ಚುನಾವಣೆಯಲ್ಲಿ ಮತದಾರರ ಮನವೊಲಿಸಲು ಕ್ಷೇತ್ರದ ಕೆಲ ಅಭ್ಯರ್ಥಿಗಳು ತಮ್ಮ ಜಾತಿಯವರೆಲ್ಲಾ ಒಂದಾಗ ಬೇಕೆಂದು,ತಾವು ಅಧಿಕಾರಕ್ಕೆ ಬಂದರೆ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಿ ಕೊಡಿಸುತ್ತೇವೆಂದು, ತಮ್ಮಲ್ಲಿ ಹಣವಿದೆ ಹಣ ಕೊಟ್ಟುರೆ ಓಟು ಹಾಕುತ್ತಾರೆಂದು ಹೇಳುತ್ತಾ ಸಾಗುತ್ತಿದ್ದಾರೆ.ಆದರೆ ತಾವು ಇಂತಹ ಯಾವುದೇ ಅಮಿಷಗಳನ್ನು ಜನರ ಮುಂದಿಡುತ್ತಿಲ್ಲ ಬದಲಿಗೆ ನಾನು ಶಾಸಕನಲ್ಲದಿದ್ದ ಸಮಯದಲ್ಲೂ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮತದಾರರು ಗಮನಿಸಿ ನನ್ನನ್ನು ಚುನಾಯಿಸಬೇಕೆಂದು ಚಿ.ನಾ.ಹಳ್ಳಿ ಕ್ಷೇತ್ರದ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಕೋರಿದರು.
ಹುಳಿಯಾರು ಸಮೀಪದ ಹಂದನಕೆರೆ ಹೋಬಳಿ ಚೌಳಕಟ್ಟೆಯಲ್ಲಿ ನಡೆದ ಬಿಜೆಪಿ ಸೇರ್ಪಡೆ ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಚಿ.ನಾ.ಹಳ್ಳಿ ಕ್ಷೇತ್ರದ ಹಾಲಿ ಶಾಸಕರು ಬೆಂಗಳೂರಲ್ಲೇ ಕುಳಿತು ಚಿ.ನಾ.ಹಳ್ಳಿ ಕ್ಷೇತ್ರದ ಅಧಿಕಾರ ನಡೆಸುತ್ತಾ, ಮೂರ್ನಾಲ್ಕು ತಿಂಗಳು ಕಳೆದರೂ ಕ್ಷೇತ್ರದ ಕಡೆ ಬಾರದಿರುವುದು ಸಾರ್ವಜನಿಕರಿಗೆ ತಿಳಿದಿರುವ ವಿಷಯವಾಗಿದೆ.ಅಂದೊಮ್ಮೆ,ಇಂದೊಮ್ಮೆ ತಾಲ್ಲೂಕಿಗೆ ಬಂದು ಯಾವುದೋ ಐಬಿಯಲ್ಲಿ ಕುಳಿತು ಸಭೆ ಸೇರಿ ಅಲ್ಲಿಗೆ ಬಂದ ಸಾರ್ವಜನಿಕರನ್ನು ಅಣ್ಣ,ಅಕ್ಕ ಎಂದು ಕರೆಯುತ್ತಾ,ಊಟ ಹಾಕಿಸುವುದು,ಮದುವೆ,ಮುಂಜಿ,ಜಾತ್ರೆಗಳಿಗೆ ಹಣ ಕೊಡುವುದನ್ನು ಬಿಟ್ಟರೆ, ಜನರು ಹೊತ್ತು ತಂದಿರುವ ಸಮಸ್ಯೆಗಳನ್ನು ಕೇಳುವುದಕ್ಕೂ ಅವರಿಗೆ ಸಮಯವಿಲ್ಲ.ಕ್ಷೇತ್ರದ ಸಮಸ್ಯೆಗಳನ್ನು ಆಲಿಸಲು ಸಮಯವಿಲ್ಲದ ಶಾಸಕರು ಮತ್ತೊಮ್ಮೆ ಅಧಿಕಾರ ವಹಿಸಿ ಕೊಂಡರೆ,ಈಗ ಬೆಂಗಳೂರಲ್ಲಿದ್ದು ನಡೆಸುತ್ತಿರುವ ಅಧಿಕಾರವನ್ನು ದೂರದ ವಿದೇಶಗಳಲ್ಲಿ ಕೂತು ಅಧಿಕಾರ ನಡೆಸುವ ಕಾಲ ಬರುತ್ತದೆ. ಈ ಬಗ್ಗೆ ಮತದಾರರು ಎಚ್ಚರವಹಿಸ ಬೇಕಿದೆ ಎಂದರು.
ಸದನ ಶೂರರೆಂದು ಕರೆಸಿ ಕೊಳ್ಳುವ ಮತ್ತೋರ್ವ ಮಾಜಿ ಶಾಸಕರು ಸದನದಲ್ಲಿ ರಾಜ್ಯದ ಬಗ್ಗೆ ಧ್ವನಿಯೆತ್ತಿರುವರೆ ಹೊರತು ಒಮ್ಮೆಯಾದರೂ ಚಿ.ನಾ.ಹಳ್ಳಿ ಕ್ಷೇತ್ರದ ಬಗ್ಗೆ ಮಾತನಾಡಿರುವ ನಿದರ್ಶನನಗಳಿಲ್ಲ, ನೈಸ್ ರಸ್ತೆ,ಇಸ್ಕಾನ್ ಟೆಂಪಲ್,ಕ್ಯಾಪಿಟಲ್ ಹೋಟೆಲ್ ನ ಬಗ್ಗೆ ಮಾತನಾಡುವ ಅವರು ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯ ಬಗ್ಗೆ ಏಕೆ ಮಾತಾಡಲಿಲ್ಲ, ತಾಲ್ಲೂಕಿಗೆ ಸಂಬಂಧವಿಲ್ಲದವುಗಳ ಬಗ್ಗೆ ಚರ್ಚಿಸುತ್ತಾ ಕ್ಷೇತ್ರದ ಸಮಸ್ಯೆಗಳನ್ನು ಮರೆತು ತಮಗೆ ಯಾವುದರಿಂದ ಆದಾಯ ಬರುತ್ತದೆ ಎಂಬುದನ್ನು ಎದುರು ನೋಡುವ ಜನಪ್ರತಿನಿಧಿಗಳು ಬೇಕೆ,ಬೇಡವೆ ಎಂದು ಮತದಾರರೇ ಯೋಚಿಸಿ ಚುನಾವಣೆಯಲ್ಲಿ ಬುದ್ದಿವಂತಿಕೆಯಿಂದ ಮತ ಚಲಾಯಿಸಬೇಕಿದೆ ಎಂದರು.
ಕಳೆದ ಚುನಾವಣೆಯಲ್ಲಿ ಕ್ಷೇತ್ರಕ್ಕೆ ತಾವು ಹೊಸಬರಾಗಿದ್ದೆವು. ಆದರೆ ಈಗ ಕ್ಷೇತ್ರದೆಲ್ಲೆಡೆ ಪ್ರವಾಸ ಮಾಡಿ ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ತಿಳಿದಿದ್ದೇನೆ. ತಾಲ್ಲೂಕಿಗೆ ಹೇಮಾವತಿ ನದಿ ನೀರನ್ನು ಹರಿಸಲು ಸಾಧ್ಯವಿಲ್ಲ, ಚೆಂಬಲ್ಲೇನಾದರೂ ತರಬೇಕಷ್ಟೆ ಎಂದು ಹೇಳಿದವರ ಬಾಯಿ ಮುಚ್ಚಿಸಲು,ಅಂದೆ ನಿರ್ಧರಿಸಿ ತನಗೆ ಅಧಿಕಾರವಿಲ್ಲದಿದ್ದರೂ ಚಿ.ನಾ.ಹಳ್ಳಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವ ಕಾರ್ಯಕ್ಕೆ 102 ಕೋಟಿ ರೂ ಹಣ ಬಿಡುಗಡೆ ಮಾಡಿಸಿದ್ದೂ ಅಲ್ಲದೆ ಶಂಕುಸ್ಥಾಪನೆಯನ್ನು ಕೂಡ ನೆರವೇರಿಸಿರುವೆ ಇದರಿಂದ ತಾಲ್ಲೂಕಿನ 26ಕೆರೆಗಳಿಗೆ ನೀರು ಹರಿಯುವುದಾಗಿ ತಿಳಿಸಿದರು.ಅಲ್ಲದೆ ಮುಂದೆ ಹಂದನಕೆರೆ ಭಾಗಕ್ಕೂ ನೀರು ಹರಿಸುವ ಯೋಜನೆಯನ್ನು ಕೈಗೊಂಡಿದ್ದು ಅದನ್ನು ನೆರವೇರಿಸುವುದಾಗಿ ತಿಳಿಸಿದರು.
ಕಿರಣ್ ಕುಮಾರ್ ಐದು ಕೋಟಿಗೆ ಡೀಲ್ ಆಗಿ ಗುಬ್ಬಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆಂದು ಅಪಪ್ರಚಾರ ಮಾಡುತ್ತಿರುವವ ಬಾಯಿಗೆ ಬೀಗ ಹಾಕಲು ತಾವು ನಾಮಪತ್ರ ಸಲ್ಲಿಕೆ ಯ ಮೊದಲ ದಿನವಾದ ಬುಧವಾರವೇ ನಾಮಪತ್ರ ಸಲ್ಲಿಸಲಿದ್ದು, ಚಿ.ನಾ.ಹಳ್ಳಿಯಲ್ಲಿಯೇ ತನ್ನ ಸ್ಪರ್ಧೆ,ಬಿಜೆಪಿಗೆ ಜಯ ಎಂದು ದೃಢಕಾಯದಿಂದ ನುಡಿದರು.
ಸಭೆಯಲ್ಲಿ ತಾ.ಪಂ.ಅಧ್ಯಕ್ಷ ಜಗದೀಶ್,ಜಿ.ಪಂ.ಸದಸ್ಯ ಶೆಟ್ಟಿಕೆರೆ ಪಂಚಾಕ್ಷರಿ,ತಾಲ್ಲೂಕು ಬಿಜೆಪಿ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಜನಜಾಗೃತಿ ವೇದಿಕೆಯ ಅಧ್ಯಕ್ಷೆ ಕವಿತಾಕಿರಣ್ , ಮುಖಂಡರಾದ ರಾಮಣ್ಣ,ಬಸವರಾಜು,ಜಯಣ್ಣ ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ