ಅಡಿಕೆ-ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
-------------------------------------------
ಹುಳಿಯಾರು: ತೆಂಗು ಹಾಗು ಅಡಕೆಯ ವೈಜ್ಞಾನಿಕ ಬೆಲೆಗೆ ಆಗ್ರಹಿಸಿ ಸೋಮವಾರದಂದು ರಾಜ್ಯ ರೈತಸಂಘ ಕಡೂರಿನಿಂದ ಹಮ್ಮಿಕೊಂಡಿದ್ದ ಬೈಕ್ ಜಾಥಾವನ್ನು ತಡೆದ ಪೊಲೀಸರು ಕಾವೇರಿ ತೀರ್ಪಿನ ಮುನ್ನೆಚರಿಕೆ ಕ್ರಮವಾಗಿ ಐನೂರು ರೈತರನ್ನು ಬಂಧಿಸಿದ ಹಿನ್ನಲೆಯಲ್ಲಿ ಮಂಗಳವಾರದಂದು ಹುಳಿಯಾರಿನಿಂದ ಹೊರಟಿದ್ದ ಬೈಕ್ ರ್ಯಾಲಿಯನ್ನು ಮುಂದೂಡಲಾಗಿದೆ ಎಂದು ರಾಜ್ಯ ಹಸಿರು ಸೇನೆಯ ಕಾರ್ಯದರ್ಶಿ ಕೆಂಕೆರೆ ಸತೀಶ್ ತಿಳಿಸಿದರು.
ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ಮಂಗಳವಾರದಂದು ನಡೆದ ಸುದ್ದಿಗೋಷ್ಟಿಯಲ್ಲಿ ರಾಜ್ಯ ಹಸಿರು ಸೇನೆಯ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿದರು. |
ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ಮಂಗಳವಾರದದಂದು ಈ ಕುರಿತು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತೆಂಗು ಹಾಗು ಅಡಕೆಯ ವೈಜ್ಞಾನಿಕ ಬೆಲೆಗೆ ಆಗ್ರಹಿಸಿ ಕಳೆದ ತಿಂಗಳು ತಿಪಟೂರಿನಿಂದ ಕಾಲ್ನಡಿಗೆ ಜಾಥಾದ ಮೂಲಕ ವಿಧಾನ ಸೌಧ ಮುತ್ತಿಗೆ ಹಾಕಲು ಹೊರಟಂತ ಸಂದರ್ಭದಲ್ಲಿ ಸಿದ್ಧಗಂಗಾಮಠದಲ್ಲಿ ನಡೆದ ಸಂಧಾನ ಪ್ರಕ್ರಿಯೆಯಲ್ಲಿ ರೈತರ ಆಶಯಗಳಿಗೆ ಸ್ಪಂದಿಸುವುದಾಗಿ ಹಾಗೂ ಸರ್ವಪಕ್ಷ ಸಭೆ ನಡೆಸಿ, ಪ್ರಧಾನಿ ಬಳಿ ನಿಯೋಗ ಒಯ್ಯುವ ಭರವಸೆ ನೀಡಿದ್ದರು. ಮುಖ್ಯಮಂತ್ರಿಗಳ ಹೇಳಿಕೆಯನ್ನು ಒಪ್ಪಿ ತಾತ್ಕಾಲಿಕವಾಗಿ ಜಾಥಾವನ್ನು ಮೊಟುಕುಗೊಳಿಸಲಾಗಿತ್ತು.ಈ ಭರವಸೆ ನೀಡಿ ತಿಂಗಳಾಗುತ್ತಾ ಬಂದರೂ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದ ಹಿನ್ನಲೆಯಲ್ಲಿ ಸೆ.೨೧ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಸೆಪ್ಟೆಂಬರ್ ೧೯ರ ಸೋಮವಾರದಂದು ಕಡೂರಿನಿಂದ ಬೆಂಗಳೂರಿಗೆ ಹೊರಟಿದ್ದ ಬೈಕ್ ರ್ಯಾಲಿಯನ್ನ ಕಾವೇರಿ ಗಲಭೆ ಹಿನ್ನಲೆಯಲ್ಲಿ ತಡೆದ ಪೊಲೀಸರು ರೈತರನ್ನು ಬಂಧಿಸಿದ್ದರಿಂದ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಏರುಪೇರಾಗಲು ಕಾರಣವಾಯಿತೆಂದರು.
ಮಂಗಳವಾರದಂದು ಹುಳಿಯಾರಿನಿಂದ ನೂರಾರು ರೈತರು ತಿಪಟೂರಿಗೆ ತೆರಳಬೇಕಿದ್ದು ಪೋಲಿಸರು ಕಾವೇರಿ ಗಲಭೆ ಹಿನ್ನಲೆಯಲ್ಲಿ ರ್ಯಾಲಿ ಮುಂದೂಡವಂತೆ ಮಾಡಿದ ಮನವಿ ಹಿನ್ನಲೆಯಲ್ಲಿ ರ್ಯಾಲಿ ಮುಂಡೂಡಿರುವುದಾಗಿ ತಿಳಿಸಿದರು.
ತೆಂಗಿನ ಕೊಬ್ಬರಿ ಮತ್ತು ಅಡಿಕೆ ಬೆಲೆಯನ್ನ ಶೀಘ್ರದಲ್ಲಿಯೆ ಹೆಚ್ಚಿಸದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಎಲ್ಲಾ ಸಂಸದರ, ಸಚಿವರ ಹಾಗೂ ಎಂ.ಎಲ್.ಎ ಗಳ ಮನೆಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ ಅವರು ಮುಂದಿನ ಹೋರಾಟದ ಬಗ್ಗೆ ಅಕ್ಟೋಬರ್ ತಿಂಗಳಲ್ಲಿ ನಿರ್ಧರಿಸಲಾಗುವುದು ಎಂದರು.
ತಾಲ್ಲೂಕು ರೈತಸಂಘದ ಅಧ್ಯಕ್ಷ ತಿಮ್ಮನಹಳ್ಳಿ ಲೋಕಣ್ಣ ಮಾತನಾಡಿ ಈಗಾಗಲೆ ಸರ್ಕಾರವು ರೈತರ ಹಿತವನ್ನ ಬಲಿಕೊಟ್ಟು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಕ್ರಮ ಸರಿಯಲ್ಲ. ಈ ಬಗ್ಗೆ ಪ್ರಾಧಾನಮಂತ್ರಿಗಳು ಮಧ್ಯೆ ಪ್ರವೇಶಿಸಿ ಕರ್ನಾಟಕ ಮತ್ತು ತಮಿಳುನಾಡಿನ ರೈತರ ಜಂಟಿ ಸಭೆ ಕರೆದು ನೀರಿನ ಸಮಸ್ಯೆಯನ್ನ ಪರಿಹರಿಸಲು ಮುಂದಾಗುವಂತೆ ಮನವಿ ಮಾಡಿದರು.
ಸುದ್ದಿ ಗೋಷ್ಟಿಯಲ್ಲಿ ರೈತಸಂಘದ ಮುಖಂಡರಾದ ತಾಲ್ಲೂಕ್ ರೈತ ಸಂಘದ ಉಪಾಧ್ಯಕ್ಷ ತಮ್ಮಡಿಹಳ್ಳಿ ಮಲ್ಲೀಕಣ್ಣ,ಚನ್ನಬಸವಯ್ಯ,ಕೆಂಕೆರೆ ನಾಗಣ್ಣ,ಪಾತ್ರೆ ಸತೀಶ್, ರಘು,ಕಂಪನಹಳ್ಳಿ ಮರುಳಪ್ಪ, ಯೋಗಣ್ಣ ,ರಂಗಸ್ವಾಮಿ,ಲಕ್ಶ್ಮೀಪುರ ಶಿವಣ್ಣ, ಗಂಗಣ್ಣ ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ