ಕಂಚೀವರದರಾಜ ಸ್ವಾಮಿಯ ಉತ್ತರೆ ಮಳೆ ಅಂಬಿನೋತ್ಸವ
----------------------
ಹುಳಿಯಾರು:ಹುಳಿಯಾರು ಗಡಿಭಾಗದ ಕಂಚೀಪುರದಲ್ಲಿನ ಕಂಚೀವರದರಾಜ ಸ್ವಾಮಿಯ ಉತ್ತರೆ ಮಳೆ ಅಂಬಿನೋತ್ಸವದ ಆರಂಭವಾಗಿದ್ದು ಪ್ರಯುಕ್ತ ಸೆ.೨೦ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಐತಿಹ್ಯ:ಹೊಸದುರ್ಗ ತಾಲ್ಲೂಕಿನಿಂದ 28 ಕಿ.ಮೀ ದೂರದಲ್ಲಿರುವ ಕಂಚೀಪುರದ ಶ್ರೀ ಕಂಚೀವರದರಾಜ ಸ್ವಾಮಿ ಈ ಭಾಗದಲ್ಲಿ ಬಲು ಪ್ರಸಿದ್ದಿಯಾಗಿದ್ದು ಈ ದೇವರ ಉತ್ಸವಮೂರ್ತಿ ಗುಡಿಯಿಂದ ಹೊರ ನಡೆದರೆ ಸಾಕು, ಕಾಂಚಾಣದ ಮಳೆಯೇ ಸುರಿಯುತ್ತದೆ! ಇದು ಈ ದೇವರ ವಿಶೇಷ.
ಎಲ್ಲೆಡೆ ಜಾತ್ರೆ ಅಂದ್ರೆ ದೇವರ ಮೇಲೆ ಬಾಳೆಹಣ್ಣು ,ಪುರಿ ತೂರಿದರೆ ಕಂಚೀಪುರದ ಜಾತ್ರೆಯಲ್ಲಿ ಕಂಚೀವರದರಾಜ ಸ್ವಾಮಿಗೆ ಭಕ್ತರು ಹರಕೆ ಮಾಡಿಕೊಂಡ ಹಣವನ್ನು ಹುಂಡಿಗೆ ಸಮರ್ಪಿಸುವ ಬದಲು ಚಿಲ್ಲರೆ ರೂಪದಲ್ಲಿ ಸ್ವಾಮಿಯ ಮೇಲೆ ತೂರುವುದು ವಾಡಿಕೆ.
ಪೌರಾಣಿಕ ಕಥೆ ಹಿನ್ನಲೆಯಲ್ಲಿ ಭಕ್ತರು ಸ್ವಾಮಿಯ ಮೇಲೆ ಹಣ ತೂರಿ ಹರಕೆ ತೀರಿಸುವ ಪದ್ಧತಿ ರೂಢಿಗೆ ಬಂದಿದ್ದು ಭಕ್ತರು ತಮ್ಮ ಶಕ್ತ್ಯಾನುಸಾರ ನೂರು ರೂಪಾಯಿಯಿಂದ ಸಹಸ್ರಾರು ರೂಪಾಯಿವರೆಗೂ ಚಿಲ್ಲರೆ ಹಣ ತೂರುವುದು ನಡೆಯುತ್ತದೆ.ಸ್ವಾಮಿಯ ಮೇಲೆ ತೂರಿದ ಹಣವನ್ನು ಯಾರು ಬೇಕಾದರೂ ಆರಿಸಿಕೊಳ್ಳಬಹುದಿದ್ದು ನೋಡುಗರಿಗೆ ಕಾಂಚಣದ ಮಳೆ ಸುರಿದಂತೆ ಭಾಸವಾಗುತ್ತದೆ.
ಉತ್ತರೆ ಮಳೆ ಅಂಬಿನೋತ್ಸವ ಹಾಗೂ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ರಥೋತ್ಸವವನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುವುದಿದ್ದು ಈ ಬಾರಿಯ ಅಂಬಿನೋತ್ಸವ ಅಂಗವಾಗಿ ಕಂಚೀಸ್ವಾಮಿಯನ್ನು ಕಳೆದ ಗುರುವಾರದಂದು ಪಟ್ಟಕ್ಕೆ ಕೂರಿಸಿದ್ದು ನಿತ್ಯ ಮಹಾಮಂಗಳಾರತಿ ನಂತರ ಭಜನೆ ನಡೆಯುತ್ತಿದೆ.
ಉತ್ತರೆಮಳೆಯ ಸಮಯದಲ್ಲಿ ಐದು ದಿನಗಳ (ಉತ್ತರೆಮಳೆ ಹುಟ್ಟಿದ ಮೊದಲ ಗುರುವಾರದಿಂದ - ಸೋಮವಾರದವರಗೆ) ಕಾಲ ಪಟ್ಟಕ್ಕೆ ಕೂರುವ ಸ್ವಾಮಿ ಐದನೇ ದಿನವಾದ ಸೋಮವಾರದಂದು ಅಂಬಿನೋತ್ಸವದ ಮೂಲಕ ಶ್ರೀಕ್ಷೇತ್ರ ಗುರು ಸನ್ನಿದಾನ ಶ್ರೀಧಶರಥರಾಮೇಶ್ವರಸ್ವಾಮಿಯ ವಜ್ರಕ್ಕೆ ದಯಮಾಡಿಸುವುದು ನಡೆದು ಬಂದಿದೆ.
ಸೆ.೧೮ರ ಭಾನುವಾರದಂದು ರಾತ್ರಿ ಮಹಾಮಂಗಳಾರತಿ ನಂತರ ಬುತ್ತಿಬಾನದ ಸೇವೆ ನಡೆಯಲಿದೆ.ಆ ಸಮಯದಲ್ಲಿ ತಯಾರಿಸುವ ಮೊಸರನ್ನ ಮೂರು ದಿನಗಳ ನಂತರ ತೆಗೆದು ಪ್ರಸಾದವಾಗಿ ಹಂಚುವುದಿದ್ದು ಒಂದಿಷ್ಟು ಕೆಡದೆ ಘಮಘಮಿಸುವುದು ಇಲ್ಲಿನ ಪವಾಡವಾಗಿದೆ.
ಸೆ.೧೯ರ ಸೋಮವರದಂದು ಮಧ್ಯಾಹ್ನ ೩ ಗಂಟೆಯಿಂದ ಬುತ್ತಿಬಾನದೊಂದಿಗೆ ಸ್ವಾಮಿಯನ್ನು ಉತ್ಸವದ ಮೂಲಕ ದಶರಥರಾಮೇಶ್ವರ ಸ್ವಾಮಿಯ ವಜ್ರಕ್ಕೆ ಕರೆದೊಯ್ಯಲಾಗುವುದು.
ಸೆ.೨೦ ರ ಮಂಗಳವಾರದಂದು ಶ್ರೀ ಕ್ಷೇತ್ರ ವಜ್ರದಲ್ಲಿ ಗಂಗಾಸ್ನಾನ ಹಾಗೂ ಭೇಟಿ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಸೆ.೨೩ರಂದು ಶುಕ್ರವಾರ ರಾತ್ರಿ ಮುಳ್ಳುಪಾದುಕಾ ಸೇವೆ ನಂತರ ಸ್ವಸ್ಥಾನಕ್ಕೆ ವಾಪಸ್ಸಾಗುವ ಮೂಲಕ ಜಾತ್ರೆಗೆ ತೆರೆಬೀಳಲಿದೆ.
ಹೀಗೆ ಶ್ರೀಸ್ವಾಮಿಯವರ ಬುತ್ತಿಬಾನ, ಉತ್ತರೆಗುಡ್ಡ ಶ್ರೀಧಶರಥರಾಮೇಶ್ವರಸ್ವಾಮಿ ವಜ್ರದ ಸೇವೆಗಳಲ್ಲಿ ಪಾಲ್ಗೂಂಡರೆ ಸರ್ವ ಇಷ್ಟರ್ಥಗಳು ಸಿದ್ದಿಸುತ್ತವೆ ಎನ್ನುವ ನಂಬಿಕೆಯಿದ್ದು ಇಂತಹ ವಿಶೇಷ ಸಮಯದ ಉತ್ಸವದಲ್ಲಿ ಶ್ರೀಕಂಚೀವರದರಾಜಸ್ವಾಮಿಯವರಿಗೆ ದುಡ್ಡು ತೂರಿ ಭಕ್ತಿ ಸಮರ್ಪಿಸುವುದು ಸಂಪ್ರದಾಯವಾಗಿದೆ.
https://m.facebook.com/story.php?story_fbid=1769875773255745&id=100007000188371
ಕಂಚೀಪುರದ ಕಂಚೀದೇವರ ಇತಿಹಾಸವನ್ನು ಸಂಪೂರ್ಣವಾಗಿ ತಿಳಿಸುವ ಈ ವಿಡಿಯೋ ಕ್ಲಿಪ್ಪಿಂಗ್ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ.....
https://m.facebook.com/story.php?story_fbid=1769289446647711&id=100007000188371
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ