ಮಹದಾಯಿ ಮತ್ತು ಕಳಸಾ-ಬಂಡೂರಿಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಹಾಗೂ ರೈತಸಂಘ ಶನಿವಾರದಂದು ಕರೆದಿದ್ದ ಬಂದ್ ಗೆ ಹುಳಿಯಾರಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಅಂಗಡಿಮುಗ್ಗಟ್ಟುಗಳು,ಹೋಟೆಲ್ ಗಳನ್ನು ಸ್ವಯಂಪ್ರೇರಿತರಾಗಿ ಬಾಗಿಲು ಹಾಕುವ ಮುಖಾಂತರ ಹೋರಾಟಕ್ಕೆ ಕೈಜೋಡಿಸಿದರು.
ನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಹುಳಿಯಾರು ಎಪಿಎಂಸಿಅಂಗಡಿಗಳು ಬಾಗಿಲು ಮುಚ್ಚಿರುವುದು. |
ಮುಂಜಾನೆ ಸುರಿದ ಮಳೆಯು ಕೂಡ ಬಂದ್ ಗೆ ಸಹಕಾರಿಯಾಗಿದ್ದು ಹತ್ತು ಗಂಟೆಯವರೆಗೂ ಮಳೆ ಬರುತ್ತಿದ್ದರಿಂದ ಜನ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿ ಬಂದ್ ನ ಯಶಸ್ಸಿಗೆ ಕಾರಣವಾಯಿತು.
ವರ್ತಕರ ಸಂಘ, ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಮಾಲೀಕರು, ಕಾರ್ಮಿಕರು,ಕನ್ನಡಪರ ಸಂಘಟನೆಗಳು,ರೈತಸಂಘ ಸೇರಿದಂತೆ ಮುಂತಾದ ಸಂಘಟನೆಳು ಬಂದ್‌ಗೆ ಸಾಥ್ ನೀಡಿದ್ದರಿಂದ ಯಾವುದೇ ವ್ಯಾಪಾರ ವ್ಯವಹಾರ ಜರುಗದೆ ಪಟ್ಟಣ ವ್ಯವಹಾರ ಬಹುತೇಕ ಸ್ತಬ್ಧವಾಗಿತ್ತು.
ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.ಮೆಡಿಕಲ್ ಸ್ಟೋರ್,ಆಸ್ಪತ್ರೆ,ಪೆಟ್ರೋಲ್ ಬಂಕ್ ಎಂದಿನಂತೆ ತೆರದಿತ್ತು.ಖಾಸಗಿ ಬಸ್ ಗಳು,ಲಾರಿಗಳು,ಆಟೋಗಳು,ಟೂರಿಸ್ಟ್ ಟ್ಯಾಕ್ಸಿಗಳು ರಸ್ತೆಗಿಳಿಯದಿದ್ದರಿಂದ ಬಹುತೇಕ ನಿರ್ಜನವಾಗಿತ್ತು. ಕೆ ಎಸ್ ಆರ್ಟಿಸಿ ಬಸ್‌ಗಳು ಕೂಡ ಆಗಮಿಸದ್ದರಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಬಂದ್ ವಿಚಾರ ಮುಂಚಿತವಾಗಿಯೇ ತಿಳಿದಿದ್ದರಿಂದ ಪ್ರಯಾಣಿಕರು ಅಷ್ಟಾಗಿ ಕಂಡುಬರಲಿಲ್ಲ.ಸಂಚಾರಕ್ಕೆ ದ್ವಿಚಕ್ರ ವಾಹನ ಬಳಕೆಯಾಗಿತ್ತು.
ಬಸ್ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಹುಳಿಯಾರು ಬಸ್ ನಿಲ್ದಾಣ |
ಹೋಟೆಲ್‌ಗಳು,ಟೀ ಅಂಗಡಿಗಳು ಬಾಗಿಲು ಮುಚ್ಚಿದ್ದು ನಿತ್ಯ ಗ್ರಾಹಕರಿಗೆ ಅನಾನುಕೂಲವಾಯಿತು.
ರಾಷ್ಟ್ರೀಕೃತ ಬ್ಯಾಂಕುಗಳೂ,ಸರ್ಕಾರಿ ಕಚೇರಿ,ಅಂಚೆ ಕಛೇರಿಗಳಿಗೆ ಶುಕ್ರವಾರ ಬಕ್ರೀದ್ ರಜೆ, ನಾಲ್ಕನೇ ಶನಿವಾರ ಪ್ರಯುಕ್ತ ರಜೆ ಹಾಗೂ ಭಾನುವಾರದಂದು ಎಂದಿನ ರಜೆ ಇರುವುದರಿಂದ ಸಿಬ್ಬಂದಿಗಳು ಬಾರದೆ ಬಂದ್‌ಗೆ ಸಹಕಾರ ಸಿಕ್ಕಂತಾಯಿತು.
ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ರಸ್ತೆಗಿಳಿಯದ ಬಸ್, ಆಟೋಗಳು ಸಂಚಾರ ಸಂಜೆ ನಂತರ ಪ್ರಾರಂಭವಾದರೆ ಮುಚ್ಚಲ್ಪಟ್ಟಿದ ಅಂಗಡಿಗಳಲ್ಲಿ ಸಂಜೆನಂತರ ಕೆಲವರು ತೆರೆದು ವ್ಯಾಪಾರ ಪ್ರಾರಂಭಿಸಿದರು.
ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಕನ್ನಡಪರ ಸಂಘಟನೆಗಳು,ರೈತಸಂಘಟನೆಗಳು ಸಾಕಷ್ಟಿದ್ದರೂ ಯಾವೊಂದು ಸಂಘಟನೆಯವರು ಒಂದೆಡೆ ಸೇರಿ ಮೆರವಣಿಗೆ ಮಾಡುವುದಾಗಲಿ,ಘೋಷಣೆ ಕೂಗುವುದಾಗಲಿ, ಮನವಿ ಅರ್ಪಿಸುವುದಾಗಲಿ,ಈ ಬಗ್ಗೆ ಅರಿವು ಮೂಡಿಸುವುದಾಗಲಿ ಮಾಡದೆ ಮೌನವಹಿಸಿದ್ದು ಪ್ರಜ್ಞಾವಂತರ ಟೀಕೆಗೆ ಕಾರಣವಾಯಿತು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ