೊಂದಿಗೆ ರೇವಣಪ್ಪ ಸ್ವಾಮಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ,ಪಾನಕದ ಗಾಡಿಯನ್ನು ಜೊತೆಯಲ್ಲಿ ಕರೆತರಲಾಯಿತು.
ಮುಂಜಾನೆಯಿಂದಲೇ ಕಿಕ್ಕಿರಿದು ನೆರದಿದ್ದ ನೂರಾರು ಭಕ್ತಾಧಿಗಳು ಅಮ್ಮವನರು ತೇರನೇರಿದ ತಕ್ಷಣವೇ ಜಯಘೋಷ ಕೂಗುತ್ತಾ ತೇರನ್ನೆಳದು ಸಂಭ್ರಮಿಸಿದರು. ಮಂಗಳವಾಧ್ಯದೊಂದಿಗೆ ಸಾಗಿಬಂದ ರಥಕ್ಕೆ ಬಾಳೆಹಣ್ಣು,ಧವಸ ತೂರುವ ಮೂಲಕ ಭಕ್ತರು ತಮ್ಮ ಭಕ್ತಿ ಹಾಗೂ ಹರಕೆಯನ್ನು ಸಮರ್ಪಿಸಿದರು.ಭಕ್ತಾಧಿಗಳು ಹಾಗೂ ಹೆಣ್ಣುಮಕ್ಕಳು ಹಣ್ಣು ಕಾಯಿ ಮಾಡಿಸಿ ತಮ್ಮ ಇಷ್ಟ ದೈವವನ್ನು ಕಣ್ಣಿಗೆ ತುಂಬಿಕೊಂಡರು .ರಥೋತ್ಸವದ ಅಂಗವಾಗಿ ಪಾನಕ,ಕೋಸುಂಬರಿ ಹಾಗೂ ಮಜ್ಜಿಗೆ ವಿತರಿಸಲಾಯಿತು.ಬೆಂಗಳೂರು ಕಾಡಿಗಾನಹಳ್ಳಿಯ ಸುಬ್ರಹ್ಮಣ್ಯ ಅವರಿಂದ ನೆರೆದಿದ್ದ ಭಕ್ತಾಧಿಗಳಿಗೆ ಹಾಗೂ ವಿಪ್ರಸಂಘದಿಂದ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ನಡೆಯಿತು.ಹುಳಿಯಾರು ಸುತ್ತಮುತ್ತಲಿನ ಹಾಗೂ ದೂರದೂರುಗಳ ಭಕ್ತಾಧಿಗಳು ಆಗಮಿಸಿ,ಅಮ್ಮನವರ ರಥೋತ್ಸವವ ನೋಡಿ,ಅಮ್ಮನವರ ಆಶೀರ್ವಾದವನ್ನು ಪಡೆದು ಸಂಭ್ರಮಿಸಿದರು.
ಧರ್ಮದರ್ಶಿ ಶಿವಕುಮಾರ್,ಕನ್ವಿನರ್ ವಿಶ್ವನಾಥ್, ಸುಭ್ರಮಣ್ಯ, ದುರ್ಗಯ್ಯ, ಕುಮಾರ್,ಪಟೇಲ್ ರಾಜ್ ಕುಮಾರ್, ಎಲ್.ಆರ್. ಚಂದ್ರ ಶೇಖರ್ ಸೇರಿದಂತೆ ವಿವಿಧ ಸಂಘಸಂಸ್ಥೆಯವರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ