ವಿದ್ಯಾವಾರಿಧಿ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ
ಭಾರತೀಯ ಸಂಸ್ಕೃತಿ ಬಹಳ ಹಿರಿದಾಗಿದ್ದು, ಆಚಾರ ವಿಚಾರ ಪರಂಪರೆಯನ್ನು ಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ ಎಂದು ಮಾಜಿ ಶಾಸಕ ಹಾಗೂ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ತಿಳಿಸಿದರು.
ಪಟ್ಟಣದ ಸುವರ್ಣಮುಖಿ ಕ್ಯಾಂಪಸ್ ನಲ್ಲಿ ಗುರುವಾರದಂದು ಯುಕೆಜಿ ಹಾಗೂ ಎಲ್.ಕೆ.ಜಿ ಮಕ್ಕಳಿಗಾಗಿ ವಿದ್ಯಾವಾರಿಧಿ ಶಾಲೆಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಮಹತ್ವವಿದ್ದು ಅವುಗಳನ್ನು ಆಚರಿಸುವ ಮುಖಾಂತರ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಕೊಡಬೇಕೆಂದರು. ಇಂತಹ ಆಚರಣೆಯಿಂದ ಮಕ್ಕಳಲ್ಲಿ ಆತ್ಮಸ್ಥರ್ಯ ವೃದ್ಧಿಸುತ್ತದೆ , ಎಲ್ಲಾ ಶಾಲೆಗಳಲ್ಲೂ ಇಂತಹ ಆಚರಣೆಗಳನ್ನು ನಡೆಸಬೇಕಿದೆ ಎಂದರು.
ಕೃಷ್ಣ ಕೇವಲ ಹಿಂದೂಗಳಿಗೆ ಮಾತ್ರ ದೇವರಲ್ಲ ,ಇಸ್ಕಾನ್ ಮೂಲಕ ಪ್ರಪಂಚದಲ್ಲೆಲ್ಲ ಹರಡಿರುವ ಕೃಷ್ಣನ ಮಹಿಮೆಗೆ ವಿದೇಶಿಯರು ಕೂಡ ಮನಸೋತಿದ್ದು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಚರಣೆಯಿಂದ ಧಾರ್ಮಿಕತೆ ಜೊತೆಗೆ ಪರಸ್ಪರ ಸೌಹಾರ್ದತೆಗೆ ಪೂರಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೇವಲ ಪ್ರಚಾರದ ಹುಚ್ಚಿನಿಂದ ರಾಮಾಯಣ,ಮಹಾಭಾರತ,ಭಗವದ್ಗೀತೆಗಳ ಬಗ್ಗೆ ವಿವಾದ ಹುಟ್ಟುಹಾಕುತ್ತಿರುವುದು ಉತ್ತಮ ಬೆಳವಣಿಗೆಯಲ್ಲ,ಅಂತಹ ವಿಕೃತ ಮನೋಭಾವದವರ ಹೇಳಿಕೆಗಳನ್ನು ಬದಿಗಿಟ್ಟು ಪುರಾಣ ಪುರುಷರ ಆದರ್ಶವನ್ನು ಮೈಗೂಡಿಸಿಕೊಳ್ಳಿ ಎಂದರು.
ಪ್ರಾಂಶುಪಾಲ ರವಿ ಮಾತನಾಡಿ ಪಾಶ್ಚಾತ್ಯಅನುಕರಣೆಯಿಂದ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಷಾದನೀಯ.ಟಿವಿ ಪ್ರಪಂಚದಲ್ಲಿ ಮುಳುಗುವ ಬದಲು ಪೋಷಕರುಗಳು ರಾಮಾಯಣ ,ಮಹಾಭಾರತ,ಪಂಚತಂತ್ರ,ಜಾತಕ ಕಥೆಗಳ ನೀತಿಪಾಠವನ್ನು ಮಕ್ಕಳಿಗೆ ಕಥೆಯ ರೂಪದಲ್ಲಿ ಹೇಳಿ ಅವರಲ್ಲಿ ನಮ್ಮ ಪರಂಪರೆ,ಆದರ್ಶ ಬಗ್ಗೆ ತಿಳಿಹೇಳಿ ಎಂದರು.ಶಾಲಾ ಕಾರ್ಯದರ್ಶಿ ಕವಿತಾ ಕಿರಣ್ ಉಪಸ್ಥಿತರಿದ್ದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಸುಮಾರು ೨೦೦ ಮಂದಿ ಪುಟಾಣಿಗಳು ಶ್ರೀಕೃಷ್ಣನ ವೇಷಧಾರಿಗಳಾಗಿ ಬಂದು ಗಮನ ಸೆಳೆದರು. ಶ್ರೀಕೃಷ್ಣ,ರಾಧ,ರುಕ್ಮೀಣಿಯರ ಬಗೆಬಗೆಯ ವೇಷ ತೊಟ್ಟ ಪುಟ್ಟಪುಟ್ಟ ಹೆಜ್ಜೆ ಹಾಕುತ್ತ ಯಶೋಧ ಕೃಷ್ಣಲೀಲೆಯ ತೋರುತ್ತಾ ಮಕ್ಕಳು ಜನರನ್ನು ರಂಜಿಸಿದರು.ಶ್ರೀ ಕೃಷ್ಣನ ನೃತ್ಯರೂಪಕ,ಹರಿಕಥೆ ಹಾಗೂ ನಾಟಕ ಪ್ರದರ್ಶಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ