ಹುಳಿಯಾರು: ಆದಾಯ ತೆರಿಗೆ ಪಾವತಿದಾರರು ತಮ್ಮ ಅಘೋಷಿತ ಸ್ಥಿರಾಸ್ತಿ ಹಾಗೂ ಚರಾಸ್ತಿಗಳನ್ನು ಆದಾಯ ತೆರಿಗೆಯ ಐಡಿಎಸ್-2016 ಯೋಜನೆಯಡಿ ಘೋಷಿಸಿಕೊಂಡು ಈ ಯೋಜನೆಯಡಿ ಶೇ.45 ರಷ್ಟು ಆದಾಯ ತೆರಿಗೆ ಪಾವತಿಸಿ ನಿಮ್ಮ ಸಂಪಾದನೆಯನ್ನು ಘೋಷಿಸಬಹುದೆಂದು ತಿಪಟೂರು ವಲಯದ ಆದಾಯ ತೆರಿಗೆ ಅಧಿಕಾರಿ ನಿರ್ಮಲ ಸಲಹೆ ನೀಡಿದರು.
ಹುಳಿಯಾರಿನ ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರದಂದು ಆದಾಯ ತೆರಿಗೆ ಇಲಾಖೆಯಿಂದ ಏರ್ಪಡಿಸಿದ್ದ ಆದಾಯ ತೆರಿಗೆಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಯೋಜನೆಯ ಅವಧಿ ಜೂ.1 ರಿಂದ ಸೆ. 30ರ ವರೆಗೆ ಇದ್ದು ತೆರಿಗೆ ಪಾವತಿದಾರರು ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸಿ ಈ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕೆಂದರು.
ನೀವು ಈ ಹಿಂದೆ ನಿಮ್ಮ ಆದಾಯ ಘೋಷಣೆ ಮಾಡಿರದಿದ್ದರೆ, ಸರ್ಕಾರಕ್ಕೆ ತೆರಿಗೆ ಕಟ್ಟಿರದಿದ್ದರೆ ಇದು ಒಂದು ಬಾರಿಯ ಕೊನೆಯ ಅವಕಾಶವಾಗಿದ್ದು ಈ ಯೋಜನೆಯಡಿ ನೀವು ಆದಾಯ ತೆರಿಗೆ ಕಟ್ಟಿ ನಿಮ್ಮ ಸಂಪಾದನೆಯನ್ನು ಘೋಷಿಸಿ ನಿಶ್ಚಿಂತರಾಗಬಹುದು.ಎಲ್ಲಾ ತೆರಿಗೆ ಪಾವತಿದಾರರು ಐಡಿಎಸ್ 2016ರ ಯೋಜನೆಯಡಿ ಅಘೋಷಿತ ಆಸ್ತಿ ಘೋಷಿಸಿಕೊಂಡು ಯೋಜನೆ ಲಾಭ ಪಡೆದುಕೊಳ್ಳಬೇಕೆಂದರು.
ಈ ಯೋಜನೆಯನ್ವಯ ಯಾರು ಅಘೋಷಿತ ಆಸ್ತಿಗಳ ರೂಪದಲ್ಲಿ ಆದಾಯವನ್ನು ಘೋಷಣೆ ಮಾಡಿಕೊಳ್ಳಲು ಬಯಸುತ್ತಾರೋ ಅಂತವರು ಯಾವುದೇ ತರಹದ ವಿಚಾರಣೆ ಅಥವಾ ದಂಡ, ಜುಲ್ಮಾನೆಗೆ ಒಳಪಡುವುದಿಲ್ಲ.ಸಂಘ ಸಂಸ್ಥೆಗಳು, ತೆರಿಗೆ ಸಲಹೆಗಾರರು ಈ ಯೋಜನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.
ವಿವಿಧ ವ್ಯಾಪಾರವ್ಯವಹಾರ ನಡೆಸುತ್ತಿರುವ ಸಾಕಷ್ಟು ವ್ಯಾಪಾರಸ್ಥರು ಸರಕಾರಕ್ಕೆ ಕಟ್ಟ ಬೇಕಾಗಿರುವ ಆದಾಯ ತೆರಿಗೆಯನ್ನ ಕಟ್ಟದಿರುವುದು ಕಾನೂನು ಬಾಹಿರ ಅಪರಾಧವಾಗಿದ್ದು ಈಗಲಾದರು ಎಚ್ಚೆತ್ತುಕೊಂಡು ತಾವು ನಡೆಸುತ್ತಿರುವ ವ್ಯಾಪರದ ಆದಾಯದ ತೆರಿಗೆಯನ್ನ ಈ ತಿಂಗಳ ಸೆಪ್ಟೆಂಬರ್ ೩೦ರೊಳಗೆ ಕಡ್ಡಾಯವಾಗಿ ಕಟ್ಟುವಂತೆ ಹಾಗೊಂದು ವೇಳೆ ತೆರಿಗೆಯನ್ನ ಕಟ್ಟದಿದ್ದರೆ ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಟಿ.ಡಿ.ಎಸ್.ಪಾವತಿ ಮಾಡುವಾಗ ಕಳ್ಳಮಾರ್ಗ ಅನುಸರಿಸದೆ ಪ್ರಾಮಾಣಿಕವಾಗಿ ಸಮಪರ್ಕವಾದ ಮಾಹಿತಿಯನ್ನ ನೀಡುವಂತೆ ತಿಳಿಸಿದ ಅವರು ಪ್ರತಿವರ್ಷವು ಸಹಾ ತಮ್ಮ ಆದಾಯ ತೆರಿಗೆಯನ್ನ ಸರಿಯಾದ ಸಮಯಕ್ಕೆ ಸರಕಾರಕ್ಕೆ ಪಾವತಿ ಮಾಡುವ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಿ.ನೀವು ಸರಕಾರಕ್ಕೆ ಕಟ್ಟುವ ತೆರಿಗೆಯು ದೇಶದ ಮತ್ತು ಜನಸಾಮಾನ್ಯರ ಅಭಿವೃದ್ದಿ ಕಾರ್ಯಗಳಿಗೆ ಬಳಕೆಯಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ತಿಪಟೂರು ಆದಾಯ ತೆರಿಗೆ ಇಲಾಖೆಯ ಯೋಗೇಶ್ , ವರ್ತಕರ ಸಂಘದ ಅಧ್ಯಕ್ಷ ಎಂ.ಎಸ್.ನಟರಾಜು,ಗ್ರಾಪಂ ಸದಸ್ಯ ಶಂಕರ್ ಸೇರಿದಂತೆ ಎಪಿಎಂಸಿ ವರ್ತಕರು,ದಿನಸಿ ವರ್ತಕರು,ಚಿನ್ನ ಬೆಳ್ಳಿ ವರ್ತಕರು,ಕಬ್ಬಿಣದ ಅಂಗಡಿ ವರ್ತಕರು,ಬಟ್ಟೆ ಅಂಗಡಿ ವರ್ತಕರು ಪಾಲ್ಗೊಂಡಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ