ಅಭ್ಯರ್ಥಿಗಳ ಸಾಧನೆ ಬಗ್ಗೆ ಪ್ರಶ್ನಿಸಿ: ಕ್ಷೇತ್ರದ ಬೇಡಿಕೆಗಳನಿಟ್ಟು, ಈಡೇರಿಸುವಂತೆ ಒತ್ತಾಯಿಸಿ:
----------------------------------------------------------------------------
ಹೀಗೊಬ್ಬ ಮತದಾರರಿಗೆ ಅರಿವು ಮೂಡಿಸುವ ಅಜ್ಜ
---------------------------------------------
ಭ್ರಷ್ಟಾಚಾರ,ಲಂಚಗುಳಿತನವೇ ತಾಂಡವವಾಡುತ್ತಿರುವ ಸಮಾಜದಲ್ಲಿ ವಿದ್ಯಾವಂತ ಮತದಾರರು ಸರ್ಕಾರ,ಶಾಸಕರು ಸರಿಯಿಲ್ಲವೆಂದು ಟೀಕಿಸುತ್ತಾ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯುವ ಬದಲು ಕಡ್ಡಾಯ ಮತದಾನದ ಮೂಲಕ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬೇಕು.ಗ್ರಾಮೀಣ ಮತದಾರರು ಹಣ,ಹೆಂಡಕ್ಕೆ ಮಾರು ಹೋಗುವ ಬದಲು ಜಾಗೃತರಾಗಿ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯನ್ನು ಚುನಾಯಿಸಬೇಕು ಎಂಬ ಆಶೊತ್ತರ ಹೊಂದಿ ಕಡ್ಡಾಯ ಮತದಾನ ಮತ್ತು ಮತದಾರರ ಹಕ್ಕುಗಳ ಬಗ್ಗೆ ಸಾರ್ವಜನಿಕರನ್ನು ಜಾಗೃತಗೊಳಿಸಿ, ,ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಪಣತೊಟ್ಟು,ಪ್ರತಿ ಚುನಾವಣೆಗಳಲ್ಲಿ ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನೊಳಗೊಂಡ ಭಿತ್ತಿ ಪತ್ರಗಳನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಮತದಾನದ ಮಹತ್ವವನ್ನು ಸಾರುತ್ತಾ ಸಮಾಜಕ್ಕೆ ತಮ್ಮದೇ ಆದ ಸೇವೆ ಮಾಡುತ್ತಿದ್ದಾರೆ ಹುಳಿಯಾರಿನ ಗಾಂಧಿಪೇಟೆಯಲ್ಲಿರುವ ಶ್ರೀನಿವಾಸ್ ಪವರ್ ಪ್ರಸ್ ನ ಸಮಾಜ ಚಿಂತಕ,ಹಿರಿಯಜ್ಜ ಬಿ.ಎ.ಕೇಶವಮೂರ್ತಿ.
ಚುನಾವಣೆ ಸಂಧರ್ಭದಲ್ಲಿ ಮನೆ ಬಾಗಿಲ ಬಳಿ ಬಂದು ಮತಯಾಚಿಸುವಾಗ ಹತ್ತಾರು ಭರವಸೆಗಳ ಮೂಟೆಯನ್ನು ಮತದಾರರ ಮುಂದಿಟ್ಟು ಗೆದ್ದ ನಂತರ ನೀಡಿದ್ದ ಭರವಸೆಗಳಿಗೂ ತಮಗೂ ಸಂಬಂಧವಿಲ್ಲ ಎಂಬಂತೆ ಅಧಿಕಾರ ನಡೆಸುವ ಜನಪ್ರತಿನಿಧಿಗಳ ಆಯ್ಕೆಯಲ್ಲಿ ಜನರು ಎಚ್ಚೆತ್ತು ಕೊಳ್ಳಬೇಕಾಗಿದೆ ಎನ್ನುವ ಅವರು ದೇಶದಲ್ಲಿ ಉತ್ತಮ ಆಡಳಿತ ವ್ಯವಸ್ಥೆ ರಚನೆಯಾಗಬೇಕಾದರೆ ಅದು ಮತದಾರರಿಂದ ಮಾತ್ರ ಸಾಧ್ಯವಿದ್ದು,ಅವರುಗಳು ಯೋಗ್ಯ ಹಾಗೂ ಪ್ರಜ್ಞಾವಂತ ಜನಪ್ರತಿನಿಧಿಗಳನ್ನು ಚುನಾಯಿಸಿದಾಗ ಮಾತ್ರ ಇದು ಸಾಧ್ಯ ಎನ್ನುತ್ತಾರೆ.
ತಾವು ಹಲವವಾರು ಚುನಾವಣೆಗಳನ್ನು ಕಂಡಿದ್ದು,ಈ ಹಿಂದೆ ನಡೆಯುತ್ತಿದ್ದ ಚುನಾವಣೆಗಳಿಗೂ ಈಗಿನ ಚುನಾವಣೆಗಳಿಗೂ ಅಜಗಜಾಂತರ ವ್ಯತ್ಯಾಸಗಳಾಗಿದ್ದು,ಚುನಾವಣೆಗಳಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು. ಅದರೆ ಇಂದು ಜನ ತಮಗೆ ಯಾವ ಪಕ್ಷದಿಂದ ಅಧಿಕಾರ, ಹಣ,ಮದ್ಯ ಸಿಗುತ್ತದೆ ಆ ಪಕ್ಷಗಳ ಬಗ್ಗೆ ಒಲವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಷಾದಿಸಿದರು.
ಮತದಾರರಿಗಾಗಿ ಸಿದ್ದಗೊಳಿಸಿರುವ "ಮತದಾರರೇ ಎಚ್ಚರ" ಎಂಬ ಬಿತ್ತಿಪತ್ರದಲ್ಲಿ ಕ್ಷೇತ್ರದ ಅದರಲ್ಲೂ ಪ್ರಮುಖವಾಗಿ ಹುಳಿಯಾರಿನ ಜ್ವಲಂತ ಸಮಸ್ಯೆಗಳಾನ್ನೊಳಗೊಂಡ ಇಪ್ಪತ್ತೊಂದು ಬೇಡಿಕೆಗಳನಿಟ್ಟಿರುವ ಅವರು ಅವುಗಳನ್ನು ಮತಯಾಚಿಸಲು ಬರುವ ಅಭ್ಯ್ರರ್ಥಿಗಳ ಮುಂದಿಟ್ಟು ಈಡೇರಿಸುವಂತೆ ಒತ್ತಾಯಿಸುವ ಕಾರ್ಯಕ್ಕೆ ಎಲ್ಲಾ ಮತದಾರರು ಮುಂದಾಗುವಂತೆ ಕರೆ ನೀಡಿದ್ದಾರೆ.ಅಲ್ಲದೆ ತಾವು ನೀಡುವ ಕರಪತ್ರವನ್ನು ಓದಿ ತಿಳಿದ ವಿದ್ಯಾವಂತರು ಅನಕ್ಷರಸ್ಥರಿಗೂ ಚುನಾವಣೆಯ ಮಹತ್ವದ ಬಗ್ಗೆ ತಿಳಿಹೇಳ ಬೇಕು ಎಂದು ಬಯಸುತ್ತಾರೆ.ಒಟ್ಟಾರೆ ಶುದ್ದ ಹಾಗೂ ಪ್ರಬುದ್ದ ರಾಜಕಾರಣಿಯನ್ನು ಆಯ್ಕೆ ಮಾಡುವತ್ತ ಎಲ್ಲರೂ ಎಚ್ಚರವಹಿಸಬೇಕೆನ್ನುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ