ಗ್ರಾಮೀಣ ಭಾಗದ ಶಾಲಾ ಮಕ್ಕಳ ಕ್ರೀಡಾ ಚಟುವಟಿಕೆಯ ಉತ್ತೇಜನಕ್ಕಾಗಿ ಹೋಬಳಿ ಮಟ್ಟದಲ್ಲಿ ಸುಸ್ಸಜಿತವಾದ ಕ್ರೀಡಾಂಗಣದ ಅವಶ್ಯಕತೆಯಿದ್ದು ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕಿದೆ ಎಂದು ತಾಲ್ಲೂಕು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೊಯ್ಸಳಕಟ್ಟೆ ಪ್ರಕಾಶ್ ಅಭಿಪ್ರಾಯಪಟ್ಟರು.
![]() |
ಎಂಪಿಎಸ್ ಆವರಣದಲ್ಲಿ ನಡೆದ ಹುಳಿಯಾರು ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಬಿ ವಿಭಾಗದ ಕ್ರೀಡಾಕೂಟ |
ಗ್ರಾಮೀಣ ಪ್ರದೇಶದ ಅನೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಹಾಗೂ ಆಟದ ಮೈದಾನ ಸೇರಿದಂತೆ ಯಾವುದೇ ಮೂಲಭೂತ ಕ್ರೀಡಾ ಸೌಲಭ್ಯಗಳಿಲ್ಲದಿದ್ದರೂ ಶಿಕ್ಷಕರ ಕಾಳಜಿಯಿಂದಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಕ್ರೀಡಾಕೂಟಗಳು ಯಶಸ್ವಿಯಾಗಿ ನಡೆಯುತ್ತಿವೆ.ಗ್ರಾಮೀಣ ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಈ ಕ್ರೀಡಾಕೂಟಗಳು ಸೂಕ್ತ ವೇದಿಕೆಯಾಗಿದ್ದು ಮಕ್ಕಳು ಕ್ರೀಡೆಯ ಜೊತೆಗೆ ಪಠ್ಯ ವಿಷಯಗಳ ಕಲಿಕೆಗೂ ಸಹ ಪ್ರಾಮುಖ್ಯತೆ ನೀಡಬೇಕು ಎಂದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಕೇಶವಮೂರ್ತಿ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವಿಕೆ ಅತಿಮುಖ್ಯ. ಸೋಲು ಗೆಲುವು ನಾಣ್ಯದ ಎರಡು ಮುಖವಿದ್ದಂತೆ,ಜೀವನದಲ್ಲಿ ಏನೇ ಕಷ್ಟ ಬಂದರೂ ಗುರಿ ಮುಟ್ಟುವ ಗುಣವನ್ನು ಕ್ರೀಡೆ ಕಲಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹುಳಿಯಾರು ಹೋಬಳಿ ಶಿಕ್ಷಣ ಸಂಯೋಜಕ ಶಾಂತಪ್ಪ ಮಾತನಾಡಿ ಕ್ರೀಡಾಪಟುಗಳು ಸೋಲು, ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಉತ್ತಮ ಸಾಧನೆ ಮಾಡುವ ಮೂಲಕ ಶ್ರೇಷ್ಠ ಕ್ರೀಡಾಪಟು ಆಗಬೇಕು. ಮಕ್ಕಳ ಕ್ರೀಡಾ ಆಸಕ್ತಿ ಈ ಕ್ರೀಡಾಕೂಟಕ್ಕಷ್ಟೇ ಸೀಮಿತವಾಗದೆ ಶಾಲೆಗಳಲ್ಲಿ ವರ್ಷಪೂರ್ತಿ ನಿರಂತರವಾಗಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡೂ ಕ್ರಿಯಾಶೀಲರಾಗಿರಬೇಕೆಂದರು.
ಬಳ್ಳಕಟ್ಟೆ ಗ್ರಾಮ ಪಂಚಾಯಿತಿ ಸದಸ್ಯೆ ನಾಗವೇಣಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.ಸದಸ್ಯ ಅಬ್ದುಲ್ ರಹೀಂ ಕ್ರೀಡಾಜ್ಯೋತಿ ಸ್ವೀಕರಿಸಿದರು.ಸಿಆರ್ ಪಿ ಪ್ರೇಮಲೀಲಾ ಪ್ರತಿಜ್ಞಾವಿಧಿ ಬೋಧಿಸಿದರು.ಚಿಕ್ಕಬಿದರೆ ಸಿಆರ್ ಪಿ ಉಮೇಶ್ ಸ್ವಾಗತಿಸಿದರು.ರೇವಣ್ಣ ನಿರೂಪಿಸಿ ದೈ.ಶಿ.ಮಾರುತಿ ವಂದಿಸಿದರು.ವಿವಿಧ ಶಾಲಾ ಶಿಕ್ಷಕರು,ಎಸ್‌ಡಿಎಂಸಿ ಸಮಿತಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ