ಶಿಕ್ಷಕರ ಕೌನ್ಸೆಲ್ಲಿಂಗ್ ಪಟ್ಟಿಯಲ್ಲಿ ಅವ್ಯವಹಾರ ನಡೆದಿದ್ದು ತನಿಖೆ ನಡೆಸಬೇಕೆಂದು ಹುಳಿಯಾರಿನ ಪ್ರವಾಸಿಮಂದಿರದಲ್ಲಿ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಾಸಲು ಸತೀಶ್ ಪತ್ರಿಕಾಗೋಷ್ಟಿ ನಡೆಸಿದರು. |
ಹುಳಿಯಾರು:ತಾಲ್ಲೂಕಿನಲ್ಲಿ ಗಡಿಭಾಗದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ ಶಿಕ್ಷಕರ ಕೌನ್ಸೆಲ್ಲಿಂಗ್ ಮಾಡಿ ಕೊರತೆಯಿದ್ದ ಹುದ್ದೆಗಳಿಗೆ ಶಿಕ್ಷಕರನ್ನು ನಿಯೋಜನೆ ಮೂಲಕ ವರ್ಗಾವಣೆ ಮಾಡಲಾಗಿದ್ದ ಪಟ್ಟಿಯಲ್ಲಿ ಕೆಲವು ಪ್ರಭಾವಿ ಶಿಕ್ಷಕರ ಮರ್ಜಿಗೆ,ಒತ್ತಡಕ್ಕೆ ಒಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೆಲ ರಾಜಕೀಯ ಬೆಂಬಲಿತ ಶಿಕ್ಷಕರ ವರ್ಗಾವಣೆಯನ್ನು ತಡೆಹಿಡಿದ್ದಿದ್ದಾರೆಂದು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಾಸಲು ಸತೀಶ್ ಆರೋಪಿಸಿದ್ದಾರೆ.
ಹುಳಿಯಾರಿನ ಪ್ರವಾಸಿಮಂದಿರದಲ್ಲಿ ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿದ ಅವರು ತಾಲ್ಲೂಕಿನ ಗಡಿಭಾಗದ ಶಾಲಾ ಶಿಕ್ಷಕರ ಸಮಸ್ಯೆ ಪರಿಹರಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಸಮರ್ಥರಾಗಿದ್ದು ಶಾಸಕರ ಹಾಗೂ ಕೆಲ ಅರೆ ರಾಜಕಾರಣಿ ಶಿಕ್ಷಕರ ತಾಳಕ್ಕೆ ತಕ್ಕಂತೆ ಕುಣಿದು ಡೆಪ್ಯೂಟೇಷನ್ ಪಟ್ಟಿಯಲ್ಲಿ ಅದಲು ಬದಲು ಮಾಡಿ ತಮಗೆ ಬೇಕಾದಂತೆ ಮಾರ್ಪಾಟು ಮಾಡಿದ್ದಾರೆ.ಪ್ರಭಾವಿಗಳ ಒತ್ತಡಕ್ಕೆ ಒಳಗಾಗಿ ಗಡಿಭಾಗಕ್ಕೆ ವರ್ಗಾವಣೆ ಮಾಡಿದ್ದ ಕೆಲ ಶಿಕ್ಷಕರನ್ನು ಹಾಗೆಯೇ ಉಳಿಸಿದ್ದಾರೆ ಎಂದು ಆರೋಪಿಸಿದರು.
ಅಸಹಾಯಕರನ್ನು ಗಡಿಭಾಗಕ್ಕೆ ಡೆಪ್ಯೂಟ್ ಮಾಡಿ,ಪ್ರಭಾವಿಗಳನ್ನು ಮಾತ್ರ ಅವರಿಗೆ ಬೇಕಾದ ಕಡೆ ಹಾಕಿಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ.ಇದರಲ್ಯಾಕೆ ರಾಜಕೀಯ,ತಾರತಮ್ಯ ಎಂದ ಅವರು ಅಸಹಾಯಕರ ಪರ ತಾವಿದ್ದು ಇಂತಹ ಅನ್ಯಾಯವನ್ನು ಖಂಡಿಸುವುದಾಗಿ ತಿಳಿಸಿದರು.
ತಾಲ್ಲೂಕಿನಲ್ಲಿ ಕೆಲವು ಶಿಕ್ಷಕರು ತಮ್ಮ ವೃತ್ತಿ ಜವಬ್ದಾರಿ ಮರೆತು ರಾಜಕಾರಣ ಮಾಡಿತ್ತಿದ್ದು ರಾಜಕೀಯ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಶಿಕ್ಷಕರ ರಾಜಕಾರಣ ನೋಡಿಕೊಂಡು ಗ್ರಾಮಸ್ಥರು, ಪೋಷಕರು ಮೌನವಾಗಿರುವ ಕಾರಣವಾದರೂ ಏನು,ಯಾರ ಮರ್ಜಿಗೆ ಒಳಗಾಗಿ ಪ್ರಶ್ನಿಸಲು ಮುಂದಾಗುತ್ತಿಲ್ಲ. ಶಾಸಕರು ಶಿಕ್ಷಕರನ್ನು ರಾಜಕೀಯಕ್ಕೆ ತೊಡಗಿಸಿಕೊಂಡು ದುರುಪಯೋಗ ಮಾಡಿಕೊಳ್ಳುತ್ತಿದ್ದು ಇಂತಹ ತೊಗಲಕ್ ದರ್ಬಾರ್ ನಿಲ್ಲಬೇಕು ಎಂದರು.
ರಾಜಕಾರಣ ಮಾಡುವ ಕೆಲ ಶಿಕ್ಷಕರಿಂದ ವೃತ್ತಿ ಗೌರವ ಹಾಳಾಗುತ್ತಿದ್ದು ಶಿಕ್ಷಕರು ಪಡೆಯುವ ಸಂಬಳ ತಕ್ಕ ಕನಿಷ್ಟ ಪಾಠವನ್ನಾದರೂ ಮಾಡಬೇಕು.ಪಾಠಮಾಡುವುದರ ಬದಲು ರಾಜಕಾರಣದಲ್ಲಿ ತೊಡಗಿಕೊಳ್ಳುವ ಶಿಕ್ಷಕರುಗಳು ಹುದ್ದೆಗೆ ರಾಜೀನಾಮೆ ನೀಡಿ ಪೂರ್ಣಾವಧಿ ರಾಜಕಾರಣಕ್ಕೆ ಬಂದು .ಚುನಾವಣೆಗೆ ಸ್ಪರ್ಧೆಮಾಡಿ ಎಂದರು.ಸರ್ಕಾರಿ ಸಂಬಳ ಪಡೆದು ರಾಜಕೀಯ ಮಾಡಿಕೊಂಡು ಓಡಾದುವುದನ್ನು ಬಿಡಿ ಎಂದು ಲೇವಡಿ ಮಾಡಿದರು.
ಗಡಿ ಭಾಗಕ್ಕೆ ನಿಯೋಜನೆಗೊಂಡಿದ್ದ ಶಿಕ್ಷಕರು ಬದಲು ಮಾಡಿಕೊಳ್ಳಲು ಬೋಗಸ್ ಮೆಡಿಕಲ್ ಸರ್ಟಿಫಿಕೇಟ್ ಕೊಟ್ಟಿದ್ದು ಈ ಸುಳ್ಳು ವರದಿಗಳನ್ನು ತನಿಖೆಮಾಡಬೇಕು.ನಕಲಿ ಆರೋಗ್ಯ ತಪಾಸಣ ಪಟ್ಟಿಯನ್ನು ಕೊಟ್ಟಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳೇ,ಡೆಪ್ಯೂಟೇಷನ್ ಆದಮೇಲೆ ಎಷ್ಟು ಜನ ಶಿಕ್ಷಕರನ್ನು ರಿಟೈನ್ ಮಾಡಿದ್ದೀರಾ,ಯಾರ್ಯಾರನ್ನು ಮಾಡಿದ್ದೀರಿ,ಯಾರ ಒತ್ತಡಕ್ಕೆ ಒಳಗಾಗಿ ಮಾಡಿದ್ದೀರಾ ಉತ್ತರಿಸಬೇಕು.ನೀವು ಇಂತಹ ಅಪವಿತ್ರ ಮೈತ್ರಿಗೆ ಮಣಿದು ಪಟ್ಟಿಯಲ್ಲಿದ್ದ ಯಾರ್ಯಾರನ್ನು ಇಂಟರ್ ಚೇಂಜ್ ಮಾಡಿದ್ದಿರೋ ಅಂಥವರನ್ನು ಡೆಪ್ಯೂಟೇಷನ್ ಮಾಡಿರುವ ಜಾಗಕ್ಕೆ ಹತ್ತುದಿನದೊಳಗೆ ವಾಪಸ್ಸು ಹಾಕಬೇಕು.ಇಲ್ಲದಿದ್ದಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ತಾಲ್ಲೂಕ್ ಬಗರ್ ಹುಕ್ಕುಂ ಕಮಿಟಿ ಸದಸ್ಯ ಹೊಸಳ್ಳಿ ಅಶೋಕ್,ಗ್ರಾಪಂ ಸದಸ್ಯರುಗಳಾದ ದಸೂಡಿ ಚಂದ್ರಣ್ಣ,ದಯಾನಂದ್, ವೆಂಕಟೇಶ್, ಎಪಿಎಂಸಿ ಸದಸ್ಯ ರುದ್ರೇಶ್,ಈರುಳ್ಳಿ ಮಂಜು,ಜಯಕರ್ನಾಟಕ ಸಂಘಟನೆಯ ಮೋಹನ್ ಕುಮಾರ್ ರೈ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ