ಹುಳಿಯಾರು:ಸಮೀಪದ ಯಳನಾಡು ಶ್ರೀ ಸಿದ್ಧರಾಮೇಶ್ವರ ಸ್ವಾಮಿಯ ಶ್ರೀ ಕ್ಷೇತ್ರದಲ್ಲಿ ಆರಂಭವಾಗಬೇಕಿರುವ ದಸರಾ ಜಾತ್ರಾಮಹೋತ್ಸವದ ಆಚರಣೆಯ ಬಗ್ಗೆ ತಹಸಿಲ್ದಾರ್ ಇನ್ನೂ ಸಭೆ ಕರೆಯದೆ ನಿರ್ಲಕ್ಷ್ಯವಹಿಸಿದ್ದಾರೆ ಹಾಗೂ ಕಳೆದ ಮೂರು ತಿಂಗಳಹಿಂದೆ ನಡೆದ ದೊಡ್ಡಜಾತ್ರೆಯ ಆಯವ್ಯಯವನ್ನು ಇದುವರೆಗೂ ನೀಡಿಲ್ಲವೆಂದು ಹುಳಿಯಾರು ಹೋಬಳಿ ಯಳನಾಡು ಗ್ರಾಮಸ್ಥರು ಆರೋಪಿಸಿದ್ದಾರೆ.
ಇತಿಹಾಸ : ಶ್ರೀಕ್ಷೇತ್ರದಲ್ಲಿ ನಡೆಯುವ ದಸರ ಮಹೋತ್ಸವಕ್ಕೆ ತನ್ನದೆ ಆದ ಇತಿಹಾಸವಿದ್ದು ಇಲ್ಲಿ ನಡೆಯುವ ಸ್ವಾಮಿಯ ಹನ್ನೊಂದು ದಿನಗಳ ಕಾಲದ ದಸರ ಮಹೋತ್ಸವಕ್ಕೆ ದೂರದ ಅನೇಕ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿಕೊಂಡು ಹೋಗುವ ಪರಿಪಾಠ ನಡೆದು ಬಂದಿದೆ.
ಸಮಸ್ಯೆ ಏನು:ಈವೊಂದು ಸಂಪ್ರದಾಯಕ್ಕೆ ಇತ್ತೀಚೆಗೆ ಗ್ರಾಮದಲ್ಲಿ ದೇವರು ಕರೆದೊಯ್ಯುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಉಂಟಾದ ವೈಮನಸ್ಯದಿಂದ ಗ್ರಾಮಸ್ಥರಲ್ಲಿ ಒಗ್ಗಟ್ಟಿಲ್ಲದೆ ಪೂಜಾಕಾರ್ಯದಲ್ಲಿ ಅಡಚಣೆಯುಂಟಾಗಿದ್ದು ಇದು ಮುಂದೆ ನಡೆಯಬೇಕಿರುವ ದಸರಾ ಜಾತ್ರಾ ಮಹೋತ್ಸವದ ಮೇಲೂ ಪರಿಣಾಮ ಬೀರಿದೆ.ದಸರಾ ನಡೆಯುವುದೋ ಇಲ್ಲವೋ ಎಂದು ಭಕ್ತರಲ್ಲಿ ಗೊಂದಲ ಮೂಡಿದೆ.
ಗ್ರಾಮದಲ್ಲಿ ಪೂಜಾ ಕಾರ್ಯದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದು ಕೆಲವೊಂದು ಪೂಜಾಕೈಂಕರ್ಯಗಳನ್ನು ಕೈಬಿಟ್ಟಿರುವುದು ಭಕ್ತರಲ್ಲಿ ಆಕ್ರೋಷಕ್ಕೆ ಕಾರಣವಾಗಿದೆ.ಅನುಚಾನವಾಗಿ ನಡೆದು ಬಂದಿದ್ದ ಧಾರ್ಮಿಕ ಕಾರ್ಯಕ್ಕೆ ತಹಸಿಲ್ದಾರ್ ತಪ್ಪು ನಿರ್ಧಾರ ಕಾರಣ ಎಂದು ದೂರದ ಭಕ್ತರ ದೂರಾಗಿದೆ.ದಸರಾ ಆಚರಣೆಗೆ ಬೆರಳೇಣಿಕೆಯ ದಿನವಷ್ಟೆ ಬಾಕಿಉಳಿದಿದ್ದು ಇದುವರೆಗೂ ಈ ಬಗ್ಗೆ ಮುಜರಾಯಿ ಮುಖ್ಯಸ್ಥರಾದ ತಹಸೀಲ್ದಾರ್ ಮುಂದಾಗದಿರುವುದು ಮುಂದೇನು ಎಂಬ ಪ್ರಶ್ನೆ ಭಕ್ತರಲ್ಲಿ ಮೂಡಲು ಕಾರಣವಾಗಿದೆ.
ಈ ಬಗ್ಗೆ ಗ್ರಾಮದ ಭಕ್ತರು ಬುಧವಾರದಂದು ಮುಜರಾಯಿ ಇಲಾಖೆಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದಿದ್ದು ಕೆಲವೊಂದು ಆರೋಪ ಮಾಡಿದ್ದಾರೆ.ಈಗಲಾದರೂ ತಹಸೀಲ್ದಾರ್ ಗ್ರಾಮಕ್ಕೆ ಆಗಮಿಸಿ ಗುಂಪುಗಳ ನಡುವಿನ ಸಂಘರ್ಷಕ್ಕೆ ತೆರೆ ಹಾಡಿ ದಸರ ಮಹೋತ್ಸವಕ್ಕೆ ಧಕ್ಕೆ ಬಾರದಂತೆ ಸುಗಮವಾಗಿ ನಡೆಯಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಕಳೆದ ಮೂರು ತಿಂಗಳ ಹಿಂದೆ ನಡೆದ ದೊಡ್ಡ ಜಾತ್ರೆಯ ಉಸ್ತುವಾರಿ ಸಮಿತಿ ವಜಾಮಾಡುವುದರ ಜೊತೆಗೆ ಜಾತ್ರೆಗೆ ವಸೂಲಿಯಾದ ಹಣ,ದವಸ ಧಾನ್ಯ ಹಾಗೂ ಜಾತ್ರೆಯ ಖರ್ಚುವೆಚ್ಚದ ತಪಸೀಲು ನೀಡುವಂತೆ ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ