ಹುಳಿಯಾರು ಸಮೀಪದ ದೊಡ್ಡಬಿದರೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ದೊಡ್ಡಬಿದರೆ ಮತ್ತು ಚಿಕ್ಕಬಿದರೆ ಸದಸ್ಯರುಗಳಿಗೆ ಹಮ್ಮಿಕೊಳ್ಳಲಾಗಿದ್ದ ಸ್ವ-ಉದ್ಯೋಗ ತರಬೇತಿ ಕಾರ್ಯಗಾರ ಯಶಸ್ವೀಯಾಗಿ ನೆರವೇರಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನೆಲಮಂಗಲದ ಅರಿಶಿನಕುಂಟೆ ರುಡ್‌ಸೆಟ್ ಸಂಸ್ಥೆಯ ಉದಯಕುಮಾರ್ ಮಾತನಾಡಿ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು ನಿರುದ್ಯೋಗ ಬಹುದೊಡ್ಡ ಸಮಸ್ಯೆಯಾಗಿದೆ.ಹಿಂದೆ ಶೇ.೮೦ ರಷ್ಟು ಉದ್ಯೋಗ ಕೃಷಿಯಿಂದ ಸೃಷ್ಠಿಯಾಗುತ್ತಿತ್ತು. ಇಂದು ನಾನಾ ಕಾರಣಗಳಿಗಾಗಿ ಕೃಷಿಯಿಂದ ಯುವ ಸಮುಹ ವಿಮುಖರಾಗುತ್ತಿದ್ದಾರೆ. ಕೈಯಲ್ಲಿ ಮೂರ್ನಾಲ್ಕು ಪದವಿ ಇದ್ದರೂ ಸರ್ಕಾರಿ ಕೆಲಸ ಸಿಗದಾಗಿದೆ. ಪಟ್ಟಣಕ್ಕೆ ಹೋಗಿ ಫ್ಯಾಕ್ಟರಿ ಸೇರಿದರೆ ಹೊಟ್ಟೆಗಾದರೆ, ಬಟ್ಟೆಗಿಲ್ಲ ಎನ್ನುವಂತೆ ಜೀವನ ನಡೆಸಬೇಕಾದ ಅನಿವಾ ರ್ಯತೆ ಸೃಷ್ಠಿಯಾಗಿದೆ. ಹಾಗಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸದ್ಯಕ್ಕೆ ಸ್ವಉದ್ಯೋಗ ದಾರಿ ಎಂದು ಸಲಹೆ ನೀಡಿದರು.
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸ್ವಉದ್ಯೋಗವೇ ಆಸರೆ ಎಂಬ ಸತ್ಯ ಮನಗಂಡು ಪೂಜ್ಯ ವೀರೇಂದ್ರ ಹೆಗ್ಗಡೆಯವರು ೧೯೮೨ ರಲ್ಲಿ ನಿರುದ್ಯೋಗಿ ಯುವಕ- ಯುವತಿಯರಿಗೆ ಸ್ವ ಉದ್ಯೋಗದ ತರಬೇತಿ ಆರಂಭಿಸಿದರು. ಕರ್ನಾಟಕ ದಲ್ಲಿ ೭ ಶಾಖೆಗಳು ಸೇರಿದಂತೆ ದೇಶಾದ್ಯಂತ ಒಟ್ಟು ೨೭ ಶಾಖೆಗಳು ಕಾರ್ಯಪ್ರವೃತ್ತವಾಗಿವೆ. ಇದರಿಂದ ಸಾವಿರಾರು ಮಂದಿ ಮೊಬೈಲ್, ಕಂಪ್ಯೂಟರ್, ಬ್ಯೂಟಿ ಪಾರ್ಲರ್, ಹೈನುಗಾರಿಕೆ, ಜೇನುಸಾಕಾಣೆ, ಎರೆಹುಳು ಗೂಬ್ಬರ ತಯಾರಿಕೆ, ಸಿದ್ದು ಉಡುಪು ತಯಾರಿಕೆ, ಅಗರಬತ್ತಿ ತಯಾರಿಕೆ, ಬೇಕರಿ ಉತ್ಪನ್ನಗಳು ಸೇರಿದಂತೆ ಅನೇಕ ರೀತಿಯ ಸ್ವಉದ್ಯೋಗ ಕೈಗೊಂಡು ಬದುಕು ಕಟ್ಟಿಕೊಂಡಿದ್ದಾರೆ ಎಂದು ತಿಳಿಸಿದರು.
ಯೋಜನಾಧಿಕಾರಿ ಸಿ.ಎಸ್. ಪ್ರಶಾಂತ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸ್ವ ಉದ್ಯೋಗ ಮಾಡುವ ಆಸಕ್ತಿಯುಳ್ಳವರಿಗೆ ಮುಂದಿನ ದಿನಗಳಲ್ಲಿ ನಿಮ್ಮ ಭಾಗದಲ್ಲೇ ಟೈಲರಿಂಗ್, ತೆಂಗಿನ ನಾರು ತಯಾರಿ, ಬ್ಯೂಟಿಷಿಯನ್ ಸೇರಿದಂತೆ ವಿವಿದ ತರಬೇತಿಗಳನ್ನು ನೀಡಲಾಗುತ್ತದೆ ಎಂದರು.
ಒಕ್ಕೂಟದ ಅದ್ಯಕ್ಷೆ ಗೀತಮ್ಮ ಅದ್ಯಕ್ಷತೆ ವಹಿಸಿದ್ದರು, ಗಾಣಧಾಳ್ ಮೇಲ್ವಿಚಾರಕರಾದ ಕೆ.ಎಸ್. ಸುರೇಶ್, ಕೃಷಿ ಮೇಲ್ವಿಚಾರಕ ಗೋಪಿ, ಸೇವಾ ಪ್ರತಿನಿಧಿ ಎನ್.ರಮೇಶ್, ಗಾಯಿತ್ರಮ್ಮ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ