ಹುಳಿಯಾರು:ಬ್ಯಾಂಕ್,ಪತ್ತಿನ ಸಂಘಗಳು ವ್ಯವಹಾರಿಕವಾಗಿ ಲಾಭದಾಯಕವಾಗಿ ನಡೆಯುವುದರ ಜೊತೆಗೆ ಹಣದ ಅಗತ್ಯತೆಯಿರುವವರಿಗೆ ,ದುರ್ಭಲರಿಗೆ ಅವಶ್ಯಕತೆ ಪೂರೈಸುವ ಕಾಮಧೇನುವಾಗಬೇಕು ಎಂದು ಸಾಹಿತಿ ಎಂ.ವಿ.ನಾಗರಾಜ್ ರಾವ್ ಅಭಿಪ್ರಾಯಪಟ್ಟರು.
ಹುಳಿಯಾರು ಪಟ್ಟಣದ ಗಾಯತ್ರಿ ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಸಾಹಿತಿ ಎಂ.ವಿ.ನಾಗರಾಜ್ ರಾವ್ ಮಾತನಾಡಿದರು. |
ಹುಳಿಯಾರಿನಲ್ಲಿ ಶನಿವಾರದಂದು ನಡೆದ ಗಾಯತ್ರಿ ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಶ್ರೀಮಂತರ ಹಣವನ್ನು ಬ್ಯಾಂಕುಗಳು ಹತ್ತಾರು ಜನಕ್ಕೆ ಸಾಲ ನೀಡುವುದರ ಮುಖಾಂತರ ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿದ್ದು ,ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮುಖಾಂತರ ಬ್ಯಾಂಕಿನ ಅಭಿವೃದ್ಧಿಗೆ ನೆರವಾಗಬೇಕು ಎಂದರು.ಶೇರುದಾರರ ನಂಬಿಕೆ ,ವಿಶ್ವಾಸ ಬೆಳಸಿಕೊಂಡಲ್ಲಿ ಮಾತ್ರವೇ ಪತ್ತಿನ ಸಂಘಗಳು ಅಭಿವೃದ್ಧಿಯಾಗಲು ಸಾಧ್ಯವೆಂದರು.
ಸೇವಾ ಸಂಘದಲ್ಲಿ ಅಭಿಪ್ರಾಯ,ಭಿನ್ನಾಭಿಪ್ರಾಯ,ಟೀಕೆ ಟಿಪ್ಪಣೆ ಸಹಜವಾಗಿದ್ದು ಟೀಕೆ ಎದುರಿಸಿ ಪ್ರಶಂಸೆ ಸ್ವೀಕರಿಸಿದಲ್ಲಿ ಮಾತ್ರವೇ ಬೆಳವಣಿಗೆ ಸಾಧ್ಯ ಎಂದು ಕಿವಿಮಾತು ಹೇಳಿದರು.
ತುಮಕೂರಿನ ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎನ್.ರಮೇಶ್ ಮಾತನಾಡಿ ಹುಳಿಯಾರಿನ ಗಾಯತ್ರಿ ಪತ್ತಿನ ಸಹಕಾರ ಸಂಘ ಪ್ರಾರಂಭವಾದ ಅಲ್ಪ ಅವಧಿಯಲ್ಲೆ ಪ್ರಗತಿ ಸಾಧಿಸಿರುವುದು ಶ್ಲಾಘನೀಯ.ಶೇರುದಾರರ,ಹೂಡಿಕೆದಾರರ ಹಣವನ್ನು ಸಾಲದ ರೂಪದಲ್ಲಿ ವಹಿವಾಟು ನಡೆಸಿ ಬಂದ ಆದಾಯವನ್ನು ಡಿವಿಡೆಂಟ್ ರೂಪದಲ್ಲಿ ಶೇರುದಾರರಿಗೆ ನೀಡುವುದು ಸಂಘದ ಅಧ್ಯಕ್ಷರ ಹೊಣೆಗಾರಿಕೆ ಎಂದರು.
ಬ್ಯಾಂಕುಗಳಲ್ಲಿ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಜನ ಸೊಸೈಟಿ ಸಾಲವೆಂದರೆ ಉದಾಸೀನ ಮಾಡಿ ಸಾಲಕಟ್ಟದೆ ಸತಾಯಿಸುವ ಮನೋಭಾವ ಬಿಡಬೇಕು. ಸೊಸೈಟಿಯ ಆಸ್ತಿ ನಮ್ಮನಿಮ್ಮಲ್ಲರ ಆಸ್ತಿಯಾಗಿದ್ದು ಸಂಘ ಅಭಿವೃದ್ಧಿ ಪಡಿಸುವ ಕಡೆ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ತುಮಕೂರಿನ ಗಾಯತ್ರಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಅನಂತರಾಮಯ್ಯ, ನಿರ್ದೇಶಕ ರಾದ ಸತ್ಯನಾರಾಯಣ್ ಮಾತನಾಡಿದರು.
ಸಂಘದ ಕಾರ್ಯದರ್ಶಿ ಮಂಜುನಾಥ್ ಆರ್ಥಿಕ ಸಾಲಿನ ಜಮಾಖರ್ಚಿನ ವಿವರ ನೀಡಿದರು. ಸಭೆಯಲ್ಲಿ ಪ್ರಸಕ್ತ ಸಾಲಿನ ಹಾಗೂ ಮುಂಬರುವ ಸಾಲಿನ ಯೋಜನೆಗಳ ಬಗ್ಗೆ ಒಪ್ಪಿಗೆ ಪಡೆಯಲಾಯಿತು.
ಎಂ.ಎ.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು.ಅನಂತಯ್ಯ ಸ್ವಾಗತಿಸಿ,ಶ್ರೀಮತಿ ಸುಧಾ ನಿರೂಪಿಸಿ,ರಾಜೀವ್ ವಂದಿಸಿದರು.
ಹುಳಿಯಾರು, ಚಿಕ್ಕನಾಯಕನಹಳ್ಳಿ, ಹಂದನಕೆರೆ, ಶೆಟ್ಟಿಕೆರೆ, ಸಾಲಾಪುರ, ಎಣ್ಣೆಗೆರೆ, ತಿಮ್ಲಾಪುರ ಭಾಗದ ಶೇರುದಾರರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ