ಪ್ರಸ್ತುತದಲ್ಲಿ ಕೇಂದ್ರ ಸರ್ಕಾರ 2ಜಿ,ಕಲ್ಲಿದ್ದಲು,ಹೆಲಿಕ್ಯಾಪ್ಟರ್ ಹೀಗೆ ಹಗರಣಗಳ ಸುಳಿಯಲ್ಲಿ ಮುಳುಗಿದ್ದು ಕಾಂಗ್ರೆಸ್ ನಾಯಕರುಗಳು ಸಹ ಹಲವು ಹಗರಣಗಳಲ್ಲಿ ಸಿಲುಕಿ ರಾಷ್ಟ್ರದ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ .ರಾಹುಲ್ ಗಾಧಿ,ಸೋನಿಯಗಾಂಧಿ ಸೇರಿದಂತೆ ಯಾವುದೇ ಕಾಂಗ್ರೆಸ್ ನಾಯಕರುಗಳು ಉತ್ತಮ ಆಡಳಿತ ನೀಡಿರುವ ಕರ್ನಾಟಕದ ಬಿಜೆಪಿ ಸರ್ಕಾರದ ಬಗ್ಗೆ , ರಾಜ್ಯದ ಬಗ್ಗೆ ಹಾಗೂ ಬಿಜೆಪಿ ಪಕ್ಷದ ಬಗ್ಗೆ ಯಾವುದೇ ರೀತಿಯ ಮಾತನಾಡುವ,ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗುಡುಗಿದರು.
ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್.ಕಿರಣ್ ಕುಮಾರ್ ಪರ ಚುನಾವಣಾ ಪ್ರಚಾರಕ್ಕಾಗಿ ಹುಳಿಯಾರಿಗೆ ಆಗಮಿಸಿದ್ದ ಅವರು ಕಾರ್ಯಕರ್ತರ ಬೃಹತ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ತನ್ನ ಐದು ವರ್ಷದ ಅವಧಿಯಲ್ಲಿ ಸಂಪೂರ್ಣ ಬದಲಾವಣೆ ತಂದಿದ್ದು,ರಾಜ್ಯಾಂದ್ಯತ ಕೃಷಿ ಬಜೆಟ್, ಸುವರ್ಣ ಗ್ರಾಮ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ,ಭೂ ಚೇತನ ಯೋಜನೆ ಸೇರಿದಂತೆ ನಮ್ಮ ಗ್ರಾಮ-ನಮ್ಮ ರಸ್ತೆಯಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿ,ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಬಂದಿದ್ದು, ಕೃಷಿ,ಕೈಗಾರಿಕೆ ಸೇರಿದಂತೆ ಇನ್ನಿತರ ಕ್ಷೇತ್ರಗಳ ಅಭಿವೃದ್ದಿಗಾಗ ಮುಂದಾಗಿ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿರುವುದು ಬಿಜೆಪಿಯ ಸಾಧನೆಯಾಗಿದೆ.ಅಲ್ಲದೆ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂಭತ್ತು ತಿಂಗಳು ಕಳೆಯುವಷ್ಟರಲ್ಲೇ ಬಿದ್ದು ಹೋಗುತ್ತಾರೆಂದು ಹಲವರು ನುಡಿದಿದ್ದರು ಆದರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಆಡಳಿತ ನೀಡುತ್ತಾ ಇಲ್ಲಿಯವಗೆ ಸಾಗಿದ್ದೇನೆ ಇದು ತಮಗೆ ತೃಪ್ತಿ ತಂದಿದೆ ಎಂದರು.
ಪ್ರಸ್ತುತ ಚುನಾವಣೆಯಲ್ಲಿ ಜೆಡಿಎಸ್, ಬಿಎಸ್ ಅರ್ ಕಾಂಗ್ರೆಸ್ ಬಹುಮತ ಪಡೆಯುವ ಪಕ್ಷಗಳಲ್ಲ. ಇವರೆಲ್ಲಾ ಮತದಾರರನ್ನು ತಮ್ಮತ್ತ ಬಾಗಿಸಲು ಹಲವು ಆಮಿಷಗಳನ್ನು ಒಡ್ಡುತ್ತಿದ್ದು,ಇಂತಹ ಆಮಿಷಗಳಿಗೆ ಮತದಾರರು ಒಳಗಾಗದೇ ಯಾರಿಂದ ರಾಜ್ಯದ ಅಭಿವೃದ್ದಿ ಸಾಧ್ಯ ವೆಂಬುದನ್ನು ಮನಗಂಡು ಮತಚಲಾಯಿಸುವಂತೆ ಕೋರಿದರು.
ಕೆಜೆಪಿಯ ಯಡಿಯೂರಪ್ಪ ಚುನಾವಣೆಗೂ ಮುಂಚೆಯೇ ಈ ಬಾರಿ ಅತಂತ್ರ ವಿಧಾನಸಭೆ ಎಂದಿದ್ದು,ಕೆಜೆಪಿ ವ್ಯಕ್ತಿಗತವಾಗಿ ಮೂರರಿಂದ ನಾಲ್ಕು ಸ್ಥಾನಗಳಿಸಬಹುದು ಎಂದರು.ಧನಂಜಯ್ ಕುಮಾರ್ ನಂತವರು ಹಗಲಿನಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರುಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಸಂಜೆ ಯಡಿಯೂರಪ್ಪ ಕ್ಷಮೆಯಾಚಿಸುವುದು ವಿಪರ್ಯಾಸದ ಸಂಗತಿಯೆಂದು ಲೇವಡಿ ಮಾಡಿದರು.
ಇವರ್ಯಾರಿ ಮುಖ್ಯಮಂತ್ರಿ ಮಾಡಲಿಕ್ಕೆ : 1967ರ ಜನಸಂಘದಲ್ಲಿ ಆಯ್ಕೆಯಾದ ನಾಲ್ಕು ಮಂದಿಯಲ್ಲಿ ಒಬ್ಬರು ನಮ್ಮ ಚಿಕ್ಕಪ್ಪ ಆಗಿದ್ದರು,1983ರಲ್ಲಿ ಆಯ್ಕೆಯಾದ 18ಮಂದಿಯಲ್ಲಿ ನಾವಿದ್ದೆವು,ಜನಸಂಘದಿಂದಲೂ ನಮ್ಮ ಕುಟುಂಬ ಗುರ್ತಿಸಿಕೊಂಡಿದ್ದು ಅಂದು ಯಡಿಯೂರಪ್ಪ ಎಲ್ಲಿದ್ದರು? ಎಂದು ಹರಿಹಾಯ್ದ ಅವರು ಇವರ್ಯಾರಿ ನನ್ನ ಮುಖ್ಯಮಂತ್ರಿ ಮಾಡುವುದಕ್ಕೆ ಎಂದು ಪ್ರಶ್ನಿಸಿದರು.ಕೆಜೆಪಿ ಗಂಟು ಮೂಟೆ ಕಟ್ಟುವ ಸಮಯ ಬಂದಿದ್ದು,ಇವರ ಭವಿಷ್ಯ ಇನ್ನು ಐದೇ ದಿನದಲ್ಲಿ ಗೊತ್ತಾಗಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಗಳಿಸಲಿದೆ ಎಂಬ ಸಮೀಕ್ಷೆಗಳನ್ನು ಸತ್ಯಕ್ಕೆ ದೂರವಾಗಿದೆ.85ವರ್ಷದ ಜಾಫರ್ ಷರೀಫ್ ಕೂಡ ಮುಖ್ಯಮಂತ್ರಿ ಆಕಾಂಕ್ಷಿಯಾಗಿರುವ ಕಾಂಗ್ರೆಸ್ ನಲ್ಲಿ ಎಲ್ಲರೂ ಮುಖ್ಯಮಂತ್ರಿ ಕನಸು ಕಾಣುತ್ತಿದ್ದು ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸದೆ ತಮ್ಮಲ್ಲೇ ಸಂಘರ್ಷ ನಡೆಸುತ್ತಿರುವ ಇವರು ರಾಜ್ಯದಲಿ ಎಂತಹ ಆಡಳಿತ ನಡೆಸುತ್ತಾರೆಂದು ಟೀಕಿಸಿದರು.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುವುದು ನಿಶ್ವಿತ,ಈ ಹಿನ್ನೆಲೆಯಲ್ಲಿ ಕಿರಣ್ ಕುಮಾರ್ ಅವರನ್ನು ಗೆಲ್ಲಿಸಿ ವಿಧಾನ ಸಭೆ ಕಳುಹಿಸಿ,ಮತ್ತೆ ಜಗದೀಶ್ ಶೆಟ್ಟರ್ ಸಿಎಂ ಆಗುತ್ತಾರೆ,ಕಿರಣ್ ಅವರಿಗೆ ಸಚಿವ ಸ್ಥಾನ ಕಟ್ಟಿಟ್ಟ ಬುತ್ತಿಯಾಗಿದೆ ಎಂದರು.
ಸಭೆಯಲ್ಲಿ ಮಾಜಿ ಶಾಸಕ ಹಾಗೂ ಚಿ.ನಾ.ಹಳ್ಳಿ ಕ್ಷೇತ್ರದ ಅಭ್ಯರ್ಥಿ ಕೆ.ಎಸ್.ಕಿರಣ್ ಕುಮಾರ್,ಜಿ.ಪಂ.ಸದಸ್ಯ ಪಂಚಾಕ್ಷರಿ ಮಾತನಾಡಿದರು.ಮಹಿಳಾ ಮೋರ್ಚಾದ ಕವಿತಾ ಕಿರಣ್ ಕುಮಾರ್,ತಾ.ಪಂ.ಅಧ್ಯಕ್ಷ ಜಗದೀಶ್,ತಾಲ್ಲೂಕು ಬಿಜೆಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ,ತಾ.ಪಂ.ಸದಸ್ಯ ಕೆಂಕೆರೆ ನವೀನ್, ಮುಖಂಡರಾದ ಬುಕ್ಕಾಪಟ್ಟಣ ಬೊಮ್ಮಣ್ಣ,ರಮೇಶ್ ಬಾಬು ಸೇರಿದಂತೆ ಹಲವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ