ಮುಖ್ಯಮಂತ್ರಿಗಳೆ ,ರೈತರ ಬಗ್ಗೆ ಸಾಂತ್ವಾನ ಮತ್ತು ಸತ್ತ ರೈತರ ಸಾವಿಗೆ ಪರಿಹಾರ ಘೋಶಿಸುವ ಬದಲು ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವ ಮೂಲಕ ಹಾಗೂ ಸಾಲ ಮನ್ನಾ ಮಾಡುವ ಮೂಲಕ ಸರ್ಕಾರ ಕೂಡಲೇ ಅನ್ನದಾತನ ನೆರವಿಗೆ ಮುಂದಾಗಿ ರೈತರ ಆತ್ಮಹತ್ಯೆ ತಡೆಗಟ್ಟಬೇಕು,ಇಲ್ಲದಿದ್ದಲ್ಲಿ ರೈತರ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆಯಾಗುತ್ತದೆಂದು ಹಸಿರುಸೇನೆಯ ಕೆಂಕೆರೆ ಸತೀಶ್ ಎಚ್ಚರಿಸಿದರು.
ಹೋಬಳಿಯ ಗಡಿಗ್ರಾಮವಾದ ದಸೂಡಿಯಲ್ಲಿ ರೈತ ಸಂಘದ ಬಲವರ್ಧನೆ ಹಾಗೂ ರೈಅತರ ಆತ್ಮಹತ್ಯೆ ತಡೆ ಜಾಗೃತಿ ಜಾಥದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು ರೈತರ ಸಾವು ಸಾಲದಿಂದಾದರೂ ಸಹ ಸಾಲಮಾಡಿ ಸಾಯುವ ಸ್ಥಿತಿಯುಂಟಾಗಲು ಆಳುವ ಸರ್ಕಾರಗಳ ರೈತವಿರೋಧಿ ನೀತಿಯೇ ಕಾರಣ ಎಂದರು.
![]() |
ಹೋಬಳಿಯ ಗಡಿಗ್ರಾಮವಾದ ದಸೂಡಿಯಲ್ಲಿ ರೈತ ಸಂಘದ ಬಲವರ್ಧನೆ ಹಾಗೂ ರೈಅತರ ಆತ್ಮಹತ್ಯೆ ತಡೆ ಜಾಗೃತಿ ಜಾಥದಲ್ಲಿ ಪಾಲ್ಗೊಂಡಿದ್ದ ರೈತರು. |
ಮಂತ್ರಿ ಮಹೋದಯರೇ ಸತ್ತ ರೈತರ ಮನೆ ಬಾಗಿಲಿಗೆ ಬಂದು ಸಾಂತ್ವಾನ ಹೇಳಿ ಪ್ರಚಾರಗಿಟ್ಟಿಸುವ ಬದಲು ರೈತರ ಸಮಸ್ಯೆಗೆ ಸರಿಯಾದ ಪರಿಹಾರ ಹುಡುಕಿ ಎಂದರು.ಸಾಂತ್ವಾನದ ಬದಲು ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿ ಎಂದರು.ರಾಜ್ಯದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಆತ್ಮಹತ್ಯೆ ತಡೆಯಲು ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ಪ್ರೋತ್ಸಾಹ ಧನ ಹಾಗೂ ಸುಲಭ ದರದ ಸಾಲ ಸೌಲಭ್ಯಗಳನ್ನು ನೀಡುವುದಲ್ಲದೆ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ತಾಲ್ಲೂಕು ರೈತಸಂಘದ ಗೌರವಾಧ್ಯಕ್ಷ ತಿಮ್ಮನಹಳ್ಳಿ ಲೋಕಣ್ಣ ಮಾತನಾಡಿ ರೈತರು ಬೆಳೆ ಬೆಳೆಯಲು ಲೇವಾದೇವಿಗಾರರಿಂದ ತಂದ ಹಣಕ್ಕೆ ಮೀಟರ್ ಬಡ್ಡಿ ಲೆಖ್ಖದಲ್ಲಿ ವಸೂಲು ಮಾಡುತ್ತಿದ್ದು, ಬಡ್ಡಿ ಕಟ್ಟಲು ಹೆದರಿದ ರೈತ ಆತ್ಮಹತ್ಯೆಗೆ ಮುಂದಾಗುತಿದ್ದು ರೈತರ ಬಲಿ ಪಡೆಯುತ್ತಿರುವ ಈ ಬಡ್ಡಿ ದಂಧೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ದಸೂಡಿ ಗ್ರಾಪಂ ಮಾಜಿ ಅಧ್ಯಕ್ಷ ದಬ್ಬಗುಂಟೆ ರವಿಕುಮಾರ್ ಮಾತನಾಡಿ ರಾಜ್ಯ ಹಾಗೂ ಕೆಂದ್ರ ಸರ್ಕಾರ ಯೋಜನೆಗಳು ರೈತರಿಗೆ ಸರಿಯಾಗಿ ತಲುಪುತಿಲ್ಲ.ನಮ್ಮದೇಶದಲ್ಲಿ ಅಧಿಕಾರಿಗಳು ಹಾಗೂ ರಾಜಕಾರಣಿಗಳಲ್ಲಿ ಯಾರೊಬ್ಬರು ಸಾಲದಿಂದ ಸಾಯದೆ ಕೇವಲ ರೈತ ಮಾತ್ರ ಸಾವಿಗೀಡಾಗುತ್ತಿರುವುದರ ಹಿಂದಿನ ಮರ್ಮವೇನೆಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಹಾಗೂ ಸಾಲದ ಮೇಲಿನ ಬಡ್ಡಿಯನ್ನು ಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ತಮ್ಮಡಿಹಳ್ಳಿ ಮಲ್ಲೀಕಣ್ಣ ಮಾತನಾಡಿ ಬ್ಯಾಂಕಿನವರು ಸಾಲದ ನೋಟೀಸನ್ನು ನೀಡಿದರೆ ಇಲ್ಲವೇ ರೈತರಿಗೆ ಮತ್ಯಾವುದೆ ರೀತಿಯ ಸಮಸ್ಯೆ ಎದುರಾದರೆ ಕಂಗೆಟ್ಟು ಆತ್ಮಹತ್ಯೆಗೆ ಮುಂದಾಗದೆ ನಮ್ಮ ಗಮನಕ್ಕೆ ತನ್ನಿ.ನಿಮ್ಮ ಜೊತೆಯಲ್ಲಿ ರೈತ ಸಂಘವಿದ್ದು ಹೋರಾಟ ಮಾಡುತ್ತೇವೆ ಎಂದು ಧೈರ್ಯ ತುಂಬಿದರು.
ರೈತರ ಮೇಲೆನ ನಿರಂತರ ದೌರ್ಜನ್ಯ ತಡೆಗಟ್ಟಲು ಸಂಘಟನೆ ಅವಶ್ಯ ಎಂದು ಅಭಿಪ್ರಾಯಪಟ್ಟ ಗ್ರಾಮದ ಇಪ್ಪತ್ತಕ್ಕೂ ಹೆಚ್ಚು ರೈತರು ಸಂಘಕ್ಕೆ ಸೇರ್ಪಡೆಗೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ