ಗ್ರಾ.ಪಂಚಾಯ್ತಿಗೆ ಸದಸ್ಯರಿಂದಲೇ ಬೀಗ
----------------
----------------
ರಜೆ ಮೇಲೆ ತೆರಳಿರುವ ಪಿಡಿಓ ಗೈರು ಹಾಜರಿಯಿಂದ ಉದ್ಯೋಗಖಾತ್ರಿ ಯೋಜನೆ ಹಾಗೂ ವಸತಿ ಯೋಜನೆ ಸ್ಥಗಿತಗೊಂಡಿದ್ದು ಗ್ರಾ.ಪಂ. ವ್ಯಾಪ್ತಿಯ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ಗ್ರಾ.ಪಂ. ಸದಸ್ಯರೇ ಕಚೇರಿಗೆ ಬೀಗ ಜಡಿದಿರುವ ಘಟನೆ ಹುಳಿಯಾರು ಹೋಬಳಿ ಹೊಯ್ಸಲಕಟ್ಟೆಯಲ್ಲಿ ಗುರುವಾರ ಜರುಗಿದೆ.
ಇಲ್ಲಿನ ಪಿಡಿಓ ಕಳೆದ ಒಂದು ತಿಂಗಳಿಂದ ರಜೆ ಮೇಲೆ ತೆರಳಿರುವ ಪರಿಣಾಮ ಉದ್ಯೋಗ ಖಾತ್ರಿ ಕೆಲಸಗಳು ಸೇರಿದಂತೆ ಅನೇಕ ಕಾರ್ಯಗಳು ಸ್ಥಗಿತಗೊಂಡಿವೆ. ಅಲ್ಲದೆ ಸರ್ಕಾರದಿಂದ ವಸತಿ ಯೋಜನೆಯಡಿ ಮಾಡಬೇಕಿದ್ದ ಫಲಾನುಭವಿಗಳ ಆಯ್ಕೆ ಸಹ ನಡೆಸಲಾಗದೆ ವಸತಿಹೀನ ಬಡವರಿಗೆ ತೊಂದರೆಯಾಗಿದೆ ಎಂದು ಸದಸ್ಯರು ಆರೋಪಿಸಿದ್ದಾರೆ.
ಹುಳಿಯಾರು ಸಮೀಪದ ಹೊಯ್ಸಳಕಟ್ಟೆಯಲ್ಲಿ ಉದ್ಯೋಗ ಖಾತ್ರಿ ಹಾಗೂ ವಸತಿ ಯೋಜನೆ ಸ್ಥಗಿತಗೊಂಡಿರುವುದನ್ನು ವಿರೋಧಿಸಿ ಗ್ರಾ.ಪಂಚಾಯ್ತಿ ಕಛೇರಿಗೆ ಸದಸ್ಯರು ಬೀಗ ಜಡಿದಿರುವುದು. |
ಕುಡಿಯುವ ನೀರು, ಬೀದಿದೀಪ, ಸ್ವಚ್ಛತೆ ನಿರ್ವಹಣೆಗಾಗಿ ಇನ್‌ಚಾರ್ಜ್ ಪಿಡಿಓ ನೀಡಲಾಗಿದ್ದು ಮೂಲ ಸೌಕರ್ಯ ಸೇವೆಯಲ್ಲಿ ತೊಡಕಿಲ್ಲದಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ ಮೋಟಾರ್ ಕೆಟ್ಟರೆ, ಪೈಪ್ ಲೈನ್ ದುರಸ್ಥಿಗೆ, ಬೀದಿದೀಪ ಖರೀದಿಗೆ ಜೊತೆಗೆ ೧೩ ನೇ ಹಣಕಾಸು ಯೋಜನೆಯಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲು ಹಣ ಬಿಡಿಸುವ ಪವರ್ ಇವರಿಗೆ ಇಲ್ಲವಾದ್ದರಿಂದ ಗ್ರಾ.ಪಂ. ಆಡಳಿತ ನಿಷ್ಕ್ರಿಯವಾಗಿದೆ . ಅಲ್ಲದೆ ಉದ್ಯೋಗಖಾತ್ರಿ ಯೋಜನೆ ಸಹ ಅನುಷ್ಠಾನಗೊಳ್ಳದೆ ಸ್ಥಗಿತಗೊಂಡಿದೆ ಎಂದಿದ್ದಾರೆ.
ಈ ಬಗ್ಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೇಲಧಿಕಾರಿಗಳು ಇನ್ನಾದರೂ ಇತ್ತ ಗಮನ ಹರಿಸಿ ಸಮಸ್ಯೆ ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ