(14.09.16 ರ ಉದಯವಾಣಿ ಪತ್ರಿಕೆಯಲ್ಲಿನ ವರದಿ)
ಚಿಕ್ಕನಾಯಕನಹಳ್ಳಿ: ಎಂಟೂವರೆ ವರ್ಷಗಳಿಂದ ತಾಲೂಕಿನ ಯಾವುದೇ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ. ಬಗರ್ ಹುಕುಂ ಚೀಟಿಗಾಗಿ ಯಾವುದೇ ಅರ್ಜಿ ಸ್ವೀಕರಿಸಿಲ್ಲ. ಯಾರೂ ಹೊಸ ಅರ್ಜಿ ನೀಡಬಾರದು ಎಂದು ಕಾನೂನು ಸಚಿವರು ಜೆಡಿಎಸ್ ಶಾಸಕರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಇದರಿಂದಲೇ ಸಚಿವರು ಹಾಗೂ ಶಾಸಕರು ರೈತರ ಪರವಾಗಿಲ್ಲ ಎಂಬುದು ತಿಳಿಯುತ್ತದೆ ಎಂದು ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಆರೋಪಿಸಿದರು.
ಚಿಕ್ಕನಾಯಕನಹಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಗುವಳಿ ಚೀಟಿ ನೀಡಲು ಕೆಲವು ನ್ಯಾಯಾಲಯದ ಮೆಟ್ಟಿಲೇರಿವೆ ಹಾಗೂ ಕೆಲವು ತೊಡಕುಗಳಿವೆ ಎಂದು ಶಾಸಕರು ತಿಳಿಸಿದ್ದಾರೆ. ಈ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದರು.
ಕಾಗೋಡು ತಿಮ್ಮಪ್ಪನವರು ತಿಳಿಸಿರುವಂತೆ ಪ್ರತಿ ಸಾಗುವಳಿದಾರರಿಗೂ ಡಿಸೆಂಬರ್ ಅಂತ್ಯದೊಳಗೆ ಸಾಗುವಳಿ ಚೀಟಿ ನೀಡಬೇಕು. ಶಾಸಕರು ಪ್ರತಿವಾರ ಸಭೆ ನಡೆಸಿ, ಸಾಗುವಳಿ ಮಾಡುತ್ತಿರುವ ರೈತರಿಗೆ ಭೂಮಿಯನ್ನು ಮಂಜೂರು ಮಾಡಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ಮಾತನಾಡಿ, ನಮ್ಮ ತಾಲೂಕಿನ ರೈತರ ಪರವಾಗಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಬಗರ್‌ಹುಕುಂ ಕಮಿಟಿ ಸದಸ್ಯ ಅಶೋಕ್ ಮಾತನಾಡಿ, ಈಗಾಗಲೇ ಸರ್ಕಾರಿ ದಾಖಲೆಯಲ್ಲಿ ೧೨ ಸಾವಿರ ಅರ್ಜಿಗಳು ಅನಧಿಕೃತವಾಗಿವೆ. ದಾಖಲೆಯಲ್ಲಿರುವ ಅರ್ಜಿಗಳನ್ನು ಮಾತ್ರ ಪರಿಗಣಿಸಿ ಮುಂದಿನ ದಿನಗಳಲ್ಲಿ ಸಭೆಯಲ್ಲಿ ಸಾಗುವಳಿ ಚೀಟಿ ನೀಡಲಾಗುವುದು ಎಂದರು.
ಬಗರ್‌ಹುಕುಂ ಕಮಿಟಿ ಸದಸ್ಯ ಶಶಿಧರ್ ನಾಯ್ಕ್ ಮಾತನಾಡಿ, ಬಗರ್‌ಹುಕುಂ ಕಮಿಟಿಯ ಸಭೆ ನಡೆದಾಗ ಶಾಸಕರಿಗೆ ಮಾತ್ರ ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಿದ್ದ ಮಾಹಿತಿ ದೊರಕಿತ್ತು. ನಮಗೆ ಯಾವುದೇ ರೀತಿಯ ಮಾಹಿತಿ ದೊರಕಲಿಲ್ಲ. ನಂತರದ ದಿನಗಳಲ್ಲಿ ಪರಿಶೀಲಿಸಿದ ನಂತರ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ದೊರೆಯಿತು ಎಂದರು.
ಸುದ್ದಿಗೋಷ್ಠಿಯಲ್ಲಿ ಶೇಷಾ ನಾಯ್ಕ, ವೈ.ಆರ್.ಮಲ್ಲಿಕಾರ್ಜುನಯ್ಯ, ಪುರಸಭಾ ಸದಸ್ಯ ಸಿ.ಪಿ.ಮಹೇಶ್, ರುದ್ರೇಶ್, ಕೆ.ಜಿ.ಕೃಷ್ಣೇಗೌಡ, ಶಿವಕುಮಾರ್ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ