ಗ್ರಾಪಂಗಳಿಗೆ ಮನೆ ಗ್ರ್ಯಾಂಟ್ ಗಳು ಬಂದಾಗ ವಾರ್ಡ್ ಸಭೆ ನಡೆಸುವಂತೆ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಏಕೆ ಸಭೆ ನಡೆಸುವುದಿಲ್ಲ ಎಂದು ವಾರ್ಡ್ ಸಭೆಯಲ್ಲಿ ಗ್ರಾಪಂ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ಹುಳಿಯಾರಿನಲ್ಲಿ ನಡೆಯಿತು.
ಹುಳಿಯಾರು ಗ್ರಾಪಂಗೆ ಇಂದಿರಾ ಆವಾಸ್ ಮತ್ತು ಬಸವ ವಸತಿ ಯೋಜನೆಯಲ್ಲಿ ಮನೆಗಳ ಗ್ರ್ಯಾಂಟ್‌ಗಳು ಬಂದಿದ್ದು ಇವುಗಳ ಹಂಚಿಕೆಗೆ ಅರ್ಹ ಫಲಾನುಭವಿಗಳ ಗುರುತಿಸುವುದಕ್ಕಾಗಿ ೪ ನೇ ವಾರ್ಡ್ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ವಾರ್ಡ್ ಸಭೆ ನಡೆಸಲಾಯಿತು.
ಈ ಸಭೆಗೆ ಆಗಮಿಸಿದ್ದ ಸ್ಥಳಿಯ ನಿವಾಸಿಗಳು ಮನೆ ಗ್ರ್ಯಾಂಟ್ ಬಂದಾಗ ಮಾತ್ರ ವಾರ್ಡ್‌ಸಭೆ ನಡೆಸುತ್ತೀರ. ಇದೇ ರೀತಿ ವಾರ್ಡ್‌ಗಳಲ್ಲಿನ ಕುಡಿಯುವ ನೀರು, ಒಳ ಚರಂಡಿ, ಬೀದಿ ದೀಪಗಳ ಸಮಸ್ಯೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಇವುಗಳನ್ನು ಪರಿಹರಿಸುವ ಸಲುವಾಗಿ ವಾರ್ಡ್ ಸಭೆಗಳನ್ನು ನಡೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದರು.
ಇದಕ್ಕೆ ಗ್ರಾಪಂ ಸದಸ್ಯ ರಂಗನಾಥ್ ಪ್ರತಿಕ್ರಿಯಿಸಿ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟನಲ್ಲಿ ಸರ್ಕಾರದಿಂದ ಮಂಜೂರಾಗಿರುವ ಕುರಿಯುವ ನೀರಿನ ಶುದ್ದೀಕರಣ ಘಟಕವನ್ನು ಈ ದೇವಾಲಯದ ಹಿಂಭಾಗದಲ್ಲಿ ಸ್ಥಾಪಿಸಲಾಗುತ್ತಿದೆ. ಮುಂದಿನ ೩ ದಿನದಲ್ಲಿ ಶಾಸಕರು ಉದ್ಘಾಟಿಸಲಿದ್ದಾರೆಂದರು. ೪ ನೇ ವಾರ್ಡ್‌ಗೆ ನೀರಿನ ಸೌಲಭ್ಯ ನಿರಂತರವಾಗಿ ನೀಡಬೇಕೆಂದು ಈಗಾಗಲೇ ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. ಕೆಲವೇ ದಿನಗಳಲ್ಲಿ ಹೊಸದಾಗಿ ಪೈಪ್‌ಲೈನ್ ಮತ್ತು ಮಿನಿ ಟ್ಯಾಂಕ್‌ನ ನಿರ್ಮಾಣದ ಕಾಮಗಾರಿ ನಡೆಸಿ ನೀರಿನ ತೊಂದರೆ ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ವಾರ್ಡ್ ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಗೀತಪ್ರದೀಪ್, ಉಪಾಧ್ಯಕ್ಷ ಗಣೇಶ್, ಸದಸ್ಯರಾದ ಶಂಕರ್ ಹಾಗೂ ಕಾರ್ಯದರ್ಶಿ ಉಮಾಮಹೇಶ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ