ಅಂತರರಾಷ್ಟ್ರೀಯ ಜೀವ ವೈವಿಧ್ಯ ವರ್ಷಚರಣೆ ಅಂಗವಾಗಿ ತುಮಕೂರು ವಿಜ್ಞಾನ ಕೇಂದ್ರ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ರಾಜ್ಯ ವಿಜ್ಞಾನ ಪರಿಷತ್ ಸಹಯೋಗದಲ್ಲಿ ನೀಡಿದ ಜಿಲ್ಲಾ ಯುವ ವಿಜ್ಞಾನ ಪ್ರಶಸ್ತಿಗೆ ಭಾಜನರಾಗುವ ಮೂಲಕ ಕು.ಐಶ್ವರ್ಯ ಅವರು ಹುಳಿಯಾರು ಹೋಬಳಿಗೆ ಕೀರ್ತಿತಂದಿದ್ದಾರೆ.
ಪ್ರತಿಭಾಕಾರಂಜಿಯ ಜಿಲ್ಲಾ ಮಟ್ಟದ ಸ್ಥಳದಲ್ಲೇ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಪ್ರಥಮ ಸ್ಥಾನ, ಕೆ.ಆರ್.ವಿ.ಪಿಯ ಜಿಲ್ಲಾ ಮಟ್ಟದ ವಿಜ್ಞಾನ ಕ್ವಿಝ್ನಲ್ಲಿ ಪ್ರಥಮ ಸ್ಥಾನ, ಆರ್ಯಭಟ ಅಬಕಾಸ್ ಆಕಾಡೆಮಿಯ ಪರೀಕ್ಷೆಯಲ್ಲಿ ಎಲ್ಲಾ ಮಟ್ಟದಲ್ಲೂ ಪ್ರಥಮ ಸ್ಥಾನ, ತಾಲೂಕು ಮಟ್ಟದ ವಿಜ್ಞಾನ ಪ್ರತಿಭಾ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ, ರಾಷ್ಟ್ರ ಮಟ್ಟದ ಎನ್.ಟಿ.ಎಸ್.ಇ ಪರೀಕ್ಷೆಯಲ್ಲಿ ಉತ್ತೀರ್ಣ ಮತ್ತಿತರ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈಕೆ ಪಡೆದ ಬಹುಮಾನಗಳ ಸಾಧನೆಯನ್ನು ಪರಿಗಣಿಸಿ ಈ ಬಾರಿಯ ಜಿಲ್ಲಾ ಯುವ ವಿಜ್ಞಾನ ಪ್ರಶಸ್ತಿ ನೀಡಲಾಗಿದೆ.
ಬಹು ಮುಖ್ಯವಾಗಿ ಈಕೆ ರಾಸಾಯನಿಕಗಳಿಗೆ ಹಾಕೋಣ ಮಿತಿ ಇನ್ನಾಗಲಿ ಸಾವಯವ ನಮ್ಮ ಸಂಸ್ಕೃತಿ ಎಂಬ ಶೀರ್ಷಿಕೆಯಡಿ ರಾಸಾಯನಿಕಗಳ ಬಳಕೆಯಿಂದ ಕೃಷಿಯಲ್ಲಾಗುವ ದುಷ್ಪರಿಣಾಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿ ಅವುಗಳ ಬಳಕೆಯನ್ನು ಕಡಿಮೆ ಮಾಡುವ ಹಾಗೂ ಪ್ರಕೃತಿ ಸ್ನೇಹಿ ಸಾವಯವಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ಪ್ರೇರೇಪಿಸುವ ಯೋಜನಾ ವರದಿಯನ್ನು ರಚಿಸಿ ಆಕರ್ಷಕವಾಗಿ ಮಂಡಿಸುವ ಮೂಲಕ ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲ್ಲಿ ಜಯಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿ ಬಿ+ ಗ್ರೇಡ್ ಪಡೆದಿರುವುದು ಜಿಲ್ಲಾ ಯುವ ವಿಜ್ಞಾನ ಪ್ರಶಸ್ತಿಗೆ ಈಕೆಯನ್ನೇ ಆಯ್ಕೆಮಾಡಲು ಕಾರಣವಾಗಿದೆ.
ತುಮಕೂರಿನ ಬಾಲಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ವಿಶ್ವನಾಥ್, ಕಾರ್ಯದರ್ಶಿ ರಾಮಕೃಷ್ಣಪ್ಪ, ವಿಜ್ಞಾನ ಪರಿಷತ್ ಅಧ್ಯಕ್ಷ ಡಾ.ಎಚ್.ಎಸ್.ನಿರಂಜನಾರಾಧ್ಯ, ಶಿಬಿರದ ಸಂಚಾಲಕ ಪಿ.ಪ್ರಸಾದ್ ಅವರು ಕು.ಐಶ್ವರ್ಯ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರಲ್ಲದೆ ವಿಜ್ಞಾನ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಯುವ ಪ್ರತಿಭೆಗೆ ಪ್ರೋತ್ಸಹಿಸಿದ್ದಾರೆ.
ಕು.ಐಶ್ವರ್ಯ ಅವರು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮತ್ತು ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಕವಿತಾಕಿರಣ್ ದಂಪತಿಗಳ ಪುತ್ರಿಯಾಗಿದ್ದು ಈಕೆ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ