ಜಿಲ್ಲೆಯಲ್ಲಿಯೇ ಅತಿ ದೊಡ್ಡ ಪಂಚಾಯ್ತಿ ಎಂಬ ಹೆಗ್ಗಳಿಕೆ ಹೊಂದಿರುವ ಹುಳಿಯಾರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸೈಯದ್ ಅನ್ಸರ್ ಅಲಿ ಹಾಗೂ ಉಪಾಧ್ಯಕ್ಷರಾಗಿ ವೆಂಕಟಮ್ಮ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಆಗಮಿಸಿದ ತಹಶೀಲ್ದಾರ್ ಟಿ.ಸಿ.ಕಾಂತರಾಜು ಅವರ ನೇತೃತ್ವದಲ್ಲಿ ಶುಕ್ರವಾರ ಚುನಾವಣೆ ನಡೆದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ಜೆಡಿಎಸ್ ಬೆಂಬಲಿಗರು ಗೆಲ್ಲುವ ಮೂಲಕ ಅಧಿಕಾರದ ಗದ್ದುಗೆ ಅಲಂಕರಿಸಿದರು.
ಎರಡೂ ಪಕ್ಷಗಳು ಪ್ರವಾಸ ಹಾಗೂ ಹಣದ ಆಮೀಷಗಳಲ್ಲದೆ ಅನೇಕ ಕಸರತ್ತು ನಡೆಸಿ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಇಂದು ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ನ ಸೈಯದ್ ಅನ್ಸರ್ ಅಲಿ ಅವರು 18 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯ ಶಿವಕುಮಾರ್ ಅವರನ್ನು ಪರಾಭವಗೊಳಿಸಿದರೆ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ನ ವೆಂಕಟಮ್ಮ ಅವರು ಬಿಜೆಪಿಯ ಫರಾಹ್ನಾ ಅವರಿಗಿಂತ 4 ಮತಗಳನ್ನು ಹೆಚ್ಚು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಮತ ಚಲಾವಣೆಯಲ್ಲಿ ತಲಾ ಒಂದೊಂದು ಮತಗಳು ತಿರಸ್ಕೃತವಾದವು.
ಸೈಯದ್ ಅನ್ಸರ್ ಅಲಿಯವರು ಸತತ 17 ವರ್ಷಗಳ ನಂತರ ಅಧ್ಯಕ್ಷ ಪಟ್ಟ ಅಲಂಕರಿಸಿದ ಮುಸ್ಲಿಂ ಯುವಕನಾದರೆ ವೆಂಕಟಮ್ಮ ಕಳೆದ 5 ವರ್ಷಗಳ ನಂತರ ಉಪಾಧ್ಯಕ್ಷ ಪಟ್ಟಕ್ಕೆ ಏರಿದ ಮಹಿಳೆಯಾಗಿದ್ದಾರೆ.
ಗೆಲುವಿನ ಸುದ್ದಿ ತಿಳಿದ ತಕ್ಷಣ ಜೆಡಿಎಸ್ ಬೆಂಬಲಿತರು ಪಟಾಕಿ ಸಿಡಿಸಿ ತಮ್ಮ ನಾಯಕರಗಳಿಗೆ ಜೈಕಾರ ಕೂಗಿ ಸಂಭ್ರಮಿಸಿದರು. ಸಿಪಿಐ ರವಿಪ್ರಸಾದ್ ನೇತೃತ್ವದಲ್ಲಿ ಪಿಎಸ್ಐ ಪಾರ್ವತಮ್ಮ ತಮ್ಮ ಸಿಬ್ಬಂಧಿಯೊಂದಿಗೆ ಪರಿಸ್ಥಿತಿ ನಿಯಂತ್ರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ