ಈ ಸಭೆಯಲ್ಲಿ ಶಾಸಕರ ಮಾತಿಗೆ, ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಿದ್ದ ಮೇಲೆ ಈ ಸಭೆಯ ಔಚಿತ್ಯವಾದರೂ ಏನೆಂದು ಪ್ರಶ್ನಿಸಿ ನಮ್ಮ ವಾರ್ಡಿನಲ್ಲಿ ಸಭೆಯೆ ಬೇಡವೆಂದು ಸದಸ್ಯರೆ ಅಡ್ಡಿಪಡಿಸಿ ಮುಂದೂಡಿದ ಘಟನೆ ಪಟ್ಟಣದ ಎಂಟನೆ ವಾರ್ಡಿನಲ್ಲಿ ಜರುಗಿತು.
ಹುಳಿಯಾರು ಗ್ರಾಮಪಂಚಾಯ್ತಿವತಿಯಿಂದ 2015-16 ನೇ ಸಾಲಿನ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಲುವಾಗಿ ಪಟ್ಟಣದ ಎಲ್ಲಾ ಹದಿಮೂರು ವಾರ್ಡ್ಗಳಲ್ಲೂ ಸಭೆ ನಡೆಸಲಾಗಿತ್ತಿದ್ದು ಅದರಂತೆ ಎಂಟನೆ ವಾರ್ಡಿನ ಸಭೆಯನ್ನು ಶನಿವಾರದಂದು ಗಜಾನನ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
![]() |
ವಸತಿ ಯೋಜನೆಗೆ ಸಂಬಂಧಿಸಿದಂತೆ ಅಧ್ಯಕ್ಷರೊಂದಿಗೆ ವಾಗ್ವಾದಕ್ಕಿಳಿದಿರುವ ಸದಸ್ಯರು ಹಾಗೂ ವಾರ್ಡಿನ ನಿವಾಸಿಗಳು. |
ಸದಸ್ಯರುಗಳಾದ ಪುಟ್ಟರಾಜು,ಶ್ರೀಮತಿ ಕೆಂಪಮ್ಮ,ಮಾಮಾಜಿಗ್ಮಿ ಹಾಗೂ ಜಯಮ್ಮನವರ ಉಪಸ್ಥಿತಿಯಲ್ಲಿ ಪ್ರಾರಂಭವಾದ ಸಭೆಯಲ್ಲಿ ಅರ್ಜಿ ಸ್ವೀಕರಿಸುವ ಹಂತದಲ್ಲೆ ಸದಸ್ಯ ಪುಟ್ಟರಾಜು ತಮ್ಮ ಬ್ಲಾಕಿನಲ್ಲಿ ಈ ಹಿಂದೆ ಗ್ಯಾಸ್ ಸಿಲಂಡರ್ ಸ್ಪೋಟ ಪ್ರಕರಣದಲ್ಲಿ ದುರ್ಮರಣ ಹೊಂದಿದ್ದ ಪುಟ್ಟಶಾಮಾಚಾರ್ ಕುಟುಂಬಕ್ಕೆ ಮೊದಲು ಆದ್ಯತೆ ನೀಡಿ ಮನೆ ಹಂಚಿಕೆಯಾಗಬೇಕಿದೆ ಎಂದರು.
ಮಂಜೂರಾಗಿರುವ ಮನೆಗಳ ಪೈಕಿ ಈ ವಾರ್ಡಿಗೆ ನಾಲ್ಕು ಮನೆ ಹಾಗೂ ನೊಂದವರ ಕುಟುಂಬಕ್ಕೆ ನೀಡಬೇಕಾಗಿರುವ ಒಂದು ಮನೆ ಸೇರಿ ಒಟ್ಟು ಐದು ಮನೆಗೆ ಫಲಾನುಭವಿಗಳ ಆಯ್ಕೆ ನಡೆಯಬೇಕಿದೆ .ಆದರೆ ಇಲ್ಲಿ ಮಂಜೂರಾಗಿರುವ ಮನೆಗಳ ಸಂಖ್ಯೆ ಕೇವಲ ನಾಲ್ಕಾಗಿದ್ದು ಪುಟ್ಟಾಶಾಮಾಚಾರ್ ಕುಟುಂಬಕ್ಕೆ ಮನೆ ಎಲ್ಲಿ ಎಂದು ಏರು ಧ್ವನಿಯಲ್ಲಿ ತಗಾದೆ ತೆಗೆದರು.
ಸ್ಥಳಕ್ಕೆ ಆಗಮಿಸಿದ್ದ ಆ ವಾರ್ಡ್ ನಿವಾಸಿಗಳು ಸಹ ಪುಟ್ಟಶಾಮಾಚಾರ್ ಕುಟುಂಬದವರಿಗೆ ಶಾಸಕರ ಆದೇಶದಂತೆ ಮನೆ ಮಂಜೂರು ಮಾಡಿಲ್ಲವೆಂಬುದನ್ನು ಅರಿತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿರುದ್ದ ಹರಿಹಾಯ್ದರು.
ಮನೆಗಳ ಹಂಚಿಕೆ ಕುರಿತಂತೆ ಪಂಚಾಯ್ತಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ತೀರ್ಮಾನವಾಗಿದ್ದು ಅದರಂತೆ ಈ ವಾರ್ಡಿನಲ್ಲಿ ನಾಲ್ಕು ಸದಸ್ಯರಿದ್ದು ನಾಲ್ಕು ಮನೆಗಳನ್ನು ನಿಗದಿಮಾಡಲಾಗಿದ್ದು ಇದರಲ್ಲೇ ಪುಟ್ಟಶಾಮಾಚಾರ್ ಕುಟುಂಬದವರಿಗೂ ಆದ್ಯತೆ ನೀಡಿ ಮಂಜೂರು ಮಾಡೋಣ ಎಂದ ಪಿಡಿಓ ಮಾತು ದೊಡ್ಡ ಗದ್ದಲಕ್ಕೆ ಕಾರಣವಾಯಿತು.ಸಮಸ್ಯೆ ಆಲಿಸಿದ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಗೀತಾರವರು ಸೋಮಜ್ಜನಪಾಳ್ಯಕ್ಕೆ ಅಲ್ಪಸಂಖ್ಯಾತರಿಗೆ ಮನೆ ಮಂಜೂರಾಗಿದ್ದು ಅಲ್ಲಿ ಅಲ್ಪಸಂಖ್ಯಾತರು ಇರದಿರುವ ಕಾರಣ ಆ ಮನೆಯನ್ನು ನೊಂದ ಕುಟುಂಬದವರಿಗೆ ಮಂಜೂರು ಮಾಡೋಣ ಎಂದರು ಸಹ ಯಾರೊಬ್ಬರು ಒಪ್ಪದೆ ಪದೆಪದೆ ಇದೇ ರೀತಿ ಮುಂಡೂಡುತ್ತಿರುವುದು ಸರಿಯಲ್ಲವೆಂದು ಅಲ್ಲಿಯವರೆಗೂ ಸಭೆ ನಡೆಸುವುದೆ ಬೇಡವೆಂದು ಪಟ್ಟುಹಿಡಿದರು.ಸಮಸ್ಯೆ ಬಗೆಹರಿಯದ ಲಕ್ಷಣ ಕಾಣದೆ ಪಿಡಿಓ ಸಭೆಯನ್ನು ಅರ್ಧಕ್ಕೆ ಅಂತ್ಯಗೊಳಿಸಿದರು.
--------------------
![]() |
ಸರ್ಕಾರದ ಆದೇಶದಂತೆ ಮನೆ ಮಂಜೂರು ಮಾಡಿಕೊಡುವಂತೆ ಪಟ್ಟುಹಿಡಿದಿರುವ ದಿ.ಪುಟ್ಟಶಾಮಾಚಾರ್ ಕುಟುಂಬ |
ಸಿಲಿಂಡರ್ ಸ್ಪೋಟವಾಗಿ ನಮ್ಮ ಪತಿ ದಾರುಣವಾಗಿ ಮರಣಹೊಂದಿದ ಹಿನ್ನಲೆಯಲ್ಲಿ ಶಾಸಕರು ಸರ್ಕಾರದಿಂದ ಮನೆ ಮಂಜೂರು ಮಾಡಿಸಿಕೊಡುವುದಾಗಿ ಹಾಗೂ ಮನೆ ಬೆಂಕಿಗೆ ಆಹುತಿಯಾಗಿದ್ದರಿಂದ ಎರಡು ಲಕ್ಷ ಪರಿಹಾರ ಕೊಡಿಸುವುದಾಗಿ ಹೇಳಿ ಎಂಟು ತಿಂಗಳುರುಳಿದ್ದು ಚಿಕ್ಕಾಸು ಸರ್ಕಾರದಿಂದ ಬಂದಿಲ್ಲ.ಅದೇ ಪ್ರಕರಣದಲ್ಲಿ ತೀವ್ರ ಗಾಯವಾಗಿದ್ದ ಮಗಳಿಗೆ ಅಂಗನವಾಡಿ ಸಹಾಯಕಿ ಹುದ್ದೆ ಖಾಯಂ ಮಾಡಿಸುವುದಾಗಿ ಸಹ ಆಶ್ವಾಸನೆ ನೀಡಿದ್ದೂ ಕೂಡ ಭರವಸೆಯಾಗಿಯೇ ಉಳಿದಿದೆ.ಸರ್ಕಾರದ ಆದೇಶ ಪತ್ರಕ್ಕೆ ಈ ಪಂಚಾಯಿತಿಯಲ್ಲಿ ಬೆಲೆಯಿಲ್ಲವಾಗಿದೆ.ನಮಗೆ ಮನೆ ನೀಡುವವರೆಗೂ ಈ ಸಭೆ ನಡೆಯಲು ಬಿಡುವುದಿಲ್ಲ : ಶ್ರೀಮತಿ ಸುಲೋಚನ, ದಿ.ಪುಟ್ಟಶಾಮಾಚಾರ್ ಪತ್ನಿ
-------------------------------------
ಪಂಚಾಯ್ತಿಗೆ ಮಂಜೂರಾಗಿರುವ ಮನೆಗಳನ್ನು ಸಭೆ ಕರೆದು ಎಲ್ಲಾ ಸದಸ್ಯರ ಸಮ್ಮುಖದಲ್ಲೆ ವಾರ್ಡುವಾರು ಹಂಚಿಕೆ ಮಾಡಿದ್ದು ಅದರಂತೆ ಸಭೆ ನಡೆಸಿ ಫಲಾನುಭವಿಗಳ ಆಯ್ಕೆಗೆ ವಾರ್ಡು ಸಭೆ ಮಾಡಲಾಗುತ್ತಿದೆ.ಈ ನಿರ್ದಿಷ್ಟ ಪ್ರಕರಣದಲ್ಲೂ ಸಹ ನಮ್ಮ ಮೊದಲನೆ ಆದ್ಯತೆ ಪುಟ್ಟಶಾಮಾಚಾರ್ ಕುಟುಂಬಕ್ಕೆ ಮನೆ ನೀಡುವುದಾಗಿದ್ದು ಅದರ ಆಯ್ಕೆ ಗ್ರಾಮ ಸಭೆಯಲ್ಲಿ ನಡೆಯಲಿದೆ: ಅಡವೀಶ್ ಕುಮಾರ್ ,ಪಂ.ಅ.ಅಧಿಕಾರಿ.
--------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ