ರೈತರ ಬೆಳೆಗೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು: ಚಂಪಾ
-------------------------------
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಅನ್ನದಾತ ದೇಶದ ಬೆನ್ನೆಲುಬು ಎನ್ನಲಾಗುವ ಈ ನಾಡಿನಲ್ಲಿ ರೈತ ಇಂದು ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬರುತ್ತಿರುವುದು ದುರಾದೃಷ್ಟ .''ರೈತ ದೇಶದ ಬೆನ್ನೆಲುಬು ಎಂಬ ಮಾತು ಸತ್ಯವಾಗಬೇಕಾದಲ್ಲಿ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು. ಆಗಷ್ಟೆ ರೈತರ ಬದುಕು ಹಸನಾಗಲು ಸಾಧ್ಯ'' ಎಂದು ಕವಿ,ನಾಟಕಕರಾದ ಪ್ರೋ.ಚಂದ್ರಶೇಖರ ಪಾಟೀಲ್ ಹೇಳಿದರು.
ಹುಳಿಯಾರು ಕೆಂಕೆರೆಯ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರದಂದುನಡೆದ ಸಾಂಸ್ಕೃತಿಕ , ಕ್ರೀಡಾ,ಎನ್.ಎಸ್.ಎಸ್ ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರಂಭವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯಿಲ್ಲದೆ, ಮಾಡಿರುವ ಸಾಲಗಳನ್ನು ಸಂದಾಯ ಮಾಡಲಾರದೆ ರಾಜ್ಯದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ದುಃಖದ ವಿಷಯ. ಬಿತ್ತನೆ ನಂತರ ಬೆಳೆ ಬರಬೇಕು,ಬೆಳೆದಿದ್ದು ಮಾರಾಟವಾಗಬೇಕು,ದುಡಿತಕ್ಕೆ ತಕ್ಕ ಪ್ರತಿಫಲ ದೊರೆತಾಗ ಮಾತ್ರ ಕೃಷಿಯನ್ನು ನಂಬಿ ಬದುಕಬಹುದು.ಇಂದು ಬೆಂಕಿಪೊಟ್ಟಣಕ್ಕೂ ಬೆಲೆ ನಿಗದಿಯಾಗಿದ್ದರೆ ರೈತ ಬೆಳೆಯುವ ಸೊಪ್ಪು ತರಕಾರಿಯಿಂದ ಹಿಡಿದು ರಾಗಿ,ಜೋಳ,ಕಬ್ಬಿನವರೆಗೆ ರೈತರ ಯಾವುದೇ ಬೆಳೆಗೆ ಬೆಲೆ ನಿಗದಿಯಿಲ್ಲ.ಕೊತ್ತುಂಬರಿ ಸೊಪ್ಪು ಐದು ರೂಪಾಯಿ ಹೇಳಿದರೆ ಎರಡು ರೂಪಾಯಿಗೆ ಕೇಳುವ ಇಂದಿನ ದಿನದಲ್ಲಿ ಸರಿಯಾದ ಬೆಲೆ ರೈತನ ಉತ್ಪನ್ನಕ್ಕೆ ಸಿಗದೆ ಅನಿವಾರ್ಯವಾಗಿ ಕೇಳಿದ ಬೆಲೆಗೆ ಮಾರಿಬರುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದಿರುವುದರಿಂದ ಬೇಸತ್ತ ರೈತರು ಅನಿವಾರ್ಯವಾಗಿ ಬೆಳೆದ ಬೆಳೆಯನ್ನೇ ರಸ್ತೆಗೆ ಸುರಿಯುವಂತಾಗಿದೆ.ರೈತ ತಾನೆ ಬೆಳದ ಬೆಳೆಗೆ ಬೆಲೆ ನಿಗದಿಪಡಿಸುವ ಅಧಿಕಾರವನ್ನು ಕಳೆದುಕೊಂಡಿದ್ದಾನೆ. ಕೃಷಿ ಇತ್ತೀಚೆಗೆ ನಷ್ಟದ ಬಾಬತ್ತಾಗಿದ್ದು ಆರ್ಥಿಕ ಭದ್ರತೆ ಇಲ್ಲದ ಕಾರಣ ರೈತರ ಮಕ್ಕಳು ಕೃಷಿ ಕಡೆಗೆ ಮುಖ ಹಾಕುತ್ತಿಲ್ಲವಾಗಿದ್ದು ರೈತರ ಪರಿಸ್ಥಿತಿ ಚಿಂತಜನಕವಾಗಿದೆ ಎಂದರು.
ಸರ್ಕಾರದ ಯೋಜನೆಗಳು ರೈತರ ಬದಕನ್ನು ಸುಧಾರಿಸುವ ಬದಲು ಅವರನ್ನು ಇನ್ನಷ್ಟು ಸಮಸ್ಯೆಗಳಿಗೆ ಬಲಿಯಾಗುಗುವಂತೆ ಮಾಡಿದ್ದು ಇದನ್ನು ಗಂಭೀರವಾಗಿ ಚಿಂತಿಸಬೇಕಿದೆ ಎಂದರು.ರೈತರು ಸಂಕಷ್ಟದಲ್ಲಿದ್ದು ಅವರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಮಾತ್ರವಲ್ಲ, ಲಾಭದಾಯಕ ಬೆಲೆಯನ್ನು ನಿಗದಿಯಾಗಬೇಕು .ಕೃಷಿ ನೀತಿ ಜಾರಿಗೆ ಬಂದು ಮಾರುಕಟ್ಟೆಯನ್ನು ರೈತ ನಿಯಂತ್ರಣ ಮಾಡುವ ಕಾಲ ಬಂದಾಗ ಮಾತ್ರ ಕೃಷಿಕರ ಬದುಕು ಹಸನಾಗುತ್ತದೆ ಎಂದರು.
ಅನ್ನ ಭಾಗ್ಯದ ಬಗ್ಗೆ ಟೀಕೆ ಸಲ್ಲ:ಬಡ ರೈತರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದರೆ ಎಸ್.ಎಲ್.ಭೈರಪ್ಪನಂತ ಕೆಲವು ಪುರೋಹಿತಶಾಯಿ ಸಾಹಿತಿಗಳು ಯೋಜನೆ ಬಡವರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ ಎಂದಿರುವುದು ಅಮಾನವೀಯ ಹೇಳಿಕೆಯಾಗಿದ್ದು ಕೂತು ತಿನ್ನುವ ಹೊಟ್ಟೆತುಂಬಿದವರಿಗೆ ಬಡವರ ಬವಣೆ ಗೊತ್ತಾಗುವುದಾದರೂ ಹೇಗೆ ಎಂದು ಲೇವಡಿ ಮಾಡಿದರು.
ಇದಕ್ಕೂ ಮುನ್ನ ಮಾತನಾಡಿದ ಚಿಂತಕ ಹಾಗೂ ವಿಮರ್ಶಕ ವಡ್ಡಗೆರೆ ನಾಗರಾಜಯ್ಯ ವಿದ್ಯೆ ಹಾಗೂ ಜ್ಞಾನ ಕಲಿಸುವ ಶಿಕ್ಷಣ ಇಂದು ವಿಕ್ರಯದ ವಸ್ತುವಾಗಿದ್ದು ಬಂಡವಾಳಗಾರರ ಪಾಲಾಗಿದೆ.ಧಾನ್ಯದ ಮೇಲಿನ ಹಕ್ಕು ಕೂಡ ನಿರ್ಬೀಜಕರಣಕೊಳಗಾಗಿದೆ.ಪ್ರಕೃತಿಯ ಎಲ್ಲಾ ವಸ್ತುಗಳು ಹಣದ ರೂಪದಲ್ಲಿ ಕಾಣಸಿಗುವಂತಾಗಿದ್ದು ಸರಕು ಸಂಸ್ಕೃತಿಯ ಮೋಹ ಕೊನೆಗೊಂಡಾಗ ಮಾತ್ರ ಶ್ರಮಿಕಜೀವಿಗಳ ಉದ್ದಾರ ಸಾಧ್ಯವೆಂದರು.
ರೈತಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರೋ .ಬಿಳಿಗೆರೆ ಕೃಷ್ಣಮೂರ್ತಿ ಪ್ರಾಸ್ತಾವಿಕನುಡಿಗಳಾಡಿದರು.ಶಂಕರಲಿಗಪ್ಪ ಅತಿಥಿಗಳ ಪರಿಚಯ ಮಾಡಿದರು.ವಿದ್ಯಾರ್ಥಿಗಳೊಡವೆ ಸಂವಾದ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ