ಹೊಸವರ್ಷಕ್ಕೆ ಮುನ್ನುಡಿಯಾಗಿರುವ ಹಿಂದೂ ಸಂಪ್ರದಾಯದ ಪ್ರಮುಖ ಹಾಗೂ 'ವಿಜಯ' ನಾಮ ಸಂವತ್ಸರದ ಮೊದಲ ದಿನವಾದ ಯುಗಾದಿ ಹಬ್ಬವನ್ನು ಗುರುವಾರದಂದು ಹುಳಿಯಾರಿನಲ್ಲಿ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಸಂಪ್ರದಾಯದಂತೆ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮನೆಮಂದಿಯೆಲ್ಲ ಅಭ್ಯಂಜಯ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಜೀವನದಲ್ಲಿ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕಸಬೇಕೆಂಬ ಸಂಕೇತ ಸಾರುವ ಬೇವು-ಬೆಲ್ಲ ಸೇವಿಸಿದರು.ಸಂಜೆ ಕುಟುಂಬದೊಡನೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.ಯುಗಾದಿಹಬ್ಬದಲ್ಲಿ ಬೇವು ಬೆಲ್ಲದ ಜತೆ ಪಂಚಾಂಗ ಪೂಜೆ ಕೂಡ ಬಹುಮುಖ್ಯ ಆಚರಣೆಯಾಗಿದ್ದು ಅಂದು ಹೊಸ ಪಂಚಾಂಗವನ್ನು ತಂದು ಪೂಜಿಸಿ ಪಂಚಾಂಗ ಶ್ರವಣ ಮಾಡಿ ಆ ವರ್ಷದ ಆಯವ್ಯಯ,ಆರೋಗ್ಯ ಮುಂತಾದವುಗಳನ್ನು ಅವರವರ ರಾಶೀಫಲದ ಮೇಲೆ ತಿಳಿದುಕೊಳ್ಳಲಾಗುವುದು.
ಗುರುಗಳೆ, ಈ ಉಗಾದಿಯಲ್ಲಿ ನಮ್ಮ ರಾಶಿಫಲ ಚೆನ್ನಾಗಿದೆ ತಾನೆ?... |
ಹಬ್ಬದ ಪ್ರಯುಕ್ತ ಇಲ್ಲಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ವಾಸವಿ ಹಾಗೂ ಬನಶಂಕರಿ ದೇವಾಲಯಗಳಲ್ಲಿ ಸಾಮೂಹಿಕ ಪಂಚಾಂಗ ಶ್ರವಣ ನಡೆಯಿತು. 'ವಿಜಯ' ನಾಮ ಸಂವತ್ಸರದಲ್ಲಿ ಭದ್ರತೆ, ಅಸ್ಥಿರತೆ, ಸಾಮಾಜಿಕ ಏರಿಳಿತ, ನೈಸರ್ಗಿಕ ವಿಕೋಪಗಳನ್ನು ಪಂಚಾಂಗ ಶ್ರವಣದ ಮೂಲಕ ವಿವರಿಸಿದರು.ನೂರಾರು ಮಂದಿ ಈ ವರ್ಷದ ಭವಿಷ್ಯಮ ಮಳೆ-ಬೆಳೆ, ಗ್ರಹ-ನಕ್ಷತ್ರಗಳ ಬಲಾಬಲ, ಮನೆಯ ಮಂದಿಯ ಭವಿಷ್ಯ ಕೇಳುತ್ತಿದ್ದು ವಿಶೇಷವಾಗಿತ್ತು. ಸಂಜೆ ಬಿದಿಗೆ ಚಂದ್ರನ ದರ್ಶನ ಪಡೆದರು. ಒಟ್ಟಾರೆ 2 ದಿನಗಳ ಕಾಲ ಯುಗಾದಿ ಸಂಭ್ರಮ ತುಂಬಿ ತುಳುಕುತ್ತಿತ್ತು.
ಹಬ್ಬಕ್ಕೆ ಹಣ್ಣು ತುಸು ದುಬಾರಿಯಾದರೂ ಕೊಳ್ಳುವವರೇನೂ ಕಡಿಮೆಯಾಗಿರಲಿಲ್ಲ |
ವರ್ಷದ ತೊಡಕು : ಯುಗಾದಿ ಹಬ್ಬದ ಮಾರನೆಯ ದಿನವನ್ನು ವರ್ಷ ತೊಡಕು ಎಂದು ಆಚರಿಸಲಾಗುತ್ತದೆ. ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ. ಹೀಗಾಗಿ ವರ್ಷ ತೊಡಕಿಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆ. ಯಾವುದೇ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದರೆ ಅದನ್ನು ವರ್ಷಪೂರ್ತಿ ಮಾಡುತ್ತಾನೆ ಹಾಗೂ ಅಂದು ದೊರೆತ ಸಂಪತ್ತು ವರ್ಷ ಪೂರ್ತಿ ದೊರೆಯುತ್ತಲೇ ಇರುತ್ತದೆ ಎಂಬ ನಂಬಿಕೆ ಇದೆ.
ಭರ್ಜರಿ ಮಾಂಸದ ವ್ಯಾಪಾರ : ಯುಗಾದಿ ಹಬ್ಬದ ಮೊದಲ ದಿನ ಎಲ್ಲರೂ ಒಬ್ಬಟ್ಟಿನ ಸಿಹಿತಿಂದು ಹಬ್ಬವನ್ನು ಆಚರಿಸಿದರೆ ಗ್ರಾಮೀಣ ಭಾಗದಲ್ಲಿ ಯುಗಾದಿ ಹಬ್ಬದ ಮಾರನೆಯ ದಿನ ಮಾಂಸಹಾರಿ ವರ್ಗದ ಜನ ಹಬ್ಬವನ್ನು ಕೇವಲ ಒಬ್ಬಟ್ಟಿನ ಊಟಕ್ಕೆ ಸೀಮಿತಗೊಳಿಸದೆ ಕುರಿ ಕೋಳಿ ಅಡಿಗೆ ಮಾಡಿ ಮಾಂಸಾಹಾರಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ವರ್ಷದ ತೊಡಕು ಆಚರಿಸುವುದು ಸಾಮಾನ್ಯ.ಮಾಂಸಾಹಾರಿ ಪ್ರೇಮಿಗಳು ಯುಗಾದಿಗಿಂತ ಈ ದಿನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತ ಬಂದಿದ್ದು ಇಂದು ಸಂಬಂಧಿಗಳನ್ನು ಹಾಗೂ ಸ್ನೇಹಿತರನ್ನು ಊಟಕ್ಕೆ ಕರೆಯುವುದು ವಾಡಿಕೆ. ಹಬ್ಬದ ಹೊಸ ತೊಡಕು ಪ್ರಯುಕ್ತ ಮುಂಜಾನೆಯಿಂದಲೆ ಪಟ್ಟಣದ ಎಲ್ಲಾ ಕೋಳಿ ಅಂಗಡಿಗಳಲ್ಲಿ ಮಾಂಸದ ವ್ಯಾಪಾರ ಭರ್ಜರಿಯಾಗಿ ನಡೆದರೆ ತರಕಾರಿ ಅಂಗಡಿಯಲ್ಲಿ ಅದಕ್ಕೆ ಕಮ್ಮಿಯಿಲ್ಲದಂತೆ ಶುಂಠಿ,ಕೊತ್ತಂಬರಿ,ಸೌತೆಕಾಯಿ,ನಿಂಬೆಹಣ್ಣು ವ್ಯಾಪಾರ ಭರ್ಜರಿಯಾಗಿ ನಡೆಯಿತು.
ಶುಂಟಿ,ಕೊತ್ತುಂಬರಿ,ಸೌತೆಕಾಯಿಗೆ ಬಲು ಡಿಮ್ಯಾಂಡು |
ಕೋಳಿ ಖಾಲಿಯಾಗಿದೆಯೋ ಹೇಗಪ್ಪ ? |
ಶ್ರೀನಿವಾಸ ಚಿಕನ್ ಸೆಂಟರ್ ನಲ್ಲಿ ಭರ್ಜರಿ ವ್ಯಾಪಾರ.(ತಿರುಪತಿ ದೇವರು ಸಸ್ಯಾಹಾರಿ,ಅವನ ಹೆಸರಿನ ಮಾಂಸಾಹಾರಿ ಅಂಗಡಿಯಲ್ಲಿ ಮಾತ್ರ ಬಿಡುವಿಲ್ಲದ ವ್ಯಾಪಾರ.ಎಲ್ಲಾ ಅವನ ಕೃಪೆ.)
|
ಏನ್ ರೇಟಿಗೆ ತಗೊಂಡ್ರಿ...... |
ಲಾರಿಗಟ್ಟಲೆ ಕೋಳಿ ಭೀಕರಿಯಾಗಿ ಉತ್ತಮ ವ್ಯಾಪಾರ ವಹಿವಾಟು ನಡೆಯಿತು. ಹಳ್ಳಿಗಳಿಂದ ಬಂದ ರೈತರು ಕೈಯಲ್ಲಿ ಮೂರ್ನಾಲ್ಕು ಕೋಳಿ ನೇತು ಹಾಕಿಕೊಂಡು ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ