ಇಂದು ಬೀchiಯವರ ಜನ್ಮ ಶತಮಾನೋತ್ಸವ.( ಏಪ್ರಿಲ್ 23.1913-ಏಪ್ರಿಲ್ 23.2013) .ಬೀchiಯವರು ನಮ್ಮಿಂದ ಕಣ್ಮರೆಯಾಗಿದ್ದರೂ , ತಮ್ಮ ಹಾಸ್ಯ ಸಾಹಿತ್ಯದ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಬೀchi ಹಾಸ್ಯ ಸಾಹಿತ್ಯದಲ್ಲಿ ಚಿರಸ್ಥಾಯಿ ಹೆಸರು. ಬೀಚಿ ಬರಹಗಳಲ್ಲಿನ ನಾಯಕ ತಿಂಮ. ತಿಂಮ ಎಂದರೆ ಬೀchi. ಬೀchi ಎಂದರೆ ತಿಂಮ. ತಿಂಮನ ಪ್ರಸಂಗಗಳಲ್ಲಿ ಇಂದಿಗೂ ತಾಜಾತನವಿದೆ, ಇಂದಿನ ಪರಿಸ್ಥಿತಿಗೂ ಹೋಲಿಕೆ ಮಾಡಿಕೊಳ್ಳಬಹುದು. ತಿಂಮನವ್ಯಂಗ್ಯೋಕ್ತಿಗಳನ್ನು ಓದಿ ನಗದಿರುವವರು ಇಲ್ಲವೇ ಇಲ್ಲ.ನಗಲಿಲ್ಲವೆಂದರೆ ಅವರು ಬೀಚಿಯವರೇ ಹೇಳುವಂತೆ – ನಗೆ-ಶತ್ರು. ಬೀಚಿ ಅರವತ್ಮೂರು ಕೃತಿಗಳನ್ನು ರಚಿಸಿದ್ದು ಅತ್ಯಂತ ಗಂಭೀರವಾದ ಸಮಸ್ಯೆಯನ್ನು ಚೋದ್ಯದ ಮೂಲಕ ಹೇಳುವ ಜಾಣ್ಮೆ ಇವರಲ್ಲಿತ್ತು.ಹಾಸ್ಯದಲ್ಲಿ ನವಿರಾದ ಕಟು ಸತ್ಯಕ್ಕೆ ವಿಡಂಬನೆಯ ರೂಪ ಕೊಟ್ಟು, ಸಮಾಜದ ಓರೆ ಕೋರೆಗಳನ್ನು ಜನರಿಗೂ ತಿಳಿಯುವಂತೆ ಮಾಡಿದ ಅಗ್ರೇಸರ ಬೀಚಿ. ಅವರ ಶೈಲಿಯಲ್ಲಿದ್ದ ಮೊನಚು ಮತ್ಯಾರ ಸಾಹಿತ್ಯದಲ್ಲೂ ಸಿಗಲು ಸಾಧ್ಯವಿಲ್ಲ ಎಂದ ಅವರು, ಆ ಕಾಲ -ಈ ಕಾಲ ಎನ್ನದೆ ಎಲ್ಲಾ ಕಾಲಕ್ಕೂ ಸಲ್ಲುವ ಇವರಿಗೆ ಅವರದ್ದೆ ಆದ ಓದುಗ ವರ್ಗವಿದೆ. ಸೃಷ್ಟಿಸಿದರು. ತಲೆಮಾರು ಕಳದರೂ ಅವರ ಜೋಕು, ಕಥೆನಿತ್ಯ ನೂತನ,ನಿತ್ಯ ಚಿರಂತನ. ಇಂದು ಎಂದು ಅವರ ಸ್ಥಾನವನ್ನು ತುಂಬುವ ಮತ್ತೊಬ್ಬರು ಕಾಣಸಿಗುವುದಿಲ್ಲ ಎಂದರೆ ಅತಿಶಯೋಕ್ತಿ ಇಲ್ಲ.
ಬೀಚಿ ಯವರ ಬಗ್ಗೆ ಬರೆಯುವುದಕ್ಕಿಂತ ಅವರ ಲೇಖನಗಳನ್ನು ಉಲ್ಲೇಖಿಸುವುದು ಹೆಚ್ಚು ಸೂಕ್ತ.ಕೆಲವು ಪ್ರಸಂಗಗಳು ಅವರಿವರು ಬ್ಲಾಗ್ ನಲ್ಲಿ ಹಾಕಿರುವುದನ್ನು ಸಂಗ್ರಹಿಸಿ ಪುನಃ ನಿಮಗಾಗಿ ಹಾಕಲಾಗಿದೆ.
--------------------------------------------------------
ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು
ಚೆನ್ನೆಂದು ದೊಡ್ಡವರ ಅನುಕರಿಸ ಬೇಡ
ಏನಾಯ್ತು ಮರಿಕತ್ತೆ? ಚೆಲುವಿತ್ತು, ಮುದ್ದಿತ್ತು
ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ. (- ಅಂದನಾ ತಿಂಮ)
----------------------------------------------------------
ಒಳ್ಳೆಯವರು ಎನ್ನಿಸಿಕೊಂಡವರು
ಇನ್ನೂ ಒಳ್ಳೆಯವರಾಗೇ ಇದ್ದಾರೆ ಅಂದರೆ
ಅವರಿಗೆ ಭ್ರಷ್ಟರಾಗುವ
ಅವಕಾಶ ಸಿಕ್ಕಿಲ್ಲ ಎಂಬುದೇ ಕಾರಣ.
– ಬೀಚಿ
-----------------------------------------
ಕತ್ತೆ ಜನ್ಮ
ಬೀಚಿಯವರ ಆತ್ಮಕಥನ ‘ನನ್ನ ಭಯಾಗ್ರಫಿ’ಯಲ್ಲಿನ ರಸಪ್ರಸಂಗ:
ವರ್ಷಕ್ಕೊಮ್ಮೆ ಬರುವ ಶಿವರಾತ್ರಿ ದಿನದಂದು ಮಾತ್ರ ಮಾಧ್ವರು ಕೂಡಾ ಸ್ಮಾರ್ತ ಬ್ರಾಹ್ಮಣರು ಪೂಜೆ ಮಾಡುವ ಈಶ್ವರನ ಗುಡಿಗೆ ಹೋಗುತ್ತಿದ್ದರು. ನಮ್ಮೂರಲ್ಲಿ ಗೋಕರ್ಣೇಶ್ವರ ಗುಡಿ ಎಂದು ಒಂದಿದೆ. ಎಲ್ಲ ಮಾಧ್ವರೊಟ್ಟಿಗೆ ನಾನೂ ಒಂದು ಬಾರಿ ಹೋಗಿದ್ದೆ. ಕೊಬ್ಬರಿ ತಿಂದು ಬಂದಿದ್ದೆ.
“ಎಂದೂ ಹೋಗದೆ ಶಿವರಾತ್ರಿಯ ದಿನ ಮಾತ್ರ ಈಶ್ವರನ ಗುಡಿಗೆ ಏಕೆ ಹೋಗಬೇಕು?” ಎಂದು ನನ್ನ ಸೋದರತ್ತೆಯ ಗಂಡನನ್ನು ಕೇಳಿದ್ದೆ.
“ವರ್ಷಕ್ಕೊಮ್ಮೆ ಆತನ ದರ್ಶನಾನೂ ಮಾಡಿಕೋಬೇಕಪ್ಪಾ. ಇಲ್ಲದಿದ್ರೆ ಮುಂದೆ ಕತ್ತೆ ಜನ್ಮ ಬರ್ತದೆ.”
ನಮ್ಮ ಮಾವ ಹೇಳಿದ ಸಮ್ಜಾಯಿಸಿ ಇದು. ಅಂದಿನಿಂದ ಬೀದಿಯಲ್ಲಿ ಒಂದು ಕತ್ತೆಯನ್ನು ನೋಡಿದಾಗಲೆಲ್ಲ ಪಾಪ! ಇದು ಹಿಂದಿನ ಜನ್ಮದಲ್ಲಿ ಮಾಧ್ವ ಬ್ರಾಹ್ಮಣ ಆಗಿತ್ತು ಎಂದಂದುಕೊಳ್ಳುತ್ತಿದ್ದೆ. ಯಾರೋ ಆಚಾರ್ಯರ ಮುಂದು ಈ ಮಾತನ್ನಂದು ಬೈಗುಳನ್ನೂ ತಿಂದಿದ್ದೆ
-----------------------------------------------------------------
ಕಣ್ಣೀರು ಸುರಿಯುವುದೊಂದೇ ಹೆಣ್ಣಿನ
ಕೆಲಸವಾಗಿದ್ದರೆ ಎಲ್ಲ ಹೆಣ್ಣುಗಳೂ ಅದನ್ನೇ
ಸಮರ್ಥವಾಗಿ ಮಾಡಿ, ಲೋಕದ ಎಲ್ಲ ಗಂಡುಗಳನ್ನೂ
ಕಂಬನಿ ಮಹಾಸಾಗರದಲ್ಲಿ ಎಂದೋ ಮುಳುಗಿಸಿ ಬಿಡುತ್ತಿದ್ದವು. - ಬೀch
--------------------------------------------------------------
ಹೊಟ್ಟೆಯ ಹಸಿವು ಬಾಳಿನ
ಯಾವ ದುಃಖಕ್ಕೂ
ಸೊಪ್ಪು ಹಾಕುವುದಿಲ್ಲ.
- ಬೀಚಿ
------------------------------------------------------------
ಒಮ್ಮೆ ಇಬ್ಬರು ವ್ಯಕ್ತಿಗಳು ಕುರಿಯೊಂದನ್ನು ಕಸಾಯಿ ಖಾನೆಗೆ ಎಳೆದುಕೊಂಡು ಹೋಗುತ್ತಿದ್ದರು. ಅದನ್ನು ನೋಡಿದ ಪುಟ್ಟ ಬಾಲಕ ಅಪ್ಪನನ್ನು ಕೇಳಿದ-ಕುರಿಯನ್ನು ಎಲ್ಲಿಗೆ ಎಳೆದೊಯ್ಯುತ್ತಿದ್ದಾರೆ?
ಅಪ್ಪ: ಕಸಾಯಿ ಖಾನೆಗೆ.
ಮಗ: ಸಧ್ಯಾ
ಅಪ್ಪ: ಏಕೆ ಹಾಗೆ ನಿಟ್ಟುಸಿರು ಬಿಡುತ್ತಿದ್ದೀಯಾ?
ಮಗ: ನನ್ನಂತೆಯೇ ಆ ಕುರಿಯನ್ನೂ ಶಾಲೆಗೆ ಎಳೆದುಕೊಂಡು ಹೋಗುತ್ತಿದ್ದಾರೆ ಎಂದು ನಾನಂದುಕೊಂಡಿದ್ದೆ!
ಆಗ ದೇಶಾದ್ಯಂತ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ಬಂದಿತ್ತು. ಹಠ ಹಿಡಿದ ಮಕ್ಕಳನ್ನು ಹೊಡೆದು, ಬಡಿದಾದರೂ ಶಾಲೆಗೆ ಎಳೆದುಕೊಂಡು ಹೋಗುತ್ತಿದ್ದರು. ಅಂದರೆ ಕಡ್ಡಾಯ ಶಿಕ್ಷಣ ಜಾರಿಯ ಉದ್ದೇಶವೇನೋ ಒಳ್ಳೆಯದಿತ್ತು. ಮಾರ್ಗ ಸರಿಯಿರ ಲಿಲ್ಲ ಎಂಬುದನ್ನು ತಿಳಿಹಾಸ್ಯದೊಂದಿಗೆ ಹೇಳುವ ಜಾಣ್ಮೆ ಬೀಚಿ ಯವರಲ್ಲಿ ಮಾತ್ರ ಇತ್ತು. ಅವರ “ಬೆಳ್ಳಿ ತಿಂಮ ೧೦೮ ಹೇಳಿದ”, “ತಿಮ್ಮನ ತಲೆ”, “ಅಂದನಾ ತಿಮ್ಮ”- ಈ ಮೂರು ಪುಸ್ತಕಗಳೂ ನಿಮ್ಮನ್ನು ನಕ್ಕು ನಗಿಸಿದರೂ ಒಂದಕ್ಕಿಂತ ಒಂದು ಭಿನ್ನ.
----------------------------------------------------------------------------------------------------------------------------------
ಕಡೇ ಪರೀಕ್ಷೆ
ತಿಂಮನ ಅಜ್ಜ ತಮ್ಮ ಕೋಣೆಯಿಂದ ಹೊರಕ್ಕೇ ಬರುತ್ತಿರಲಿಲ್ಲ. ಅವರಾಯಿತು, ಅವರ ಗ್ರಂಥಾವಲೋಕನವಾಯಿತು. ತಿಂಮನ ತಮ್ಮನಿಗೆ ಆಶ್ಚರ್ಯವಾಯಿತು. ಅಣ್ಣನನ್ನು ಕೇಳಿದ-“ಅದೇನು ಅಜ್ಜ ಅಷ್ಟು ಓದುತ್ತಿದ್ದಾರೆ? ಅವರಿಗೂ ಪರೀಕ್ಷೆ ಇದೆಯೇ?”.
ತಿಂಮ ತಮ್ಮನಿಗೆ ಸಮಾಧಾನ ಹೇಳಿದ.
“ಹೌದು, ಭಗವದ್ಗೀತೆ ಬಾಯಿಪಾಠ ಮಾಡುತ್ತಿದ್ದಾರೆ-ಕಡೇ ಪರೀಕ್ಷೆ ಬಂತಲ್ಲಾ ಅವರಿಗೆ?!”
----------------------------------------------------------------------------------------------------------------------------------
ಮಾತು ಕೇಳುವ ಹೆಂಡತಿ
“ತಿಂಮಾ?”
“ಏನು ಸ್ವಾಮಿ?”
“ನನ್ನ ಹೆಂಡತಿ ನನ್ನ ಮಾತನ್ನು ಕೇಳುವುದೇ ಇಲ್ಲ, ನಿನ್ನ ಹೆಂಡತಿ?”
“ಚೆನ್ನಾಗಿ ಕೇಳಿದಿರಿ. ಯಾರು, ನನ್ನ ಹೆಂಡತಿಯೇ?”
“ಹೌದು, ಕೇಳುತ್ತಾಳೇನಯ್ಯಾ ನಿನ್ನ ಮಾತು?”
“ಏನು ಸ್ವಾಮಿ, ಹಾಗನ್ನುತ್ತೀರಿ? ಬೇರೆ ಸ್ತ್ರೀಯರೊಟ್ಟಿಗೆ ನಾನು ಮಾತನಾಡುತ್ತಿರುವಾಗ ಎಷ್ಟು ಚೆನ್ನಾಗಿ ಕಿವಿಕೊಟ್ಟು ಕೇಳುತ್ತಾಳೆ ಗೊತ್ತೆ?!”
-----------------------------------------------------------------------------------------------------------------------------------
ಅಶ್ಲೀಲ ಸಾಹಿತ್ಯ
“ಅಪ್ಪಾ”
“ಏನೋ ತಿಂಮಾ?”
“ಅಶ್ಲೀಲ ಸಾಹಿತ್ಯವೆಂದರೆ ಯಾವುದಪ್ಪಾ?”
“ಚಿಕ್ಕವರು ಓದಬಾರದ್ದು ಅಶ್ಲೀಲ ಸಾಹಿತ್ಯ”
“ಹೀಗೆಂದು ದೊಡ್ಡವರು ಹೇಳ್ತಾರಲ್ವೇನಪ್ಪಾ?”
“ಹೌದೋ ತಿಂಮಾ”
“ಚಿಕ್ಕವರಿದ್ದಾಗ ಓದಿ, ದೊಡ್ಡವರಾದ ಮೇಲೆ ಚಿಕ್ಕವರು ಓದಕೂಡದು ಎಂಬುದಕ್ಕೇ ಅಶ್ಲೀಲಸಾಹಿತ್ಯವೆನ್ನುತ್ತಾರೇನಪ್ಪಾ?”
---------------------------------------------------------------------------------------------------------------------------------
ಜನಿವಾರ
ಅಪ್ಪ: ತಿಂಮಾ ಜನಿವಾರ ಹಾಕಿಕೋ.
ತಿಂಮಾ: ಯಾಕಪ್ಪಾ?
ಅಪ್ಪ: ಜನಿವಾರ ಹಾಕಿಕೊಳ್ಳದಿದ್ದರೆ ಮುಂದಿನ ಜನ್ಮದಲ್ಲಿ ನೀನು ಕತ್ತೆಯಾಗಿ ಹುಟ್ಟುತ್ತೀಯಾ.
ತಿಂಮಾ: ಅಪ್ಪಾ ಊರಲ್ಲಿ ಬಹಳ ಕತ್ತೆಗಳಿವೆ. ಅವರೆಲ್ಲ ಹಿಂದಿನ ಜನ್ಮದಲ್ಲಿ ಬ್ರಾಹ್ಮಣರಾಗಿದ್ದು ಜನಿವಾರ ಹಾಕಿಕೊಳ್ಳುವುದನ್ನು ಮರೆತಿದ್ದವರಾ?
--------------------------------------------------------------------------------------------------------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ