ಮೂರು ಸಂಘಟನೆಗಳಿಂದ ಪ್ರತ್ಯೇಕವಾಗಿ ಮನವಿ ಸಲ್ಲಿಕೆ
-------------------------------------
ಹುಳಿಯಾರು: ಕಾವೇರಿ ನೀರಿಗೆ ಸಂಬಂಧಿಸಿದಂತೆ ಇಂದು ನಡೆದ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಪಟ್ಟಣದಲ್ಲಿ ವರ್ತಕರುಗಳು ಸ್ವಯಂಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿದ್ದರಾದರೂ ಯಾವುದೇ ಪ್ರತಿಭಟನೆಯಾಗಲಿ,ರ್ಯಾಲಿಯಾಗಲಿ ನಡೆಯದೆ ಕೇವಲ ಮನವಿ ಅರ್ಪಿಸುವುದಕ್ಕೆ ಸೀಮಿತಗೊಳ್ಳುವ ಮುಖಾಂತರ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಬಿಕೋ ಎನ್ನುತ್ತಿರುವ ಹುಳಿಯಾರಿನ ಬಸ್ ನಿಲ್ದಾಣ |
ಮುಂಜಾನೆಯಿಂದಲೇ ಪಟ್ಟಣ ಸ್ತಬ್ಧವಾಗಿತ್ತು.ಬಂದ್ ಹಿನ್ನೆಲೆಯಲ್ಲಿ ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್‌ಗಳು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪಟ್ಟಣದಲ್ಲಿ ಜನ ಸಂಚಾರ ವಿರಳವಾಗಿತ್ತು.ಬಂದ್ ಬಗ್ಗೆ ಮುಂಚಿತವಾಗಿ ತಿಳಿದಿದ್ದರಿಂದ ಪ್ರಾಯಾಣ ಮಾಡುವವರೆ ಇಲ್ಲವಾಗಿ ಬಸ್ ನಿಲ್ದಾಣ ನಿರ್ಜನವಾಗಿತ್ತು.ಆಟೋ,ಟ್ಯಾಕ್ಸಿ ಸಂಚಾರ ಕೂಡ ಕಂಡುಬರಲಿಲ್ಲಾ.ಶಾಲಾ ಕಾಲೇಜುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಿಸಲಾಗಿತ್ತು.ಮೆಡಿಕಲ್ ಸ್ಟೋರ್,ಆಸ್ಪತ್ರೆ ಎಂದಿನಂತೆ ತೆರದಿತ್ತು.ಕೆಲವು ದಿನಸಿ ವರ್ತಕರು ವ್ಯಾಪಾರದಲ್ಲಿ ತೊಡಗಿದ್ದನ್ನು ಬಿಟ್ಟರೆ ಅಂಗಡಿ ಮುಗ್ಗಟ್ಟುಗಳು,ಹೋಟೆಲ್ ಗಳು,ಪೆಟ್ರೋಲ್ ಬಂಕ್ ಗಳು,ಚಿತ್ರಮಂದಿರ,ಸರ್ಕಾರಿ ಕಛೇರಿಗಳು, ಬ್ಯಾಂಕ್‌ಗಳು,ಪೋಸ್ಟ್ ಆಫೀಸ್ ಸಂಪೂರ್ಣ ಬಂದ್ ಆಗಿದ್ದವು.
ಸಂಘ ಸಂಸ್ಥೆಗಳ ಮೌನ: ಯಾವುದೇ ಬಂದ್ ಆಚರಣೆಯ ಸಮಯದಲ್ಲಿ ಮುಂಚೂಣಿಯಲ್ಲಿದ್ದು ಹುಳಿಯಾರು ಬಂದ್‌ಗೆ ಮುಂದಾಗುತ್ತಿದ್ದ ಇಲ್ಲಿನ ಕರವೇ,ಜಯಕರ್ನಾಟಕ ಹಾಗೂ ರೈತಸಂಘದ ಕೆಂಕೆರೆ ಸತೀಶ್ ಬಣದವರು ಶುಕ್ರವಾರದ ರಾಜ್ಯ ಬಂದ್‌ಗೆ ಮುಂದಾಗದೆ ಮೌನಕ್ಕೆ ಶರಣಾಗಿದ್ದು ಸಾರ್ವಜನಿಕ ಚರ್ಚೆಗೆ ಗ್ರಾಸವಾಯಿತು.
ಪಟ್ಟಣದಲ್ಲಿ ಸುಮಾರು ೪೦ ಕ್ಕೂ ಹೆಚ್ಚು ಸಂಘಟನೆಗಳಿದ್ದಾಗ್ಯೂ ಇಂದಿನ ಬಂದ್ ಆಚರಣೆಯಲ್ಲಿ ಒಗ್ಗೂಡದೆ ಕೇವಲ ಮೂರು ಸಂಘಟನೆಗಳು ಮಾತ್ರ ಪ್ರತ್ಯೇಕವಾಗಿ ಆಗಮಿಸಿ ಮನವಿ ಸಲ್ಲಿಸಿದವು
ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಹುಳಿಯಾರಿನ ಕರವೇ ಕಾರ್ಯಕರ್ತರು ನಾಡಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. |
ಕರವೇ ಸಂಘಟನೆಯವರು ,ಟಿಪ್ಪುಸುಲ್ತಾನ್ ಯುವಕ ಸಂಘದವರು ನಾಡಕಚೇರಿಯಲ್ಲಿ ಮನವಿ ಸಲ್ಲಿಸಿದರೆ,ಜಿಲ್ಲಾ ರೈತಸಂಘದ ಹೊಸಹಳ್ಳಿ ಚಂದ್ರಣ್ಣ ಬಣದ ಪದಾಧಿಕಾರಿಗಳು ಪ್ರತ್ಯೆಕವಾಗಿ ಮೆರವಣಿಗೆಯಲ್ಲಿ ನಾಡಕಚೇರಿಗೆ ಆಗಮಿಸಿ ಗ್ರಾಮಲೆಕ್ಕಿಗ ಸುಬ್ರಾಯಪ್ಪಗೆ ಮನವಿ ಸಲ್ಲಿಸಿದ್ದರು.
ಬಂದ್ ಬಗ್ಗೆ ಕಂಡುಬಂದ ನೀರಸ ಪ್ರತಿಕ್ರಿಯೆಯಿಂದಗಿ ಪ್ರತಿ ಬಾರಿಯ ಬಂದ್ ಸಮಯದಲ್ಲಿ ಕಂಡುಬರುತ್ತಿದ್ದ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಅಷ್ಟಾಗಿ ಕಂದುಬರಲಿಲ್ಲಾ.
ಒಟ್ಟಾರೆಯಾಗಿ ರಾಜ್ಯದ ನೆಲೆ-ಜಲ,ಭಾಷೆ ವಿಚಾರದಲ್ಲಿ ಅನ್ಯಾಯವಾದಾಗ ಹಾಗೂ ರೈತರ ಸಂಕಷ್ಟಗಳಿಗೆ ಸ್ಪಂದಿಸಿ ನಾವೆಲ್ಲ ಒಂದೇ ಎಂಬ ಒಗ್ಗಟ್ಟು ಹಾಗೂ ಹೋರಾಟಕ್ಕೆ ಸಾಥ್ ನೀಡುತ್ತಿದ್ದ ಸಂಘಸಂಸ್ಥಗಳ ಧ್ವನಿ ಇಂದು ಪ್ರತಿಧ್ವನಿಸದೆ ಕಾವೇರಿ ಹೋರಾಟದ ಕಾವು ಕಾಣದಿದ್ದು ವಿಪರ್ಯಾಸವಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ