ಹುಳಿಯಾರು:ಕೇಂದ್ರ ಸರ್ಕಾರದ ರಸ್ತೆ ಸುರಕ್ಷತಾ ಕಾಯ್ದೆಯನ್ನು ವಿರೋಧಿಸಿ, ಜೊತೆಗೆ ಬೆಲೆ ಏರಿಕೆ ನಿಯಂತ್ರಣ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಹಾಗೂ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ ವಿರೋಧಿಸಿ ಸಾರಿಗೆ ಒಕ್ಕೂಟಗಳು ಶುಕ್ರವಾರದಂದು ಕರೆ ನೀಡಿದ್ದ ಭಾರತ್ ಬಂದ್ ಗೆ ಪಟ್ಟಣದಲ್ಲಿ ಯಾವುದೇ ಬೆಂಬಲ ದೊರೆಯದೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಶಾಲೆ-ಕಾಲೇಜುಗಳಿಗೆ ರಜೆ ನೀಡಿದ್ದು, ಬಸ್ ಸಂಚಾರ ವಿರಳವಾಗಿತ್ತು ಎನ್ನುವುದನ್ನು ಹೊರತುಪಡಿಸಿದರೆ ಯಾವುದೇ ಸೇವೆಗಳಲ್ಲಿ ವ್ಯತ್ಯಯವಾಗದೆ ಎಲ್ಲಾ ಸೇವೆಗಳು ಎಂದಿನಂತಿತ್ತು. ಪಟ್ಟಣದಲ್ಲಿ ಬಂದ್‌ನ ವಾತಾವರಣವೇ ಕಂಡು ಬರಲಿಲ್ಲ. ಅಂಗಡಿ-ಮುಂಗಟ್ಟುಗಳು,ಕಛೇರಿಗಳು ಎಂದಿನಂತೆ ಬಾಗಿಲು ತೆರೆದಿದ್ದವು.
ಹುಳಿಯಾರಿನಲ್ಲಿ ಬಂದ್ ಪ್ರಯುಕ್ತ ಆಗೊಮ್ಮೆ ಈಗೊಮ್ಮೆ ಸಂಚರಿಸಿದ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ಮಧ್ಯಾಹ್ನನದ ನಂತರ ಎಂದಿನಂತೆ ಸಂಚರಿಸಿದವು.ಆಟೋ, ಖಾಸಗಿ ವಾಹನಗಳ ಸಂಚಾರ ಎಂದಿನಂತಿತ್ತು.
ಮುಂಚಿತವಾಗೆ ಬಂದ್ ಬಗ್ಗೆ ತಿಳಿದಿದ್ದರಿಂದ ಪ್ರಯಾಣಿಕರು ಕೂಡ ಹೆಚ್ಚಾಗಿ ಕಂಡುಬರಲಿಲ್ಲ.ಹಬ್ಬದ ಹಿಂದೆ ಬಂದ್ ಬಂದಿದ್ದು ವ್ಯಾಪಾರಿಗಳಿಗೆ ಅನಾನುಕೂಲವಾಯಿತು.ಹೆಚ್ಚಿನ ಜನ ಸಂಚಾರವಿಲ್ಲದ್ದರಿಂದ ಗ್ರಾಮೀಣ ಪ್ರದೇಶದಿಂದ ಆಗಮಿಸುವವರ ಸಂಖ್ಯೆ ಕೊಂಚ ತಗ್ಗಿತ್ತು.ಅಷ್ಟಾಗಿ ವಹಿವಾಟು ನಡೆಯಲಿಲ್ಲ.
ಕೇಂದ್ರ ಸರ್ಕಾರದ ಅಂಚೆ ಸೇವೆ ,ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಹೋಟೆಲ್, ಮದ್ಯದ ಅಂಗಡಿಗಳು, ಚಲನಚಿತ್ರ ಮಂದಿರಗಳು,ಅಂಗಡಿಗಳು ಎಂದಿನಂತೆ ತೆರೆದಿದ್ದವು. ಎಲ್ಲಾ ಅಗತ್ಯ ವಸ್ತುಗಳ ಸೇವೆ ಲಭ್ಯವಿತ್ತು. ಒಟ್ಟಾರೆ ಬಂದ್ ಬಗ್ಗೆ ಯಾವೊಂದು ಸಂಘಟನೆಗಳು ಮುಂದಾಗದಿದ್ದರಿಂದ ವಿಫಲವಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ