ಇಲ್ಲಿನ ಗ್ರಾ.ಪಂ.ಯ ಕಾರ್ಯದರ್ಶಿ ಅಡವೀಶ್ ಕುಮಾರ್ ಪಂಚಾಯ್ತಿ ಸದಸ್ಯರ ಒಪ್ಪಿಗೆಯಿಲ್ಲದೆ ಲಕ್ಷಾಂತರ ರೂ ಹಣವನ್ನು ಡ್ರಾ ಮಾಡಿಕೊಂಡು ದುರುಪಯೋಗ ಮಾಡಿದ್ದಾರೆಂದು ಗ್ರಾ.ಪಂ.ಯ ಸದಸ್ಯರು ಆರೋಪಿಸಿದ್ದಾರೆ.
ಪಂಚಾಯ್ತಿಯಲ್ಲಿ ಸೋಮವಾರದಂದು ನಡೆದ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು , ಪಂಚಾಯ್ತಿಯ ಸದಸ್ಯರ ಗಮನಕ್ಕೆ ತಾರದೇ ಸುಮಾರು ಲಕ್ಷಾಂತರ ರೂಗಳನ್ನು ಪಂಚಾಯ್ತಿ ಖಾತೆಯಿಂದ ಡ್ರಾ ಮಾಡಿರುವುದಾಗಿ ಇಓ ಕೃಷ್ಣನಾಯಕ್ ಅವರ ಸಮಕ್ಷಮದಲ್ಲಿ ಸದ್ಯಸ್ಯರು ದೂರಿದ್ದಾರೆ. ಈ ಹಿಂದೆಯಿದ್ದ ಅಧ್ಯಕ್ಷರು ಹಾಗೂ ಹಾಲಿ ಇರುವ ಕಾರ್ಯದರ್ಶಿ ಅವರು ಸಭೆ ಮುಂದೆ ಚರ್ಚೆಗಿಡದೆ ತಮಗೆ ಮನ ಬಂದಂತೆ ಪಂಚಾಯ್ತಿ ಖಾತೆಯಿಂದ ಹಣ ತೆಗೆದಿರುವುದಾಗಿ ಹಾಗೂ ಯಾವುದೇ ರೀತಿಯ ಬಿಲ್,ಓಚರ್ ಗಳನ್ನು ತಮಗೆ ತೋರಿಸದೆ, ದಿನವಹಿ ಪುಸ್ತಕದಲ್ಲೂ ಸರಿಯಾಗಿ ನಮೋದಿಸದೇ ಇರುವುದರಿಂದ ಹಣದ ದುರುಪಯೋಗ ಮಾಡಿರಬಹುದೆಂದು ಎಂದು ಸದಸ್ಯರು ಇಓ ಅವರಿಗೆ ತಿಳಿಸಿದರು.
ಪಂಚಾಯ್ತಿಯ ಅಭಿವೃದ್ದಿ ಕಾರ್ಯಗಳಿಗೆ ನೆರವಾಗಲೆಂದು ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಅದನ್ನು ಪಟ್ಟಣದ ಸಮಸ್ಯೆಗಳನ್ನು ಬಗೆ ಹರಿಸಲು ಬಳಸುವ ಬದಲು ತಮ್ಮಿಷ್ಟದಂತೆ ಖರ್ಚು ಮಾಡಿದ್ದಾರೆ. ಇದಕ್ಕೆ ಸರಿಯಾದ ಲೆಖ್ಖಪತ್ರವಿಟ್ಟಿಲ್ಲ, ಈರೀತಿ ಮಾಡುವುದರಿಂದ ಪಂಚಾಯ್ತಿಗೆ ತುಂಬಲಾರದ ನಷ್ಟವಾಗುವುದಲ್ಲದೆ, ಜನಪ್ರತಿನಿಧಿಗಳಾದ ನಾವು ಜನರಿಂದ ಬೈಯಿಸಿ ಕೊಳ್ಳಬೇಕಾಗುತ್ತದೆ,ಪಂಚಾಯ್ತಿಯ ಮಾನ ಹರಾಜಾಗುತ್ತದೆ ಎಂದು ದೂರಿದ್ದಾರೆ.
ಹುಳಿಯಾರು ಗ್ರಾ.ಪಂ. ಕಾರ್ಯದರ್ಶಿ ಸದಸ್ಯರ ಗಮನಕ್ಕೆ ತರದೇ ಲಕ್ಷಾಂತರ ಹಣ ದುರುಪಯೋಗ ಮಾಡಿದ್ದಾರೆಂದು ಆರೋಪಿಸಿದ ಸದಸ್ಯರು ಇಓ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. |
ಕಾರ್ಯದರ್ಶಿ ಪ್ರತಿಕ್ರಿಯೆ: ತಾವು ಯಾವುದೇ ಹಣವನ್ನು ದುರುಪಯೋಗ ಮಾಡಿಲ್ಲ, ಪಂಚಾಯ್ತಿಗೆ ಈ ಹಿಂದೆ ಎಲೆಕ್ಟ್ರಿಕಲ್ ಸಾಮಗ್ರಿ ಸೇರಿದಂತೆ ಇತರ ವಸ್ತುಗಳನ್ನು ತಂದಿದ್ದು ಅವುಗಳ ಸಾಲ ಹಾಗೆಯೆ ಉಳಿದಿತ್ತು ,ಈಗ ಪುನ: ವಸ್ತುಗಳನ್ನು ತರಬೇಕಿದ್ದು ಅದಕ್ಕಾಗಿ ಈ ಹಿಂದಿನ ಸಾಲವನ್ನು ಅಂಗಡಿಯವರಿಗೆ ಕೊಡುವ ಸಲುವಾಗಿ ಈ ಹಣ ಡ್ರಾ ಮಾಡಿರುವುದಾಗಿ,ಅದಕ್ಕೆ ಸಂಬಂಧಪಟ್ಟ ಎಲ್ಲಾ ಆಧಾರಗಳನ್ನು ತಾವು ಇಟ್ಟಿರುವುದಾಗಿ ತಿಳಿಸಿದರು.
ಇಓ ಮಧ್ಯಸ್ಥಿಕೆ: ಕಾರ್ಯದರ್ಶಿಯವಿರುದ್ದ ಸದಸ್ಯರ ದೂರನ್ನು ಮನಗಂಡ ಇಓ ಮಧ್ಯಸ್ಥಿಕೆವಹಿಸಿ ಕಾರ್ಯದರ್ಶಿಯನ್ನು ವಿಚಾರಿಸಿ ಹಣ ಡ್ರಾ ಮಾಡಿರುವ ಬಗ್ಗೆ ದಾಖಲೆ ಪರಿಶೀಲಿಸಿ ಸದಸ್ಯರನ್ನು ಸಮಾಧಾನ ಪಡಿಸಿದರು. ಯಾವುದೇ ಸರಿಯಾದ ದಾಖಲೆಗಳಿಲ್ಲದೆ ಏಕಾಏಕಿ ಒಬ್ಬರ ಮೇಲೆ ಆರೋಪ ಮಾಡುವುದು ತಪ್ಪಾಗುತ್ತದೆ . ಮೊದಲು ಈ ಬಗ್ಗೆ ತನಿಖೆ ನಡೆಸಬೇಕಿದ್ದು ಅದಕ್ಕಾಗಿ ಶೀಘ್ರದಲ್ಲೆ ತಮ್ಮ ಕಛೇರಿಯಿಂದ ಲೆಖ್ಖಾಧಿಕಾರಿಯನ್ನು ಇಲ್ಲಿಗೆ ಕಳುಹಿಸಿ ಹಣ ದುರುಪಯೋಗವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕರಾರುವಕ್ಕಾಗಿ ತಿಳಿದುಕೊಂಡು ಹಾಗೇನಾದರೂ ಹಣ ದುರುಪಯೋಗವಾಗಿದ್ದಲ್ಲಿ ಅದರಲ್ಲಿ ಯಾರು ಪಾಲುದಾರರಿರುತ್ತಾರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಾಗೂ ಅವರ ವೇತನದಲ್ಲಿ ಅದನ್ನು ಹಿಂಪಡೆಯುವುದಾಗಿ ತಿಳಿಸಿದರು.
ಗದ್ದಲದ ಸಭೆ: ಪಂಚಾಯ್ತಿಯ ಸಭೆಯುದ್ದಕ್ಕೂ ಗದ್ದಲವೇ ಮನೆ ಮಾಡಿದ್ದು,ಒಬ್ಬರ ಮಾತು ಮತ್ತೊಬ್ಬರಿಗೆ ಕೇಳದೆ ಏನು ಹೇಳುತ್ತಾರೆ ಎಂಬುದೆ ತಿಳಿಯದಂತಾಗಿತ್ತು. ಸದಸ್ಯರು ಒಬ್ಬರಾದ ನಂತರ ಒಬ್ಬರಂತೆ ಏರು ದ್ವನಿಯಲ್ಲಿ ಮಾತನಾಡುತ್ತಾ, ಇಓ ಹಾಗೂ ಕಾರ್ಯದರ್ಶಿ ಅವರ ಮೇಲೆ ಹೌಹಾರುತ್ತಿದ್ದರು. ಸಭೆ ಕರೆದ ಉದ್ದೇಶವನ್ನು ಮರೆತು ಕಾರ್ಯದರ್ಶಿಯ ಮೇಲೆ ಕೆಂಗಣ್ಣು ಬೀರುತ್ತಿದ್ದರು. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರೂ ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಮೌನವಹಿಸಿದ್ದರು.
ನೂತನ ಅಧ್ಯಕ್ಷರ ಚೊಚ್ಚಲ ಸಭೆ ಇದಾಗಿದ್ದು ಸದಸ್ಯರಾದ ಅಶೋಕ್ ಬಾಬು,ಜಹೀರ್ ಸಾಬ್,ಪುಟ್ಟರಾಜು,ಗಂಗಣ್ಣ,ಗೀತಾಬಾಬು,ಹೇಮಂತ್,ರಾಘವೇಂದ್ರ,ಶಿವಣ್ಣ,ಅನ್ಸರ್ ಆಲಿ,ವೆಂಕಟಮ್ಮ ಸೇರಿದಂತೆ ಇತರ ಸದಸ್ಯರಿದ್ದರು,
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ