ಶಿಕ್ಷಕರನ್ನು ಕೊಠಡಿಗೆ ಕೂಡಿ ಬೀಗ ಜಡಿದ ಗ್ರಾಮಸ್ಥರು
-------------------------------
ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗು ಣವಾಗಿ ಶಿಕ್ಷಕರಿಲ್ಲದ ಕಾರಣ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಎಸ್ಡಿಎಂಸಿ ಸದಸ್ಯರ ನೇತೃತ್ವದಲ್ಲಿ ಹೋಬಳಿಯ ದಬ್ಬಗುಂಟೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗೆ ಬೀಗ ಜಡಿದು ಶಾಲೆಯನ್ನು ಬಂದ್ ಮಾಡಿ ಮಕ್ಕಳೊಂದಿಗೆ ಪೋಷಕರು ಪ್ರತಿಭಟನೆ ಮಾಡಿದ ಘಟನೆ ಮಂಗಳವಾರ ನಡೆಯಿತು.
![]() |
ಹುಳಿಯಾರು ಹೋಬಳಿ ದಬ್ಬಗುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಕೊರತೆ ನೀಗಿಸುವಂತೆ ಒತ್ತಾಯಿಸಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪೋಷಕರು ಮಕ್ಕಳೊಂದಿಗೆ ಶಾಲೆಗೆ ಬೀಗ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.
|
ಸಮಸ್ಯೆ ಏನು: ದಬ್ಬಗುಂಟೆ ಶಾಲೆಯಲ್ಲಿ 1ನೇ ತರಗತಿಯಿಂದ 7 ನೇ ತರಗತಿವರೆಗೆ ಇದ್ದು 238 ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆಗೆ ಬೇಕಾಗಿರುವ ಶಿಕ್ಷಕರ ಹುದ್ದೆ ೮ . ಆದರೆ ಸದ್ಯಕ್ಕಿರುವವರು ನಾಲ್ವರು ಮಾತ್ರ. ಅದರಲ್ಲಿ ಒಬ್ಬರು ಮುಖ್ಯಶಿಕ್ಷಕ, ಮತ್ತೊಬ್ಬರು ದೈಹಿಕ ಶಿಕ್ಷಕ.ಉಳಿದಿಬ್ಬರು ಸಹಶಿಕ್ಷಕರು.ಶಾಲೆಯಲ್ಲಿ ಮುಖ್ಯ ಶಿಕ್ಷಕ, ಗಣಿತ, ವಿಜ್ಞಾನ, ಕನ್ನಡ, ನಲಿ–ಕಲಿ ಶಿಕ್ಷಕರ ನೇಮಕವಾಗಬೇಕಿದೆ.ದೈಹಿಕ ಶಿಕ್ಷಕರು ಕ್ರೀಡಾಕೂಟಕ್ಕೆ ಮಕ್ಕಳನ್ನು ತಯಾರಿ ಮಾಡುವುದರಲ್ಲೆ ಹೈರಾಣಾಗಿರುತ್ತಾರೆ. ಇನ್ನು ಮುಖ್ಯ ಶಿಕ್ಷಕರು ಕಚೇರಿಯ ಕಡತ ನಿರ್ವಹಣೆ ಕೆಲಸದ ಜೊತೆಗೆ ಬಿಸಿಯೂಟ, ಕ್ಷೀರಭಾಗ್ಯ, ಸಮವಸ್ತ್ರ ವಿತರಣೆ ,ನಲಿಕಲಿಯಂತಹ ಹತ್ತಾರು ಜವಬ್ದಾರಿ ನೋಡುವುದರಲ್ಲೆ ಕಾಲ ಮುಗಿಯುವುದರಿಂದ ಶಾಲೆಯತ್ತ ಹೆಚ್ಚಿನ ಗಮನ ನೀಡಲು ಸಾಧ್ಯವಾಗುವುದಿಲ್ಲ.ಇನ್ನುಳಿದ ಸಹಶಿಕ್ಷಕರಿಬ್ಬರೆ 1ರಿಂದ 7ನೇ ತರಗತಿಗಳನ್ನು ನಿಭಾಯಿಸಬೇಕಲ್ಲದೆ ಅನಿವಾರ್ಯವಾಗಿ ಎರೆಡೆರಡು ತರಗತಿಗಳನ್ನು ಕಂಬೈಂಡ್ ಮಾಡಿ ಪಾಠ ಮಾಡಬೇಕಾದ ಸ್ಥಿತಿಯಿದೆ.
ಆರೋಪ: ಗ್ರಾಮದ ಮುಖ್ಯಸ್ಥ ಡಿ.ಬಿ.ರವಿಕುಮಾರ್ ಮಾತನಾಡಿ ಸರ್ಕಾರ ಖಾಸಗಿ ಶಾಲೆಗಳ ವ್ಯಾಮೋಹ ಬಿಡಿ ಎನ್ನುವ ಸರ್ಕಾರ ಶಾಲೆಗಳಿಗೆ ಮೂಲ ಸೌಲಭ್ಯಗಳನ್ನು ಮಾತ್ರ ಕಲ್ಪಿಸದಿರುವುದರಿಂದ ನಮ್ಮ ಮಕ್ಕಳಿಗೆ ಸಮರ್ಪಕವಾದ ಶಿಕ್ಷಣ ದೊರೆಯುತ್ತಿಲ್ಲ .ದೈನಂದಿನ ಪಾಠ ಪ್ರವಚನಕ್ಕೆ ಅಡಚಣೆಯಾಗಿದೆ. ಕಳೆದ 2 ವರ್ಷಗಳಿಂದ ಇದೇ ಪರಿಸ್ಥಿತಿ ಮುಂದುವರೆದಿದೆ ಎಂದು ದೂರಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೋದಂಡರಾಜು ಮಾತನಾಡಿ ಶಾಲೆಯಲ್ಲಿರುವ 4 ಮಂದಿ ಶಿಕ್ಷಕರಲ್ಲಿ ಇಬ್ಬರೆ ಇಡೀ 7 ತರಗತಿಗಳನ್ನು ನಿಭಾಯಿಸುವ ಸ್ಥಿತಿ ನಿರ್ಮಾಣವಾಗಿದೆ, ಈಚೆಗೆ ಮಕ್ಕಳಿಬ್ಬರು ಕಿತ್ತಾಡಿಕೊಂಡು ಗಾಯ ಮಾಡಿಕೊಂಡ ಘಟನೆ ಜರುಗಿದೆ ಎಂದು ಶಾಲೆಯ ಸಮಸ್ಯೆ ವಿವರಿಸಿದರು.
ಶಾಲೆಗೆ ಬೀಗ:ಬೆಳಿಗ್ಗೆಯಿಂದಲೆ ಪ್ರತಿಭಟನೆ ಶುರುವಾದರೂ ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸದ ಕಾರಣ ರೊಚಿಗೆದ್ದ ಪೋಷಕರು ಅಲ್ಲೇಯಿದ್ದ 3 ಮಂದಿ ಶಿಕ್ಷಕರನ್ನು ಮುಖ್ಯ ಶಿಕ್ಷಕರ ಕಚೇರಿಯಲ್ಲಿ ಕೂಡಿ ಹಾಕಿ, ಕೊಠಡಿಗಳಿಗೆ ಬೀಗ ಜಡಿದರು. ಪರಿಸ್ಥಿತಿ ಬಿಗಡಾಯಿಸಿದನ್ನು ಅರಿತ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಹೊಸದಾಗಿ ನಿಯೋಜನೆಗೊಂಡಿರುವ ಭಡ್ತಿ ಮುಖ್ಯ ಶಿಕ್ಷಕರೊಂದಿಗೆ ಸ್ಥಳಕ್ಕೆ ದೌಡಾಯಿಸಿ ಬಂದರು.ಎಸ್.ಡಿಎಂ.ಸಿ ಪದಾಧಿಕಾರಿಗಳು ಮತ್ತು ಪ್ರತಿಭಟನನಿರತರ ಜತೆ ಸಮಸ್ಯೆಯ ಕುರಿತು ಸಮಾಲೋಚನೆ ನಡೆಸಿದರು. ಸೋಮವಾರದೊಳಗೆ ಶಾಲೆಗೆ ಶಿಕ್ಷಕರೊಬ್ಬರನ್ನು ನಿಯೋ ಜಿಸುವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಎಪಿಎಂಸಿ ನಿರ್ದೇಶಕ ಡಿ.ಆರ್.ರುದ್ರೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಜಯಣ್ಣ, ಲೇಪಾಕ್ಷಿ, ತಿಪ್ಪಮ್ಮ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಕುಮುದಾ, ಸದಸ್ಯರಾದ ರೇವಣ್ಣ, ಗಂಗಣ್ಣ, ದೊಡ್ಡೀರಪ್ಪ, ನಾಗರಾಜು, ಗೋವಿಂದರಾಜು, ಮಜಹರಿ, ನೇತ್ರಾವತಿ, ಪೋಷಕರಾದ ಕುಮಾರ್, ಲೋಕೇಶ್, ಲೋಹಿತ್, ತಿಮ್ಮರಾಜು, ಬಾಲಯ್ಯ, ಮಲ್ಲೇಶ್, ಸಣ್ಣಯ್ಯ, ಈರಣ್ಣ, ಕುಮಾರಣ್ಣ, ರೇವಯ್ಯ ಇತರರು ಇದ್ದರು.
---------------------
----------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ