ಕಳೆದ ಮೂರ್ನಾಲ್ಕು ದಿನಗಳಿಂದ ಹುಳಿಯಾರು ಪಟ್ಟಣದಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮಕ್ಕಳ ಅಪಹರಣದ ಬಗ್ಗೆ ಹಬ್ಬಿರುವ ವದಂತಿ ಸುಳ್ಳಾಗಿದ್ದು,ಇಂತಹ ಯಾವುದೇ ಪ್ರಕರಣಗಳು ಹುಳಿಯಾರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿಲ್ಲದಿದ್ದು ಈ ಬಗ್ಗೆ ಸಾರ್ವಜನಿಕರು,ಪೋಷಕರು ಆತಂಕಕ್ಕೆ ಒಳಾಗಾಗುವ ಅಗತ್ಯವಿಲ್ಲವೆಂದು ಹುಳಿಯಾರು ಠಾಣೆಯ ಎ ಎಸ್ ಐ ಶಿವಪ್ಪ ಮನವಿ ಮಾಡಿದರು.
ಅವರು ಪಿಎಸ್ ಐ ನರಸಿಂಹಯ್ಯನವರ ಮಾರ್ಗದರ್ಶನದಲ್ಲಿ ಪಟ್ಟಣದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಸಭೆ ನಡೆಸಿದಲ್ಲದೆ ನಂತರ ತಾವೇ ಖುದ್ದಾಗಿ ಆಟೋದಲ್ಲಿ ಸಾರ್ವಜನಿಕವಾಗಿ ಮೈಕ್ ಹಾಕಿಕೊಂಡು ಪ್ರಚಾರ ನಡೆಸಿದರು.
ಹುಳಿಯಾರು ಪಟ್ಟಣದಲ್ಲಿ ಮಕ್ಕಳ ಅಪಹರಣದ ಬಗ್ಗೆ ಹಬ್ಬಿರುವ ಸುಳ್ಳುವದಂತಿಗಳಿಗೆ ಕಿವಿಗೊಡಬಾರದೆಂದು ಸಾರ್ವಜನಿಕರಿಗೆ ತಾವೇ ಖುದ್ದಾಗಿ ತೆರಳಿ ಮನವಿ ಮಾಡುತ್ತಿರುವ ಎ ಎಸ್ ಐ ಶಿವಪ್ಪ.
|
ವಿದ್ಯಾವಾರಿಧಿ,ಕನಕದಾಸ,ವಾಸವಿ ಮತ್ತಿತರ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ ಅನಗತ್ಯ ಭಯ ಬೇಡವೆಂದು ತಿಳಿಸಿದರು.ಮಕ್ಕಳನ್ನು ಅಪಹರಿಸಿ ಕಣ್ಣುಕೀಳುವ,ಕಿಡ್ನಿ ಕಸಿಯುವ ಬಗ್ಗೆ ಹಬ್ಬಿರುವ ವದಂತಿಗಳಿಗೆ ಪೋಷಕರು ಭಯಭೀತರಾಗಿ ಮಕ್ಕಳನ್ನು ಶಾಲೆಗೆ ಕಳುಹಿಸದಿರುವುದು ಗಮನಕ್ಕೆ ಬಂದಿದ್ದು ಈ ಬಗ್ಗೆ ಭಯಪಡುವ ಪ್ರಮೇಯ ಬೇಡವೆಂದರು.ಶಾಲಾಗಳಲ್ಲಿ ಮಕ್ಕಳ ಪೋಷಕರನ್ನು ಹೊರತು ಪಡಿಸಿ ಸಂಬಂಧಿಕರೆಂದು ಹೇಳಿಕೊಂಡು ಬರುವ ಯಾವುದೇ ವ್ಯಕ್ತಿಗಳೊಂದಿಗೆ ಮಕ್ಕಳನ್ನು ಕಳಿಸಬಾರದು ಎಂದು ಸೂಚನೆ ನೀಡಿದರು.
ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿ ಇದುವರೆಗೂ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಹಾಗಿದ್ದು ಕೂಡ ಠಾಣಾ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಮಕ್ಕಳ ಅಪಹರಣ ಕುರಿತು ಹಬ್ಬಿರುವ ಸುಳ್ಳುವದಂತಿಗಳ ಬಗ್ಗೆ ಮುಂಜಾಗ್ರಾತ ಕ್ರಮ ಕೈಗೊಂಡಿದ್ದು ಠಾಣಾ ವ್ಯಾಪ್ತಿಯ ೧೦ ಬೀಟ್ ಗ್ರಾಮಗಳ ೭೭ ಹಳ್ಳಿಗಳಲ್ಲಿನ ಸಾರ್ವಜನಿಕರಿಗೆ ಹಾಗೂ ಎಲ್ಲಾ ಶಾಲೆಗಳಿಗೂ ತೆರಳಿ ಶಿಕ್ಷಕರು ಮತ್ತು ಮಕ್ಕಳಲ್ಲಿ ಅರಿವು ಮೂಡಿಸುತ್ತಿರುವುದಾಗಿ ತಿಳಿಸಿದರು.
ವದಂತಿಗಳ ಬೆನ್ನು ಹತ್ತಿ ಹೊರರಾಜ್ಯಗಳಿಂದ ಬಂದು ಹಳ್ಳಿಗಳಲ್ಲಿ ಬೆಡ್ ಶೀಟ್ ಮುಂತಾದ ವಸ್ತುಗಳನ್ನು ಮಾರಾಟ ಮಾಡುತ್ತಿರುವವರನ್ನು ಗುಮಾನಿ ಮೇಲೆ ಠಾಣೆಗೆ ಕರೆತಂದು ವಿಚಾರಣೆ ನಡೆಸಿರುವುದಾಗಿ ತಿಳಿಸಿದರು. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಸಂಶಯ ಬಂದಲ್ಲಿ ಕೂಡಲೇ ಠಾಣೆಗೆ ಮಾಹಿತಿ ನೀಡಬೇಕು ಎಂದ ಅವರು ಸಾರ್ವಜನಿಕರು ಪೋಲಿಸರೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ