ಹುಳಿಯಾರು: ನಕಲಿ ಬಿಲ್ ನೀಡಿ ಕಂದಾಯ ವಸೂಲಿ ಮಾಡಿ ತನ್ನ ಜೇಬಿಗೆ ಇಳಿಸಿದ ಕರ ವಸೂಲಿಗಾರರನನ್ನು ವಜಾಗೊಳಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡು ಅತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದಸ್ಯ ಶ್ರೀನಿವಾಸ್ ಹಾಗು ಕೆಲವು ಸದಸ್ಯರು ಪಟ್ಟು ಹಿಡಿದ ಘಟನೆ ಸಮೀಪದ ದೊಡ್ಡಎಣ್ಣೆಗೆರೆ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಜರುಗಿತು.
ಹುಳಿಯಾರು ಸಮೀಪದ ದೊಡ್ಡ ಎಣ್ಣೆಗೆರೆ ಗ್ರಾಮಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಕಲಿ ಬಿಲ್ ನೀಡಿ ಕಂದಾಯ ವಸೂಲಿ ಮಾಡಿದ ಬಿಲ್ ಕಲೆಕ್ಟರ್‌ನನ್ನು ವಜಾ ಗೊಳಿಸುವಂತೆ ಚರ್ಚೆ ನಡೆಯಿತು. |
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾರವರ ಅಧ್ಯಕ್ಷತೆಯಲ್ಲಿ ೨೦೧೬-೧೭ ನೇ ಸಾಲಿನ ಬಸವ ವಸತಿ ಯೋಜನೆಯ ಅರ್ಹ ಫಲಾನುಭವಿಗಳ ಆಯ್ಕೆ ಮಾಡಲು ಸಾಮಾನ್ಯ ಸಭೆ ಕರೆಯಲಾಗಿತ್ತು. ಸಭೆಯ ಪ್ರಾರಂಭದಲ್ಲಿ ಸದಸ್ಯ ಶ್ರೀನಿವಾಸ್ ಮತ್ತಿತರರು ನಕಲಿ ಬಿಲ್ ನೀಡಿ ೬೫೦೦ ರೂಗಳನ್ನು ಸರ್ಕಾರಕ್ಕೆ ವಂಚಿಸಿದ ಕರ ವಸೂಲಿಗಾರನ ವಿರುದ್ಧ ಕ್ರಮ ತೆಗೆದುಕೊಂಡು ನಂತರ ಸಭೆಯನ್ನು ಮುಂದುವರೆಸುವಂತೆ ಪಟ್ಟು ಹಿಡಿದರು. ಈ ಬಗ್ಗೆ ಪರ ವಿರೋಧ ಚರ್ಚೆ ನಡೆದು ಕಾರ್ಯದರ್ಶಿ ನಾಗರಾಜು ಸದಸ್ಯರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಸದಸ್ಯರ ಆಕ್ರೋಶ ಕಡಿಮೆಯಾಗಲಿಲ್ಲ, ಕೊನೆಗೆ ಕರ ವಸೂಲಿಗಾರಿನಿಂದ ತಪ್ಪು ಒಪ್ಪಿಗೆ ಪಡೆದು ಇನ್ನು ಮುಂದೆ ಈ ರೀತಿ ಆಗದಂತೆ ಮುಚ್ಚಳಿಕೆ ಪಡೆದುಕೊಳ್ಳುವುದಾಗಿ ತಿಳಿಸಿದ ನಂತರ ಸದಸ್ಯರೆಲ್ಲರೂ ಇನ್ನು ಮುಂದೆ ಈ ರೀತಿ ತಪ್ಪು ಜರುಗದಂತೆ ಆತನಿಂದ ತಪ್ಪೊಪ್ಪಿಗೆ ಪಡೆದು ಎಚ್ಚರಿಕೆ ನೀಡುವ ನಿರ್ಣಯ ಕೈಗೊಂಡರು.
ನಂತರ ಸಾಮಾನ್ಯ ಸಭೆಗೆ ಅವಕಾಶ ದೊರೆತು ಕಾರ್ಯದರ್ಶಿಯು ಕೆಲವು ಅರ್ಜಿಗಳನ್ನು ಸದಸ್ಯರ ಅನುಮೋದನೆಗೆ ಇಟ್ಟರು. ನಂತರ ಕಳೆದ ವರ್ಷ ನಿರ್ಮಿಸಿರುವ ಶೌಚಾಲಯಗಳಿಗೆ ಮಾತ್ರ ಬಿಲ್ ಪಾವತಿ ಮಾಡುವುದು, ನಿವೇಶನ ರಹಿತರಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಜಾಗವನ್ನು ನಿವೇಶನಗಳಾಗಿ ಮಾರ್ಪಾಡಿಸಿ ಅವರಿಗೆ ಹಂಚುವುದು ಹಾಗೂ ಆಕ್ರಮವಾಗಿ ರಸ್ತೆಗಳಲ್ಲಿ ತೆಗೆದಿರುವ ಶೌಚಾಲಯ ಗುಂಡಿಗಳನ್ನು ತೆರವುಗೊಳಿಸುವುದು, ಬಸವ ಯೋಜನೆ ಯೋಜನೆಗಳನ್ನು ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನೀಡುವುದು ಹೀಗೆ ಹತ್ತು ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಯಿರು.
ಈ ಸಂದರ್ಭದಲ್ಲಿ ಉಪಧ್ಯಾಕ್ಷೆ ಲಲಿತಮ್ಮ ಸೇರಿದಂತೆ ಸರ್ವಸದಸ್ಯರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ