ಹುಳಿಯಾರು: ಟೀವಿ ಮಾಧ್ಯಮಗಳ ಹಾವಳಿಯಿಂದ ಇಂದು ಹರಿಕಥೆ,ನಾಟಕ,ಭಜನೆ ಮುಂತಾದ ದೇಸಿ ಕಲೆ ನಶಿಸುತ್ತಿರುವ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರು ನಿರ್ವಹಿಸಬೇಕಿದೆ ಎಂದು ಬೆಲಗೂರು ಶ್ರೀಬಿಂಧುಮಾಧವ ಸ್ವಾಮಿಗಳು ತಿಳಿಸಿದರು.
ಹುಳಿಯಾರಿನಲ್ಲಿ ರಂಗಭೂಮಿ ಕಲಾವಿದರ ಸಂಘದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಬೆಲಗೂರು ಶ್ರೀಬಿಂಧುಮಾಧವ ಸ್ವಾಮಿಗಳು ಆರ್ಶೀವಚನ ನೀಡಿದರು.
ಹುಳಿಯಾರಿನ ಬಿಂಧುಮಾಧವ ಕಾಂಪ್ಲೆಕ್ಸ್ ನಲ್ಲಿ ತಾಲೂಕು ರಂಗಭೂಮಿ ಕಲಾವಿದರ ಸಂಘದಿಂದ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿ ಕಲೆ, ಸಂಸ್ಕೃತಿ, ಸಂಸ್ಕಾರವೇ ಭಾರತ ದೇಶದ ಆಸ್ತಿ. ಆದರೆ ಪಾಶ್ಚಾತ್ಯ ಸಂಸ್ಕೃತಿಗೆ ಭಾರತೀಯರು ಮಾರುಹೋಗುತ್ತಿರುವುದರಿಂದ ದೇಸಿ ಕಲೆಗಳಾದ ನಾಟಕಕಲೆ, ಸಂಗೀತ, ಜಾನಪದ, ಗಮಕಕಲೆ ಅವಸಾನದತ್ತ ಸಾಗಿದೆ ಎಂದು ವಿಷಾದಿಸಿದರು.
ನಾಟಕ ಕಲೆ ಎಂಬುದು ನಮ್ಮ ಸನಾತನ ಧರ್ಮದಿಂದಲೂ ಬಂದಿರುವಂತಹ ಉತ್ತಮ ಕಲೆಯಾಗಿದ್ದು ರಾಮಾಯಣ, ಮಹಾಭಾರತ ಹಾಗೂ ಹರಿದಾಸರ ಕೀರ್ತನೆಗಳಲ್ಲಿ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಂತಹ ಒಳ್ಳೆಯ ಸತ್ವ ಅಡಗಿದೆ ಎಂದರು.
ನಾಟಕ ಪ್ರದರ್ಶನದಲ್ಲಿ ಅಭಿನಯಿಸುವ ಕಲಾವಿದರು ಸಮಯ ಪ್ರಜ್ಞೆಯನ್ನ ಹೊಂದಿ ಪ್ರದರ್ಶನದಲ್ಲಿ ಆಕಸ್ಮಿಕವಾಗಿ ಎದುರಾಗುವ ಲೋಪದೋಷಗಳನ್ನ ಸರಿಪಡಿಸಿಕೊಂಡು ಪ್ರದರ್ಶನ ನೀಡುವ ಕಲೆಯನ್ನ ಕರಗತ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಎಲೆಮರೆಯ ಕಾಯಿಯಂತಿರುವ ರಂಗಭೂಮಿಯ ಕಲಾವಿದರನ್ನ ಗುರುತಿಸಿ ಗೌರವಿಸುತ್ತಿರುವ ತಾಲೂಕು ರಂಗಭೂಮಿ ಕಲಾವಿದರ ಸಂಘ ಮತ್ತಷ್ಟು ಬೆಳಯಲಿ ಎಂದು ಹಾರೈಸಿದರು
.
ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ಖಜಾಂಜಿ ಸಿದ್ದು ಜಿ.ಕೆರೆ ಅವರು ಮಾತ ನಾಡಿ ಕಲಾವಿದರಲ್ಲಿ ಸಂಘಟನೆ ಕೊರತೆಯಿಂದ ಸರ್ಕಾರದ ಸೌಲಭ್ಯ ಪಡೆಯುವಲ್ಲಿ ವಿಫಲರಾಗಿದ್ದಾರೆ. ತಾಲ್ಲೂಕಿನ ಶೇ.೯೦ ರಷ್ಟು ಅರ್ಹ ಕಲಾವಿದರಿಗೆ ಇಂದು ಮಾಶಾಸನ ಸಿಗದಾಗಿದೆ. ಹಾಗಾಗಿ ರಂಗಭೂಮಿ ಕಲಾವಿದರ ಸಂಘ ರಚಿಸಲಾಗಿದ್ದು ಸದಸ್ಯತ್ವ ಪಡೆದ ಕಲಾವಿದರಿಗೆ ಸರಕಾರದಿಂದ ಸಿಗುವ ಮಾಸಿಕ ವೇತನ ಸೇರಿದಂತೆ ಎಲ್ಲಾ ರೀತಿ ಸೌಲಭ್ಯ ಕಲ್ಪಿಸಿಕೊಡುವ ಕೆಲಸವನ್ನು ನಮ್ಮ ಸಂಘದಿಂದ ನಿರ್ವಹಿಸಲಾಗುವುದು ಎಂದರು.
ಈ ವೇಳೆ ತಾಲ್ಲೂಕಿನ ಎಲ್ಲಾ ಹಿರಿಯ ಕಲಾವಿದರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾವಲಟ್ಟಿ ಗುರುಗಳಾದ ಹಜರತ್ ಮಹಮದ್ ಅನ್ವರ್ ಬಾಬ, ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್, ಕಾರ್ಯಕ್ರಮದ ಸಂಘಟಕ ಖಲಂದರ್ ಸಾಬ್, ರಂಗಭೂಮಿ ಸಂಘದ ಶಂಕರಲಿಂಗಪ್ಪ, ಜಿ.ಎಲ್. ಮಹೇಶ್, ಕೆ.ಬಿ.ಕ್ರಾಸ್ ರಂಗಸ್ವಾಮಿ, ಕೆಎಸ್‌ಆರ್‌ಟಿಸಿ ಕೆಂಪರಾಜು, ಬರಗೂರುಶಿವಲಿಂಗಪ್ಪ, ದಕ್ಷಿಣ ಮೂರ್ತಿ, ನಂದಿಹಳ್ಳಿ ರಾಜಣ್ಣ,ಗ್ರಾಪಂ ಸದಸ್ಯರಾದ ರಂಗನಾಥ್, ಪುಟ್ಟಣ್ಣ, ಗೀತಾಬಾಬು, ಕಿರುತೆರೆಯ ಕಲಾವಿದ ಗೌಡಿ, ಬಿ.ಗೋಪಾಲಸ್ವಾಮಿ,ಭವಾನಿರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ