ಚಿಕ್ಕನಾಯಕನಹಳ್ಳಿ ತಾಲ್ಲೂಕಿನಾದ್ಯಂತ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದ ತಾಲ್ಲೂಕಿನ 26 ಕೆರೆಗಳಿಗೆ ಹೇಮಾವತಿ ನೀರು ಹರಿಸುವ 102ಕೋಟಿ ರೂಗಳ ಕಾಮಗಾರಿ ಶನಿವಾರ ವಿದ್ಯುಕ್ತವಾಗಿ ಚಾಲನೆಗೊಂಡಿರುವುದು ಬಿಜೆಪಿ ಸರ್ಕಾರವು ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಚಿ.ನಾ.ಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ತಿಳಿಸಿದರು.
ಹುಳಿಯಾರಿನ ತಮ್ಮ ನಿವಾಸಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾವಿಸಿದ ಅವರು ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಸರ್ಕಾರಿ ಜಾಗಗಳಲ್ಲಿ ಮಾತ್ರ ಕಾಮಗಾರಿ ನಡೆಯಲಿದ್ದು ನಂತರದ ದಿನಗಳಲ್ಲಿ ಸಂಪೂರ್ಣವಾಗಿ ಕಾಮಗಾರಿ ನಡೆಯುತ್ತದೆ ಎಂದರು.ಕ್ಷೇತ್ರದಲ್ಲಿ ವಿರೋಧ ಪಕ್ಷ ಅಧಿಕಾರದಲ್ಲಿದರೂ ಸಹ ಕ್ಷೇತ್ರದ ಅಭಿವೃದ್ದಿಯನ್ನು ಮನಗಂಡು ಬಿಜೆಪಿ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿದೆ ,ಆದರೆ ಹಾಲಿ ಶಾಸಕರು ತಮ್ಮ ಕ್ಷೇತ್ರದಲ್ಲಿನ ಆಗಬೇಕಿರುವ ಅಭಿವೃದ್ದಿ ಕಾರ್ಯಗಳು,ಇರುವ ಸಮಸ್ಯೆಗಳ ಬಗ್ಗೆ ಯಾವುದೇ ಕರಡುಗಳು ಸರ್ಕಾರದ ಮುಂದಿಟ್ಟಿರುವ ನಿದರ್ಶನಗಳಿಲ್ಲ,ಆದರೂ ಕ್ಷೇತ್ರದಲ್ಲಿ ಮೂರಾರ್ಜಿ ವಸತಿ ಶಾಲಾ ಕಟ್ಟಡ ನಿರ್ಮಾಣ,ಅಗ್ನಿಶಾಮಕ ಠಾಣೆ,ಶಾಲೆಲಾಕಟ್ಟಡಗಳು ಮಂಜೂರಾಗಿವೆ,ಹರಿಜನ ಕಾಲೋನಿಗಳಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ,ಸುವರ್ಣ ಗ್ರಾಮಯೋಜನೆಯನ್ನು ಹಲವಾರು ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಚಾಲನೆಗೆ ತಂದಿರುವುದಲ್ಲದೆ,ತಾಲ್ಲೂಕಿನ ಅಭಿವೃದ್ದಿಗಾಗಿ ಒಟ್ಟು 300ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ್ದು ,ಬಿಜೆಪಿ ಸರ್ಕಾರದಲ್ಲಿ ಯಾವುದೇ ತಾರತಮ್ಯ ಮನೋಬಾವವಿಲ್ಲ ಎಂಬುದನ್ನು ತೋರ್ಪಡಿಸಿದೆ ಎಂದರು.
ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರುಗಳ ಸಮಯಸಾಧಕತನವನ್ನು ಲೇವಡಿ ಮಾಡಿದ ಅವರು ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆತು ಜನರಿಂದ ಅಂತರವನ್ನು ಕಾಯ್ದುಕೊಂಡ ಹಾಲಿ ಶಾಸಕರು ಕೆಡಿಪಿ ಮೀಟಿಂಗ್ ಗಳಾಗಲಿ,ಬಗರ್ ಹುಕುಂ ಮೀಟಿಂಗ್ ಗಳನ್ನಾಗಲಿ ಸೂಕ್ತ ಸಮಯದಲ್ಲಿ ನಡೆಸದೆ ತಾಲ್ಲೂಕಿಗೆ ಅನ್ಯಾಯ ಎಸಗಿದ್ದಾರೆ.ವಿರೋಧ ಪಕ್ಷದ ಶಾಸಕನಾಗಿರುವುದರಿಂದ ಹಾಲಿ ಬಿಜೆಪಿ ಸರ್ಕಾರ ಕ್ಷೇತ್ರಕ್ಕೆ ಅನುದಾನ ನೀಡಲಿಲ್ಲವಾದ್ದರಿಂದ ಅಭಿವೃದ್ದಿಯಲ್ಲಿ ಹಿನ್ನಡೆಯಾಯಿತು ಎಂದು ಹೇಳಿಕೊಳ್ಳುತ್ತಾ ಮತ್ತೊಮ್ಮೆ ಮತಯಾಚನೆಗೆ ಹೊರಟಿದ್ದಾರೆ.ಆದರೆ ರಾಜ್ಯದಲ್ಲಿ ವಿರೋಧಪಕ್ಷದ ಶಾಸಕರುಗಳಿರುವ ಇನ್ಯಾವುದೆ ಕ್ಷೇತ್ರಗಳು ಅಭಿವೃದ್ದಿಯಾಗಿಲ್ಲವೆ ಎಂದು ಪ್ರಶ್ನಿಸಿದರು.
ತಾಲ್ಲೂಕಿಗೆ ಹೇಮಾವತಿ ನದಿ ನೀರು ಹರಿಸುವ ಸಲುವಾಗಿ ಹೋರಾಟಗಳು ನಡೆಯುವಾಗ ಈ ಭಾಗಕ್ಕೆ ಹೇಮಾವತಿ ಯೋಜನೆ ಕಾರ್ಯರೂಪಕ್ಕೆ ಬರುವುದು ಅಸಾಧ್ಯ ಎನ್ನುತ್ತಿದ್ದ ಮಾಜಿ ಶಾಸಕರು ಹಾಗೇನಾದರೂ ನೀರು ಹರಿದರೆ ತಾವು ರಾಜಕೀಯ ನಿವೃತ್ತಿ ಹೊಂದುವುದಾಗಿ ಹೇಳಿಕೆ ನೀಡುತ್ತಿದ್ದರು.ಈಗ ನೋಡಿದರೆ ಅದೇ ನೀರನ್ನು ದಾಳವಾಗಿಟ್ಟುಕೊಂಡು ಯಡಿಯೂರಪ್ಪನವರು ಆ ಯೋಜನೆ ಜಾರಿಗೆ ತಂದಂತಹ ವ್ಯಕ್ತಿ ಅವರನ್ನು ಬೆಂಬಲಿಸುವುದು ಅನಿವಾರ್ಯ ಎನ್ನುತ್ತಾ ಇದ್ದ ಪಕ್ಷವನ್ನು ತೊರೆದು ಕೆಜೆಪಿ ಸೇರಿ ಪ್ರಚಾರಕ್ಕೆ ಮುಂದಾಗಿರಿವುದನ್ನು ನೋಡಿದರೆ ಜೆಟ್ಟಿ ಸೋತು ನೆಲ್ಲಕ್ಕೆ ಬಿದ್ದರೂ ತನ್ನ ಮೀಸೆ ಮಣ್ಣಾಗಲಿಲ್ಲ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದರು. ಶಾಸಕರಾಗಲೇ ಬೇಕೆಂಬ ಹಟಕ್ಕೆ ಬಿದ್ದು ತಮ್ಮ ತತ್ವ ಸಿದ್ದಾಂತಗಳಿಗೆ ತಿಲಾಂಜಲಿ ಇಟ್ಟು ಬೈದವರ ಜೊತೆಗೆ ಸೇರಿ ಮತಗಳಿಕೆಗೆ ಮುಂದಾಗಿರುವುದು ದುರದೃಷ್ಟಕರ ಎಂದರು.
ತಾಪಂ ಅಧ್ಯಕ್ಷ ಜಗದೀಶ್,ಮಾಜಿ ಅಧ್ಯಕ್ಷ ಸೀತಾರಾಮಯ್ಯ,ಸದಸ್ಯ ಕೆಂಕೆರೆ ನವೀನ್,ಗ್ರಾಪಂ ಅಧ್ಯಕ್ಷ ಶ್ರೀನಿವಾಸ್,ವಕೀಲ ರಮೇಶ್ ಬಾಬು,ಮುಖಂಡರಾದ ಕೆ.ಕೆ.ಹನುಮಂತಪ್ಪ,ನಂದೀಹಳ್ಳಿ ಮಲ್ಲೇಶಯ್ಯ,ಧನಂಜಯ, ದಯಾನಂದ, ರಾಮಯ್ಯ, ಪ್ರದೀಪ,ಗಣೇಶ ಇನ್ನತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ