ಹುಳಿಯಾರು ಶ್ರೀದೇವಿ ಭವನ್ ಹೋಟಲ್ ಮಾಲಿಕ ಬೋಜರಾಜ್ ಅವರಿಗೆ ಕಾಯಕರತ್ನ ಬಿರುದು ನೀಡಿ ಸನ್ಮಾನಿಸುತ್ತಿರುವುದು.
ಕಳೆದ 4 ದಶಕಗಳಿಂದ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡಿರುವ ಇಲ್ಲಿನ ರಾಂಗೋಪಾಲ್ ಸರ್ಕಲ್ ಬಳಿಯ ಶ್ರೀದೇವಿ ಭವನ್ ಮಾಲೀಕ ಕೆ.ಬೋಜರಾಜ್ ಅವರಿಗೆ ಹುಳಿಯಾರು ನಾಗರೀಕರ ಪರವಾಗಿ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಪತ್ರಕರ್ತರ ಸಂಘವು ಇತ್ತೀಚೆಗೆ ಕಾಯಕರತ್ನ ಬಿರುದು ನೀಡಿ ಸನ್ಮಾನಿಸಿತು.
ಪರಿಚಯ: ಸದಾ ಬಿಳಿ ಬನಿಯನ್, ನೀಲಿ ಅಥವಾ ಬಿಳಿ ಪಂಚೆ ತೊಟ್ಟು ಮುಂಜಾನೆಯಿಂದ ಸಂಜೆಯವರೆಗೂ ಜಾಗ ಬಿಟ್ಟು ಕದಲದೆ ಹೋಟೆಲ್ ಕ್ಯಾಷಿಯರ್ ಛೇರ್ ನಲ್ಲಿ ಕಾಣಸಿಗುವ ಇವರು ಆಗಾಗ ಈರುಳ್ಳಿ, ಬೈಟು ಟೀ, ಜಾಮೂನ್, ಕಾರ ಎಂದು ಕೂಗಿ ಸುಮ್ಮನಾಗುವ ದೃಶ್ಯ ಮಾಮೂಲು.ಹುಳಿಯಾರಿನ ತಿಂಡಿ ಪ್ರಿಯರಿಗೆಲ್ಲ ಚಿರಪರಿಚಿತರಾಗಿರುವ ಇವರ ಬಗ್ಗೆ ಅರಿಯದವರ್ಯಾರು ಇಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸಮೀಪದ ಅಶ್ವಥ್ ಪುರ ಗ್ರಾಮದ ಇವರು 4 ನೇ ತರಗತಿಗೆ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಟ್ಟು ಜೀವನ ನಿರ್ವಹಣೆಗಾಗಿ ಚಿಕ್ಕವಯಸ್ಸಿನಿಂದಲೇ ಹೋಟೆಲ್ ವೃತ್ತಿ ಆಯ್ದುಕೊಂಡು ದಾವಣಗೆರೆ, ಚಿತ್ರದುರ್ಗದಲ್ಲಿ ಕಾಯಕ ಆರಂಭಿದರು.ನಂತರ ಹುಳಿಯಾರಿನ ಪೇಟೆ ಬೀದಿಯಲ್ಲಿ ಸಾಹುಕಾರ್ ಕೆ.ಸುಬ್ಬರಾವ್ ಹೋಟೆಲ್ಗೆ ಅನಿರೀಕ್ಷಿತವಾಗಿ ಸೇರಿ ಕಾಲಕ್ರಮೇಣ ಇದೇ ಹೋಟೆಲ್ ಮಾಲೀಕರಾದ ಇವರು ಬರೋಬ್ಬರಿ 4 ದಶಕಗಳಿಂದಲೂ ಹೋಟೆಲ್ ಅನ್ನೇ ನಂಬಿ ಬದುಕು ಕಟ್ಟುತ್ತಿದ್ದಾರೆ. ಇಷ್ಟು ಸುಧೀರ್ಘ ವರ್ಷದಿಂದಲೂ ಉದ್ದಿಮೆಯನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಮೆದು ಸ್ವಭಾವದ ಇವರು ಎಂದಿಗೂ ಗ್ರಾಹಕರೊಂದಿಗೆ ಜಗಳವಾಡುವುದಿರಲಿ ಗಟ್ಟಿಯಾಗಿಯೂ ಸಹ ಮಾತನಾಡುವುದಿಲ್ಲ. ಅನೇಕ ಎಡರು-ತೊಡರುಗಳ ಮಧ್ಯೆಯೂ ಎದೆಗುಂದದೆ ಕಷ್ಟಪಟ್ಟು ಹೋಟೆಲ್ ನಡೆಸಿಕೊಂಡು ಬಂದಿರುವ ಇವರು ಪೇಟೆ ಹೋಟೆಲ್ ಅನ್ನು ಶ್ರೀದೇವಿ ಭವನ್ ಆಗಿ ಬದಲಿಸಿದ್ದರೂ ಸಹ ಇವತ್ತಿಗೂ ಈರುಳ್ಳಿದೋಸೆ, ಜಾಮೂನ್, ಕಾರದ ರುಚಿ ಹಾಗೂ ಗುಣಮಟ್ಟವನ್ನು ಮುಂಚಿನಂತೆಯೆ ಕಾಯ್ದುಕೊಂಡಿದ್ದಾರೆ.
ಶುಚಿ ಹಾಗೂ ರುಚಿಯೊಂದಿಗೆ ಈ ಭಾಗದ ಜನರ ಹಸಿವು ನೀಗಿಸುತ್ತಿರುವ ಇವರ ಕಾಯಕ ನಿಷ್ಠೆ, ಸ್ವಬಾವ ಹಾಗೂ ವ್ಯಕ್ತಿತ್ವ ಗುರುತಿಸಿ ಹುಳಿಯಾರು ನಾಗರೀಕರ ಪರವಾಗಿ ರೈತ ಸಂಘ ,ಹಸಿರು ಸೇನೆ ಮತ್ತು ಪತ್ರಕರ್ತರ ಸಂಘವು ಇತ್ತೀಚೆಗೆ ನೀಡಿದ ಕಾಯಕರತ್ನ ಬಿರುದು ನೀಡಿ ಸನ್ಮಾನಿಸಿತು.
ರಂಗಕರ್ಮಿ ಅನಂತರಾಮಯ್ಯ, ಕೆನರಾಬ್ಯಾಂಕ್ ಮ್ಯಾನೇಜರ್ ಸತೀಶ್, ಸಾಹಿತಿ ನರಸಿಂಹಮೂರ್ತಿ, ಶ್ಯಾನಬೋಗ್ ರಾಜಣ್ಣ, ಕೆಂಕೆರೆ ಸತೀಶ್, ಸೈಯದ್ ಜಲಾಲ್, ಶ್ರೀಮತಿ ಚಂದ್ರಕಲಾ ಸತೀಶ್, ಕೆ.ಪಿ.ಮಲ್ಲೇಶ್, ಡಿ.ಆರ್.ನರೇಂದ್ರಬಾಬು, ರಂಗನಕೆರೆ ಮಹೇಶ್ ಸೇರಿದಂತೆ ಅಪಾರ ಜನಸ್ತೊಮ ಈ ಅಪರೂಪದ ಸನ್ಮಾನಕ್ಕೆ ಸಾಕ್ಷಿಯಾಗಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ