ಹುಳಿಯಾರಿನ ಮದಿನಾ ಶಾದಿಮಹಲ್ ಗೆ ಭೇಟಿನೀಡಿದ ಸಂಧರ್ಭದಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಮುಸ್ಲಿಂ ಬಾಂಧವರನ್ನು ಕುರಿತು ಮಾತನಾಡಿದರು.
|
ಬದಲಾದ ರಾಜಕೀಯ ಸನ್ನಿವೇಷದಲ್ಲಿ ಇಂದು ಹಲವು ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರುಗಳು ಸೀಮಿತ ಜಾತಿಯನ್ನು ಒಲೈಸಿಕೊಂಡು ಸಾಗುತ್ತಿರುವುದು ದುರಂತದ ವಿಷಯ.ಆದರೆ ಜಾತ್ಯಾತೀತ ಜನತಾ ದಳ ಮಾತ್ರ ಹೆಸರಿಗೆ ತಕ್ಕಂತೆ ಯಾವುದೊಂದು ಜಾತಿ,ಮತಕ್ಕೆ ಸೀಮಿತವಾಗದೆ ಹಿಂದುಳಿದ,ಅಲ್ಪಸಂಖ್ಯಾತ,ದಲಿತರ,ಹಿಂದೂ,ಮುಸ್ಲಿಂ ಎಲ್ಲರನ್ನು ಒಗ್ಗೂಡಿಸಿಕೊಂಡು ಸಾಗುತ್ತಿರುವ ಏಕೈಕ ಪಕ್ಷವಾಗಿರುವುದು ಹೆಗ್ಗಳಿಕೆಯ ವಿಚಾರ ಎಂದು ಜಮೀರ್ ಅಹಮದ್ ಖಾನ್ ತಿಳಿಸಿದರು.
ಹುಳಿಯಾರಿಗೆ ಸೋಮವಾರ ಭೇಟಿ ನೀಡಿದ ಅವರು ಮದೀನಾ ಶಾದಿ ಮಹಲ್ ನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮತದಾರರ ಮನವೊಲಿಸಲು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯ ಮಾಡಿದ್ದೇವೆಂದು ಸುಳ್ಳೆ ಬೀಗುತ್ತಿರುವ ಬಿಜೆಪಿ ನಾಯಕರುಗಳ ಭ್ರಷ್ಟತನ ರಾಜ್ಯದ ಜನತೆಗೆ ತಿಳಿದಿದ್ದು,ಪ್ರಸ್ತುತ ಚುನಾವಣೆಯಲ್ಲಿ ಮತದಾರರೇ ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದರು. ಟಿಪ್ಪು ಕರ್ನಾಟಕ್ಕೆ ಮಾತ್ರ ಸೀಮಿತವಾದ ವ್ಯಕ್ತಿಯಲ್ಲ,ಇಡಿ ದೇಶದಲ್ಲಿ ಪ್ರಖ್ಯಾತನಾಗಿದ್ದು ಟಿಪ್ಪುವಿನ ಹೆಸರು ವಿಶ್ವವಿದ್ಯಾನಿಲಯಕ್ಕೆ ನಾಮಕರಣ ಮಾಡುವುದಕ್ಕೆ ಕೆಲ ರಾಜಕೀಯ ಪಕ್ಷದವರು ತಡೆಯೊಡ್ಡುತ್ತಿರುವುದು ಅಲ್ಪಸಂಖ್ಯಾತರ ಮೇಲೆ ಅವರ ನಿಲುವನ್ನು ಎತ್ತಿ ತೋರಿಸುತ್ತದೆ ಎಂದರು.ಜಾತಿ ರಾಜಕೀಯ ಗೊತ್ತಿಲ್ಲದ ಶಾಸಕ ಸುರೇಶ್ ಬಾಬು ಮುಸ್ಲಿಂರನ್ನು ಅಣ್ಣ ತಮ್ಮಂದಿರಂತೆ ಗೌರವಯುತವಾಗಿ ಕಾಣುತ್ತಿದ್ದು,ಅವರಿಗೆ ತಮ್ಮ ಮತ ಹಾಕಿ ಈ ಬಾರಿ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸಿದರೆ ತಾವೆಲ್ಲ ನನನ್ನು ಗೆಲ್ಲಿಸಿದಂತೆ ಎಂದರು.
ಹುಳಿಯಾರಿಗೆ ಆಗಮಿಸಿದ ಮಾಜಿ ಸಚಿವ ಜಮೀರ್ ಅಹಮದ್ ಹಾಗೂ ಶಾಸಕ ಸಿ.ಬಿ.ಸುರೇಶ್ ಬಾಬು ಅವರನ್ನು ಜೆಡಿಎಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. |
ಶಾಸಕ ಸುರೇಶ್ ಬಾಬು ಮಾತನಾಡಿ ಚುನಾವಣೆಯ ಸಂಧರ್ಭದಲ್ಲಿನ ಚುನಾವಣಾ ಗಿಮಿಕ್ ಗಳಿಗೆ ಮತದಾರರು ಕಿವಿಗೊಡದೆ,ಯಾರಿಂದ ತಮ್ಮ ಪ್ರದೇಶಗಳ ಅಭಿವೃದ್ದಿ ಕಾರ್ಯಗಳಾಗಿವೆ ಎಂಬುದನ್ನು ತಿಳಿದು ಮತ ಚಲಾಯಿಸಿ ಎಂದರಲ್ಲದೆ ತಾವು ಕ್ಷೇತ್ರಕ್ಕಾಗಿ ಸಾಕಷ್ಟು ಶ್ರಮಿಸಿದ್ದು,ಮುಂದೆಯೂ ಸಹ ಇದೇ ರೀತಿ ನಡೆದುಕೊಳ್ಳುವ ಭರವಸೆ ನೀಡಿದರು.ಯಾರೋಬ್ಬರೂ ಸಹ ನೆಪ ಮಾತ್ರಕ್ಕೆ ಮತ ಹಾಕದೇ ಒಂದೊಂದು ಓಟಿನ ಮಹತ್ವ ಅರಿತು ಮತ ಚಲಾಯಿಸಿ ತಮ್ಮನ್ನು ಜಯಶಾಲಿಯನ್ನಾಗಿ ಮಾಡುವಂತೆ ಕೋರಿದರು. ದೇವೇಗೌಡ ಅವರು ಪ್ರಧಾನಿಯಾದ ಸಂದರ್ಭದಲ್ಲಿ ಮುಸ್ಲಿಂ ರ ಅನೇಕ ಸಮಸ್ಯೆಗಳನ್ನು ಬಗೆಹರಿಸಿರುವುದು ಎಲ್ಲರಿಗೂ ತಿಳಿದಿದ್ದು,ಎಲ್ಲರೂ ಸಂಘಟಿತರಾಗಿ ಜೆಡಿಎಸ್ ಗೆ ತಮ್ಮ ಮತ ನೀಡುವಂತೆ ನಿವೇದಿಸಿದರು.
ಈ ಸಂದರ್ಭದಲ್ಲಿ ಮುತುವಲ್ಲಿ ಬಬೀವುಲ್ಲಾ,ಜೆಡಿಎಸ್ ರಾಜ್ಯ ಅಲ್ಪ ಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಶಕೀಲ್ ನವಾಬ್ ಸಾಬ್,ಜಲಾಲ್ ಸಾಬ್,ಹಂನಕೆರೆ ರಘುನಾಥ್,ಜಿ.ಪಂ.ಸದಸ್ಯೆ ಮಂಜುಳಾ, ತಾ.ಪಂ.ಮಾಜಿ ಉಪಾಧ್ಯಕ್ಷೆ ಬೀಬಿ ಫಾತೀಮಾ,ಗ್ರಾ.ಪಂ.ಮಾಜಿ ಅಧ್ಯಕ್ಷ ಅನ್ಸರ್ ಅಲಿ,ಚಿ.ನಾ.ಹಳ್ಳಿ ಪುರಸಭೆಯ ರಂಗಸ್ವಾಮಿ,ಕೌನ್ಸಿಲರ್ ಖಲಂದರ್ ಸಾಬ್,ಯುವ ಮುಖಂಡ ಇಮ್ರಾಜ್ ಸೇರಿದಂತೆ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ