ಯಾವುದೇ ಪ್ರತಿಫಲ ಅಪೇಕ್ಷಿಸದ ಪರಿಸರ ಮಾನವರಿಗೆ ಅವಶ್ಯಕವಾದ ಗಾಳಿ,ನೀರು,ಬೆಳಕನ್ನು ನೀಡುತ್ತಿದ್ದರೂ ಸಹ ಮಾನವ ಅದನ್ನು ಅರಿಯದೆ ತನ್ನ ಸ್ವಾರ್ಥಕ್ಕಾಗಿ ಆ ಪರಿಸರವನ್ನೇ ನಾಶ ಮಾಡುತ್ತಾ ವಿನಾಶದಂಚಿಗೆ ಸಾಗುತ್ತಿದ್ದಾರೆಂದು ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಪಿ.ಕೆ.ಪುರುಷೋತ್ತಮ ವಿಷಾದಿಸಿದರು.
ಹುಳಿಯಾರಿನಲ್ಲಿ ವಿಶ್ವಪರಿಸರದಿನದ ಅಂಗವಾಗಿ ತಾಲ್ಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ), ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ವಾಸವಿ ವಿದ್ಯಾಸಂಸ್ಥೆ ,ಕನಕದಾಸ ಪದವಿಪೂರ್ವ ಕಾಲೇಜು,ಯೋಗಿನಾರಾಯಣ ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ರೋಟರಿಸಂಸ್ಥೆ ಸಹಯೋಗದಲ್ಲಿ ನಡೆದ ಪರಿಸರ ಸಂರಕ್ಷಣಾ ಅಭಿಯಾನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಪ್ರಕೃತಿ ನಿಯಮದಂತೆ ಮಳೆಗಾಲ,ಚಳಿಗಾಲ,ಬೇಸಿಗೆಕಾಲ ನಿಗದಿತ ಸಮಯದಲ್ಲಿ ಬಂದುಹೋಗುತ್ತಿದ್ದವು ಆದರೆ ದಿನಕಳೆದಂತೆ ಪ್ರಕೃತಿ ನಾಶವಾಗುತ್ತಾ ಬಂದು ಸರಿಯಾಗಿ ಮಳೆಯಾಗದೆ ಬರಗಾಲ ಆವರಿಸಿದೆ, ಗಾಳಿಯಲ್ಲಾ ಮಲಿನವಾಗಿ ಜೀವವಾಯು ಆಮ್ಲಜನಕದ ಕೊರತೆಯುಂಟಾಗಿರುವುದಲ್ಲದೆ, ಭೂಮಿಯ ಮೇಲಿನ ನೀರು ಕಲುಷಿತಗೊಂಡು ಅದರ ಸೇವನೆಯಿಂದ ಅನೇಕ ರೋಗ ರುಜಿನೆಗಳು ಬರುತ್ತಿವೆ ಎಂದರು. ನೈಸರ್ಗಿಕ ಪರಿಸರವನ್ನು ಮಾನವ ಅಭಿವೃದ್ದಿಯ ಹೆಸರಿನಲ್ಲಿ ನಾಶ ಪಡಿಸುತ್ತಾ, ತನಗೆ ಬೇಕಾದ ಕಟ್ಟಡಗಳ ನಿರ್ಮಾಣ ಮಾಡಿಕೊಂಡು ತನ್ನ ವಿನಾಶದ ದಾರಿಯಲ್ಲಿ ಸಾಗುತ್ತಿದ್ದಾನೆ ಎಂದರು.
ಇನ್ನಾದರೂ ಮಾನವರಾದ ನಾವುಗಳು ಎಚ್ಚೆತ್ತು ಪರಿಸರವನ್ನು ಉಳಿಸಿ ಬೆಳೆಸಬೇಕು,ಅದಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಕೇವಲ ಒಂದು ದಿನ ಮಾತ್ರ ಮಾಡದೆ ನಿತ್ಯ ಸಕ್ರಿಯವಾಗಿ ಮಾಡಬೇಕಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಥಾ ಕಾರ್ಯಕ್ರಮ, ಪರಿಸರ ಉಳಿಸುವ ಬಗ್ಗೆ ಬೀದಿ ನಾಟಕ ಸೇರಿದಂತೆ ಇನ್ನಿತರ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕಿದೆ ಎಂದು ತಿಳಿಸಿದರಲ್ಲದೆ, ಪ್ರತಿ ಶಾಲೆಗಳಲ್ಲಿ ಒಂದು ಗಿಡಕ್ಕೆ ಒಬ್ಬ ವಿದ್ಯಾರ್ಥಿಯನ್ನು ನೇಮಿಸಿ ಅದನ್ನು ಬೆಳೆಸುವಂತೆ ಶಿಕ್ಷಕರು ಸಲಹೆ ನೀಡಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪರಿಸರ ಸಂರಕ್ಷಣೆ ಕುರಿತ ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಲಾಯಿತು.ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಗಂಗಾಧರರಾವ್,ಮಾಜಿ ಅಧ್ಯಕ್ಷ ರವೀಶ್,ವಾಸವಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕರಾದ ಮಹೇಶ್,ರಮೇಶ್,ಕನಕದಾಸಶಾಲೆಯ ಕೃಷ್ಣಯ್ಯ,ಪಂಡಿತ್ ಬಸವರಾಜು,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರೋಹಿತಾಕ್ಷ,ಹುಳಿಯಾರು ವಲಯದ ಮೇಲ್ವಿಚಾರಕ ಕಮಲಾಕರ್,ಲೋಕೇಶ್,ಕೃಷಿ ಮೇಲ್ವಿಚಾರಕ ನಾಗಪ್ಪ ಸೇರಿದಂತೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದ ಸಮಾರಂಭದಲ್ಲಿ ಮಂಜುನಾಥ್ ಸ್ವಾಗತಿಸಿ,ನಟರಾಜ್ ನಿರೂಪಿಸಿ, ವಂದಿಸಿದರು.
ಹುಳಿಯಾರಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪರಿಸರ ಸಂರಕ್ಷಣಾ ಅಭಿಯಾನ ಕಾರ್ಯಕ್ರವನ್ನು ರೋಟರಿ ಸಂಸ್ಥೆ ಅಧ್ಯಕ್ಷ ಗಂಗಾಧರರಾವ್ ಉದ್ಘಾಟಿಸಿದರು.ನಿರ್ದೇಶಕ ಪಿ.ಕೆ.ಪುರುಷೋತ್ತಮ,ರವೀಶ್ ಇತರರಿದ್ದಾರೆ. |
ವಿಶ್ವ ಪರಿಸರ ದಿನಚಾರಣೆ ಅಂಗವಾಗಿ ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ ಟಿ.ಆರ್.ಎಸ್.ಆರ್ ಪ್ರೌಧಶಾಲೆಯ ಇಕೋ ಕ್ಲಬ್ ಮಕ್ಕಳಿಂದ ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು. |
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವರಿಂದ ಪರಿಸರ ಸಂರಕ್ಷಣಾ ಅಭಿಯಾನದ ಅಂಗವಾಗಿ ನಡೆದ ಜಾಥಾದಲ್ಲಿ ಯೋಗಿನಾರಾಯಣ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ